ಮಡಿಕೇರಿ, ಆ.23: ಕೊಡಗಿನ ಭಕ್ತವೃಂದ ಶನಿವಾರ ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಯಿಂದ ಗಣೇಶೋತ್ಸವವನ್ನು ಸರಳ ರೀತಿ ಆಚರಿಸಿದರು. ಕೊರೊನಾ ಮುಂಜಾಗೃತಿಯಿಂದ ಸರಕಾರ ಮತ್ತು ಜಿಲ್ಲಾಡಳಿತ ಸೂಚಿಸಿದ್ದ ಮಾರ್ಗದರ್ಶಿಯನ್ವಯ ಶಿಸ್ತು ಬದ್ಧತೆಯಿಂದ ಗಣಪತಿಯನ್ನು ಪ್ರತಿಷ್ಠಾಪಿಸಿ ನಿನ್ನೆ ಸಂಜೆಯೇ ಬಹಳ ಕಡೆಗಳಲ್ಲಿ ವಿಸರ್ಜಿಸಲಾಯಿತು.ಕೊಡಗು ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ 237 ಕಡೆಗಳಲ್ಲಿ ಗಣಪತಿಯ ಪ್ರತಿಷ್ಠಾಪನೆಯೊಂದಿಗೆ ಪ್ರಥಮ ದಿನವೇ 167 ಉತ್ಸವ ಮೂರ್ತಿಗಳ ವಿಸರ್ಜನೆ ನಡೆದಿದೆ. ಇಂದು ಅಲ್ಲಲ್ಲಿ 13 ಕಡೆ ಗಣೇಶೋತ್ಸವ ಮೂರ್ತಿಗಳ ವಿಸರ್ಜನೆ ನೆರವೇರಿತು.ಮಡಿಕೇರಿ ನಗರದಲ್ಲಿ 28 ಉತ್ಸವ ಮೂರ್ತಿಗಳೊಂದಿಗೆ ತಾ. 22ರಂದು 23 ಕಡೆ ಸರಳ ಆಚರಣೆಯೊಂದಿಗೆ ಗಣಪತಿಯ ವಿಸರ್ಜನೆ ನಡೆಯಿತು. ವಿವಿಧ ಬಡಾವಣೆಯ 5 ಮೂರ್ತಿಗಳ ಉತ್ಸವ ಮುಂದುವರಿದಿದೆ. ಮಡಿಕೇರಿ ಗ್ರಾಮಾಂತರದಲ್ಲಿ 37 ಉತ್ಸವಗಳು ಜರುಗಿದ್ದು, 36 ಕಡೆ ನಿನ್ನೆ ವಿಸರ್ಜನೆ ಮಾಡಲಾಗಿದೆ. 1 ಕಡೆ ಉತ್ಸವ ಮೂರ್ತಿ ಪೂಜೆ ಚೆಟ್ಟಳ್ಳಿಯಲ್ಲಿ ಮುಂದುವರಿದಿದೆ.

ಇಲ್ಲಿನ ಐತಿಹಾಸಿಕ ಕೋಟೆ ಮಹಾಗಣಪತಿ ದೇಗುಲದಲ್ಲಿ ಭಕ್ತಾದಿಗಳು ದರ್ಶನ ಪಡೆಯುವದರೊಂದಿಗೆ ನೂರಾರು ಈಡುಗಾಯಿಯನ್ನು ಒಡೆದು ಹರಕೆ ಹೊತ್ತವರು ಸಂತೃಪ್ತರಾದರು.

ಮಡಿಕೇರಿಯ ವಿಜಯ ವಿನಾಯಕ ದೇವಾಲಯದಲ್ಲಿಯೂ ಭಕ್ತಾದಿಗಳು ತೆರಳಿ ದರ್ಶನ ಪಡೆದರು. ಗಣಹೋಮ ನಡೆಯಿತು.

ಮಡಿಕೇರಿಯ ಕೊಹಿನೂರ್ ರಸ್ತೆಯಲ್ಲಿ ಮೋನಪ್ಪ ವರ್ಕ್‍ಶಾಪ್‍ನಲ್ಲಿ ಹಿಂದೂ ಯುವ ಶಕ್ತಿ ಸಂಘಟನೆಯಿಂದ ಈ ಬಾರಿ ಸರಳ ಆಚರಣೆ ನಡೆಯಿತು. ಪ್ರತಿಷ್ಠಾಪನೆ ಹಾಗೂ ಪೂಜಾ ಸಂದರ್ಭ ಶಾಸಕ ಕೆ.ಜಿ. ಬೋಪಯ್ಯ, ಸಂಘಟನೆಯ ಪದಾಧಿಕಾರಿಗಳಾದ ಸತೀಶ್ ಪೈ, ಹರೇಂದ್ರ, ಬಿ.ಕೆ. ಅರುಣ್ ಕುಮಾರ್, ಜಗದೀಶ್, ಸುಧೀರ್ ಮತ್ತಿತರರು ಹಾಜರಿದ್ದರು.

ವಿವಿಧೆಡೆ ಉತ್ಸವ: ಭಾಗಮಂಡಲ ಸುತ್ತಮುತ್ತ 9 ಕಡೆ ಗಣೇಶೋತ್ಸವ ಮೂರ್ತಿಗಳ ಪೂಜೆಯೊಂದಿಗೆ ಮೊದಲನೆಯ ದಿನ 8 ಕಡೆ ವಿಸರ್ಜನೆ ಮಾಡಲಾಗಿದೆ. ಒಂದೆಡೆ ಗೌರಿ - ಗಣೇಶೋತ್ಸವ ಪೂಜೆ ಮುಂದುವರಿದಿದೆ. ನಾಪೋಕ್ಲು ವ್ಯಾಪ್ತಿಯಲ್ಲಿ ಹಳೆ ತಾಲೂಕುವಿನ ಶ್ರೀ ಭಗವತಿ ಸನ್ನಿಧಿ, ಶ್ರೀ ಮುತ್ತಪ್ಪ ದೇವಾಲಯ ಸೇರಿದಂತೆ 5 ಕಡೆಗಳಲ್ಲಿ ಗೌರಿ - ಗಣೇಶೋತ್ಸವದೊಂದಿಗೆ ನಿನ್ನೆಯೇ ವಿಸರ್ಜನೆಯೂ ನೆರವೇರಿದೆ.

ವೀರಾಜಪೇಟೆ ತಾಲೂಕು

ವೀರಾಜಪೇಟೆ ನಗರದಲ್ಲಿ 27 ಗೌರಿ - ಗಣೇಶೋತ್ಸವ ಮೂರ್ತಿಗಳ ಪ್ರತಿಷ್ಠಾಪನೆಯೊಂದಿಗೆ ಪ್ರಥಮ ದಿನವೇ 14 ಕಡೆಗಳಲ್ಲಿ ಸರಳ ಕಾರ್ಯಕ್ರಮ ಬಳಿಕ ವಿಸರ್ಜಿಸಲಾಗಿದ್ದು, 13 ಕಡೆಗಳಲ್ಲಿ ಉತ್ಸವ ಮುಂದುವರಿದಿದೆ. ವೀರಾಜಪೇಟೆ ಗ್ರಾಮಾಂತರದಲ್ಲಿ 10 ಕಡೆ ಉತ್ಸವ ಏರ್ಪಡಿಸಿ, ನಿನ್ನೆ 6 ಕಡೆ ವಿಸರ್ಜಿಸಲಾಗಿದೆ. 4 ಕಡೆ ಉತ್ಸವ ನಡೆಯುತ್ತಿದೆ.

ಸಿದ್ದಾಪುರ ವ್ಯಾಪ್ತಿಯಲ್ಲಿ 18 ಕಡೆ ಉತ್ಸವ ಮೂರ್ತಿಗಳನ್ನು ಸ್ಥಾಪಿಸಿ, 13 ಕಡೆ ವಿಸರ್ಜನೆ ನಿನ್ನೆ ನಡೆದಿದೆ. ಇಂದು ಒಂದು ಉತ್ಸವ ಮೂರ್ತಿ ವಿಸರ್ಜನೆ ಹಾಗೂ 4 ಕಡೆ ಬಾಕಿ ಉಳಿದಿದೆ.

ಗೋಣಿಕೊಪ್ಪಲು

ಗೋಣಿಕೊಪ್ಪಲು ಸುತ್ತಮುತ್ತ 10 ಗಣೇಶೋತ್ಸವದೊಂದಿಗೆ 2 ಕಡೆ ನಿನ್ನೆ ವಿಸರ್ಜಿಸಿದ್ದು, 8 ಕಡೆ ಪೂಜೆ ಮುಂದುವರಿದಿದೆ. ಪೊನ್ನಂಪೇಟೆÉ ಸುತ್ತಮುತ್ತ 10 ಉತ್ಸವಗಳು ನಡೆದಿದ್ದು,

(ಮೊದಲ ಪುಟದಿಂದ)ಪ್ರಥಮ ದಿವಸ 9 ಮೂರ್ತಿಗಳ ವಿಸರ್ಜನೆಯೊಂದಿಗೆ, ಕಾರ್ಮಾಡುವಿನಲ್ಲಿ ಉತ್ಸವ ಆಚರಣೆ ಸಾಗಿದೆ.

ಶ್ರೀಮಂಗಲ ವ್ಯಾಪ್ತಿಯ ಟಿ.ಶೆಟ್ಟಿಗೇರಿ ಹಾಗೂ ಹುದಿಕೇರಿಯಲ್ಲಿ ಪ್ರತ್ಯೇಕ ಗೌರಿ - ಗಣೇಶೋತ್ಸವದೊಂದಿಗೆ ಪೂಜಾ ಕೈಂಕರ್ಯ ನಡೆಯುತ್ತಿದೆ. ಈ ಮಾಸಾಂತ್ಯಕ್ಕೆ ವಿಸರ್ಜನೆ ಜರುಗಲಿದೆ. ಕುಟ್ಟದಲ್ಲಿ 2 ಕಡೆ ಉತ್ಸವ ಮೂರ್ತಿಗಳನ್ನು ಸ್ಥಾಪನೆ ಮಾಡಲಾಗಿದೆ.

ಶನಿವಾರಸಂತೆ

ಶನಿವಾರಸಂತೆ ಮತ್ತು ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ 21 ಉತ್ಸವಗಳು, ಸೋಮವಾರಪೇಟೆ ಹಾಗೂ ಗ್ರಾಮೀಣ ಭಾಗಗಳಲ್ಲಿ 20 ಉತ್ಸವ ಜರುಗಿದೆ. ಬಹುತೇಕ ಉತ್ಸವ ಮೂರ್ತಿಗಳನ್ನು ಮೊದಲನೆಯ ದಿನ ವಿಸರ್ಜಿಸಿದ್ದು, ಕೆಲವೆಡೆ ಕಾರ್ಯಕ್ರಮ ಮುಂದುವರಿಸಲಾಗಿದೆ.

ಸುಂಟಿಕೊಪ್ಪದ 11 ಕಡೆ ಉತ್ಸವ ನಡೆಯಿತು.

ಕುಶಾಲನಗರ

ಕೊರೊನಾ ಮಹಾಮಾರಿ ಹರಡುವಿಕೆಯ ನಡುವೆ ಗಣೇಶ ಚತುರ್ಥಿ ಅಂಗವಾಗಿ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕೇವಲ 10 ಕಡೆ ಮಾತ್ರ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಯಾವುದೇ ರೀತಿಯ ಅದ್ಧೂರಿ ಆಡಂಬರವಿಲ್ಲದೆ ಪೂಜೆ ಸಲ್ಲಿಸುವುದರೊಂದಿಗೆ ಎಲ್ಲಾ ಮೂರ್ತಿಗಳನ್ನು ಸಾಂಪ್ರದಾಯಿಕವಾಗಿ ವಿಸರ್ಜಿಸಲಾಯಿತು. ಕುಶಾಲನಗರ ಮಹಾಗಣಪತಿ ದೇವಾಲಯದಲ್ಲಿ ಭಕ್ತಾದಿಗಳು ಬೆಳಗಿನಿಂದಲೇ ಬಂದು ಹೆಚ್ಚಿನ ಸಂಖ್ಯೆಯಲ್ಲಿ ಪೂಜೆ ಸಲ್ಲಿಸಿ ತೆರಳುತ್ತಿದ್ದ ದೃಶ್ಯ ಕಂಡುಬಂತು.

ಸೋಮವಾರಪೇಟೆ

ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಗೌರಿ ಗಣಪತಿ ಉತ್ಸವ ಮೂರ್ತಿಗಳ ಪೂಜೋತ್ಸವ ಮತ್ತು ವಿಸರ್ಜನೋತ್ಸವ ಸರಳವಾಗಿ ನೆರವೇರುತ್ತಿವೆ.

ಕೊರೊನಾ ವೈರಸ್ ಆತಂಕದ ಹಿನ್ನೆಲೆ ಎಲ್ಲೆಡೆ ಉತ್ಸವಗಳನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ಕೆಲವೆಡೆ 2 ದಿನಗಳ ಪೂಜೆಯ ಬಳಿಕ ಉತ್ಸವ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.

ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ 20 ಸ್ಥಳಗಳಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಈಗಾಗಲೇ 17 ಕಡೆಗಳಲ್ಲಿ ಯಾವದೇ ಅದ್ಧೂರಿಯಿಲ್ಲದೇ ವಿಸರ್ಜನೋತ್ಸವ ನೆರವೇರಿದೆ. ಕಳೆದ ವರ್ಷ 53 ಕಡೆಗಳಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ 11 ದಿನಗಳ ಕಾಲ ಪೂಜೆ ಸಲ್ಲಿಸಿ, ಅದ್ಧೂರಿಯಾಗಿ ವಿಸರ್ಜನೋತ್ಸವ ನಡೆಸಲಾಗಿತ್ತು.

ಗಣೇಶ ಚತುರ್ಥಿಯಂದು ಪಟ್ಟಣದ ಸೋಮೇಶ್ವರ ದೇವಾಲಯ, ಆಲೇಕಟ್ಟೆ ರಸ್ತೆಯ ಭಾರತೀಯ ಯುವಕ ಸಂಘ, ಕರ್ಕಳ್ಳಿ ಕಟ್ಟೆ ಬಸವೇಶ್ವರ ದೇವಾಲಯ, ಇಗ್ಗೋಡ್ಲು, ಹಟ್ಟಿಹೊಳೆ, ಮಾದಾಪುರ ವಿನಾಯಕ ಯುವಕ ಸಂಘ, ಯಲಕನೂರು, ಬೆಟ್ಟದಳ್ಳಿ, ಹಾನಗಲ್ಲು ಮತ್ತು ಗೋಣಿಮರೂರಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಉತ್ಸವ ಮೂರ್ತಿಗಳ ವಿಸರ್ಜನೆ ನಡೆದಿದೆ.

ಇಂದು ಸೋಮವಾರಪೇಟೆ ಪಟ್ಟಣದ ಸಾರ್ವಜನಿಕ ಗಣಪತಿ ಸೇವಾ ಸಮಿತಿಯ ಉತ್ಸವ ಮೂರ್ತಿಗಳೂ ಸೇರಿದಂತೆ ತಣ್ಣೀರುಹಳ್ಳ, ಅಬ್ಬೂರುಕಟ್ಟೆ, ಚಿಕ್ಕತೋಳೂರು, ತಲ್ತರೆಶೆಟ್ಟಳ್ಳಿ, ಕೂತಿ, ದೇವಾಂಗ ಸಮಾಜದ ವತಿಯಿಂದ ಪ್ರತಿಷ್ಠಾಪಿಸಿದ್ದ ಉತ್ಸವ ಮೂರ್ತಿಗಳನ್ನು ಸರಳವಾಗಿ ವಿಸರ್ಜಿಸಲಾಯಿತು.

ತಾ. 24ರಂದು (ಇಂದು) ಹೊಸಳ್ಳಿ, ದೊಡ್ಡಹಣಕೋಡು, ಪಟ್ಟಣದ ಬಸವೇಶ್ವರ ದೇವಾಲಯಗಳಲ್ಲಿ ಪ್ರತಿಷ್ಠಾಪಿಸಿರುವ ಉತ್ಸವ ಮೂರ್ತಿಗಳ ವಿಸರ್ಜನೋತ್ಸವ ನಡೆಯಲಿದೆ.

ಸಂಪಾಜೆ

ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ಗಣೇಶ ಚೌತಿಯಂದು ಬೆಳಿಗ್ಗೆ ಗಣ ಹೋಮ, ಕದಿರು ವಿತರಣೆ ಸೀಮಿತ ಭಕ್ತರೊಂದಿಗೆ ಸಾಂಕೇತಿಕವಾಗಿ ನಡೆಯಿತು.

8.00 ಗಂಟೆಗೆ ಗಣಪತಿ ಹೋಮ, 9.00 ಗಂಟೆಯ ನಂತರ ಕದಿರು ಕೊಡುವ ಕಾರ್ಯಕ್ರಮವನ್ನು ನೆರವೇರಿಸಿ, ನಂತರ ಸಂಪಾಜೆ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ಗೌರಿ ಗಣೇಶನ ಮೂರ್ತಿಯನ್ನು ದೈವಿಕ ವಿಧಿ ವಿಧಾನದಲ್ಲಿ ಸ್ಥಾಪಿಸಿ ಪೂಜಿಸಲಾಯಿತು, ಸಂಪಾಜೆಯ ವಿವಿಧ ಭಜನಾ ತಂಡಗಳಿಂದ ಭಜನೆ ಕಾರ್ಯಕ್ರಮ ನಡೆಯಿತು ಸಂಜೆ 4.30 ಗಂಟೆಗೆ ಸರಿಯಾಗಿ ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬಳಿಯ ಹೊಳೆಯಲ್ಲಿ ವಿಸರ್ಜನೆ ಮಾಡಲಾಯಿತು, ಸೀಮಿತ ಭಕ್ತರೊಂದಿಗೆ ಸಾಮಾಜಿಕ ಅಂತರದೊಂದಿಗೆ ಸಾಂಕೇತಿಕವಾಗಿ ಕಾರ್ಯಕ್ರಮ ನಡೆಯಿತು.

ಕಾಟಕೇರಿ ಪರಿಸರ ಸ್ನೇಹಿ ಗಣಪ

ಕಾಟಕೇರಿಯ ಕೂರನ ಬಾಣೆಯ ಚಂದನ್, ರಕ್ಷಿತ್, ಪ್ರಜಿತ್ ಸ್ವತಃ ಮಣ್ಣಿನಿಂದ ಪರಿಸರ ಸ್ನೇಹಿ ಗಣಪತಿಯನ್ನು ಮಾಡಿ ಹೂಗಳಿಂದ ಅಲಂಕರಿಸಿ, ಪೂಜೆ ಸಲ್ಲಿಸಿ ಗಣೇಶೋತ್ಸವವನ್ನು ಸಂಭ್ರಮಿಸಿದರು.

ಬನ್ನಿ ಮಂಟಪ

ಮಡಿಕೇರಿ ಸ್ವಸ್ತಿಕ್ ಯುವ ವೇದಿಕೆ ವತಿಯಿಂದ ಹತ್ತೊಂಬತ್ತನೇ ವರ್ಷದ ಗಣೇಶ ಮೂರ್ತಿಯನ್ನು ಬನ್ನಿ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.

ಚೆಟ್ಟಳ್ಳಿ

ಗೌರಿಗಣೇಶೋತ್ಸವದ ಅಂಗವಾಗಿ ಚೆಟ್ಟಳ್ಳಿಯ ಶ್ರೀಮಂಗಲ ಶ್ರೀಭಗವತಿ ದೇವಾಲಯಲ್ಲಿ ವೀಘ್ನೇಶನಿಗೆ ಊರಿನವರ ಸಮ್ಮುಖದಲ್ಲಿ ವಿಶೇಷ ಅಲಂಕಾರದೊಂದಿಗೆ ಪೂಜೆ ಸಲ್ಲಿಸಲಾಯಿತು. ದೇವಾಲಯ ಸಮಿತಿಯ ಅಧ್ಯಕ್ಷÀ ಮುಳ್ಳಂಡ ತಿಮ್ಮಯ್ಯ, ದೇವಾಲಯ ತಕ್ಕರಾದ ಮುಳ್ಳಂಡ ಸೂರುಗಣಪತಿ ಊರಿನವರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

ಗುಡ್ಡೆಹೊಸೂರು

ಇಲ್ಲಿನ ಸಮುದಾಯ ಭವನದಲ್ಲಿ ಗಣೇಶ ಮೂರ್ತಿಯನ್ನು ಸ್ಥಾಪಿಸಿ ಸಂಜೆ ವೇಳೆಗೆ ವಿಸರ್ಜಿಸಲಾಯಿತು. ಈ ಸಂದರ್ಭ ಗ್ರಾಮದ ನೂರಾರು ಮಂದಿ ಈ ಪೂಜಾ ಕಾರ್ಯದಲ್ಲ್ಲಿ ಭಾಗವಹಿಸಿದ್ದರು. ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭ ದೇವಸ್ಥಾನ ಸಮಿತಿಯ ಸದಸ್ಯರು ಹಾಜರಿದ್ದರು.

ಪೆÇನ್ನಂಪೇಟೆ

ಶ್ರೀ ಬಸವೇಶ್ವರ ದೇವಸ್ಥಾನ ಸೇರಿದಂತೆ ಪೆÇನ್ನಂಪೇಟೆ ವ್ಯಾಪ್ತಿಯ 8 ಕಡೆಗಳಲಿ ಪ್ರತಿಷ್ಠಾಪನೆ ಮಾಡಿದ್ದ ಗೌರಿ ಗಣೇಶ ಮೂರ್ತಿಯ ವಿಸರ್ಜನೆ ಯನ್ನು ಇಲ್ಲಿನ ಗೌರಿ ಕೆರೆಯಲ್ಲಿ ನೆರವೇರಿಸಲಾಯಿತು. ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ಸರಳವಾಗಿ ವಿಸರ್ಜನೆಯನ್ನು ಮಾಡಲಾಯಿತು.

ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ಸಲುವಾಗಿ ಎಲ್ಲಾ ಸಂಘದವರು ಒಟ್ಟಿಗೆ ತೆರಳದೆ, ಪ್ರತ್ಯೇಕವಾಗಿ ಸೀಮಿತ ಸಂಖ್ಯೆಯ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕೃಷ್ಣ ನಗರದ ಕೃಷ್ಣ ಯುವಕ ಸಂಘ, ಶಿವ ಕಾಲೋನಿಯ ಶಿವ ಯುವಕ ಸಂಘ, ಕಾಟ್ರಕೊಲ್ಲಿಯ ಗೆಳೆಯರ ಬಳಗ, ಮುಖ್ಯ ರಸ್ತೆಯಲ್ಲಿರುವ ವಿಘ್ನೇಶ್ವರ ವಾಹನ ಚಾಲಕ, ಮಾಲೀಕರ ಸಂಘ, ಜೋಡುಬೀಟಿಯ ವಿನಾಯಕ ಯುವಕ ಸಂಘ, ಮಹಾತ್ಮ ಗಾಂಧಿ ನಗರದ ಯುವ ಶಕ್ತಿ ಯುವಕರ ಸಂಘ ಹಾಗೂ ಇದೇ ಮೊದಲ

(ನಾಲ್ಕನೇ ಪುಟದಿಂದ) ಬಾರಿಗೆ ಕಾವೇರಿ ನಗರದ ಚಿಕ್ಕ ಮಕ್ಕಳು ಗೌರಿ ಪ್ರತಿಷ್ಠಾಪನೆ ಮಾಡಿದ್ದರು. ಪೆÇನ್ನಂಪೇಟೆ ಠಾಣಾಧಿಕಾರಿ ಡಿ. ಕುಮಾರ್ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.

ನಾಪೆÇೀಕ್ಲು

ಕೋವಿಡ್ 19 ಹಿನ್ನಲೆಯಲ್ಲಿ ಈ ವರ್ಷದ ಗಣೇಶೋತ್ಸವವನ್ನು ನಾಪೆÇೀಕ್ಲುವಿನಲ್ಲಿ ಸರಳವಾಗಿ ಆಚರಿಸಲಾಯಿತು.

ಪ್ರತೀ ವರ್ಷ ಸ್ಥಳೀಯ ಶ್ರೀ ರಾಮ ಮಂದಿರ, ನಾಲ್ಕುನಾಡು ಗಣೇಶೋತ್ಸವ ಸಮಿತಿ, ಶ್ರೀ ಪೆÇನ್ನು ಮುತ್ತಪ್ಪ, ಕಕ್ಕುಂದಕಾಡು ಶ್ರೀ ವೆಂಕಟೇಶ್ವರ, ಇಂದಿರಾನಗರದ ಶ್ರೀ ವಿವೇಕಾನಂದ ಸಂಘದ ವತಿಯಿಂದ ಅದ್ಧೂರಿಯಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಒಂದು ವಾರಗಳ ಕಾಲ ಪೂಜೆಯೊಂದಿಗೆ ವಿವಿಧ ರಸಮಂಜರಿ ಕಾರ್ಯಕ್ರಮ, ಅನ್ನದಾನಗಳನ್ನು ನಡೆಸಲಾಗುತ್ತಿತ್ತು. ಅನಂತರ ಒಂದೇ ದಿನ 5 ಮೂರ್ತಿಗಳನ್ನು ವಿಶೇಷಾಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಪಟ್ಟಣದಲ್ಲಿ ಮೆರವಣಿಗೆ ನಡೆಸುವದರ ಮೂಲಕ ಕಾವೇರಿ ನದಿಯಲ್ಲಿ ವಿಸರ್ಜಿಸಲಾಗುತ್ತಿತ್ತು.

ಆದರೆ ಈ ಬಾರಿ ತಾ. 22ರ ಚೌತಿ ದಿನ ಎಲ್ಲಾ ಸಮಿತಿಗಳ ಆಶ್ರಯದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜಿಸಿ ಅಪರಾಹ್ನ ಸರಳವಾಗಿ ವಿಸರ್ಜಿಸುವದರೊಂದಿಗೆ ಸಾಂಪ್ರದಾಯಿಕ ಗಣೇಶೋತ್ಸವ ನಡೆಯಿತು.

ವೀರಾಜಪೇಟೆ

ವೀರಾಜಪೇಟೆಯಲ್ಲಿ ಮಂಕು ಕವಿದ ವಾತಾವರಣದಲಿ ಯಾವುದೇ ಆಡಂಬರವಿಲ್ಲದೆ ಸರಳವಾಗಿ ಗಣೇಶನ ಮೂರ್ತಿಯ ಪ್ರತಿಷ್ಠಾಪನೆ ನಡೆಯಿತು.

ಗೌರಿಗಣೇಶ ಪ್ರತಿಷ್ಠಾಪನೆ ಮಾಡಿದ 21 ಸ್ಥಳಗಳಲ್ಲಿ ಅಪರಾಹ್ನ ಮಹಾಪೂಜಾ ಸೇವೆಯನ್ನು ಕೈಗೊಳ್ಳಲಾಗಿತ್ತು. ಕೋವಿಡ್-19 ರ ಸರಕಾರದ ಮಾರ್ಗ ಸೂಚಿಯಂತೆ ಪ್ರತಿಷ್ಠಾಪನಾ ಸ್ಥಳದಲ್ಲಿ ಭಕ್ತಾದಿಗಳನ್ನು ನಿಯಂತ್ರಿಸಲಾಗಿತ್ತು. ವಿವಿಧ ಪ್ರತಿಷ್ಠಾಪನಾ ಸ್ಥಳಗಳಲ್ಲಿ ಥರ್ಮಲ್‍ಸ್ಕ್ರೀನ್, ಸ್ಯಾನಿಟೈಸರ್ ಹಾಗೂ ಮಾಸ್ಕ್ ಬಳಕೆ ಕಡ್ಡಾಯವಾಗಿತ್ತು.

ವೀರಾಜಪೇಟೆ ಪಟ್ಟಣದಲ್ಲಿ 21 ಉತ್ಸವ ಸಮಿತಿಗಳ ಪೈಕಿ 8 ಉತ್ಸವ ಮೂರ್ತಿಗಳನ್ನು ಇಲ್ಲಿನ ಗೌರಿಕೆರೆಯಲ್ಲಿ ಸಂಪ್ರದಾಯದಂತೆ ವಿಸರ್ಜನೆ ನೆರವೇರಿಸಿದರು. ಖಾಸಗಿ ಕೆರೆಯಲ್ಲಿ ವಿಸರ್ಜನೋತ್ಸವವನ್ನು ನಡೆಸಿದರು. 8 ಉತ್ಸವ ಸಮಿತಿಗಳು ತಾ24 (ಇಂದು) ಇಲ್ಲಿನ ಗೌರಿಕೆರೆಯಲ್ಲಿ ವಿಸರ್ಜನೋತ್ಸವಕ್ಕೆ ಸಿದ್ಧತೆ ನಡೆಸಿವೆ. ನಂತರ ಸೆ.1ರಂದು ಅನಂತಪದ್ಮನಾಭ ವೃತದ ದಿನ 4 ಉತ್ಸವ ಸಮಿತಿಗಳು ಗೌರಿ ಗಣೇಶನ ವಿಸರ್ಜನೋತ್ಸವವನ್ನು ನಡೆಸಲು ಪೂರ್ವ ಸಿದ್ಧತೆ ನಡೆಸಿದ್ದಾರೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿಯಿಂದ ಗೌರಿಕೆರೆ ನೀರಿನಿಂದ ಭರ್ತಿಯಾಗಿರುವುದರಿಂದ ಇಲ್ಲಿನ ಪಟ್ಟಣ ಪಂಚಾಯಿತಿಯಿಂದ ಗೌರಿ ಗಣೇಶನ ಮೂರ್ತಿಗಳ ವಿಸರ್ಜನೆಗಾಗಿ ತೆಪ್ಪದ ಸೌಲಭ್ಯ ಒದಗಿಸಲಾಗಿತ್ತು.