ಮಡಿಕೇರಿ, ಆ. 24: ದಕ್ಷಿಣಕೊಡಗಿನಲ್ಲಿ ಮಳೆಗಾಲದ ಸಂದರ್ಭ ಲಕ್ಷ್ಮಣ ತೀರ್ಥ ನದಿ ಪ್ರವಾಹದಿಂದ ನಿಟ್ಟೂರು ಹಾಗೂ ಬಾಳೆಲೆ ಗ್ರಾ.ಪಂ. ವ್ಯಾಪ್ತಿಯ ಹಲವಷ್ಟು ರೈತರ ಜಮೀನು ಮುಳುಗಡೆಯೊಂದಿಗೆ ಅಪಾರ ನಷ್ಟ ಸಂಭವಿಸುತ್ತಿದೆ. ಈ ದಿಸೆಯಲ್ಲಿ ಶಾಶ್ವತವಾಗಿ ಸಮಸ್ಯೆಗೆ ಪರಿಹಾರದೊಂದಿಗೆ, ರೈತರಿಗೆ ನಷ್ಟದ ಸಮೀಕ್ಷೆ ನಡೆಸಿ ಸರಕಾರದಿಂದ ಸೂಕ್ತ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಬೇಡಿಕೆ ಮಂಡಿಸಿದ್ದಾರೆ.ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಬಾಳೆಲೆಗೆ ಭೇಟಿ ನೀಡಿದ ಸಂದರ್ಭ ಜಿ.ಪಂ. ಮಾಜಿ ಸದಸ್ಯ ರಂಜನ್ ಚಂಗಪ್ಪ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಅಲ್ಲದೆ ಲಕ್ಷ್ಮಣ ತೀರ್ಥ ನದಿ ಪ್ರವಾಹದಿಂದ ಆ ಭಾಗದ ರೈತರು ನಿರಂತರ ತೊಂದರೆ ಅನುಭವಿಸುತ್ತಿರುವ ಬಗ್ಗೆ ಗಮನ ಸೆಳೆದರಲ್ಲದೆ, ಲಕ್ಷ್ಮಣ ತೀರ್ಥ ನದಿಯ ಹೂಳೆತ್ತುವಂತೆ ಒತ್ತಾಯಿಸಿದರು. ನಿರಂತರ ಸಮಸ್ಯೆ : ದಕ್ಷಿಣ ಕೊಡಗಿನ ಲಕ್ಷ್ಮಣತೀರ್ಥ ನದಿಗೆ ಕೀರೆಹೊಳೆ ಸಹಿತ ಇತರ ತೋಡುಗಳ ನೀರು ಸೇರ್ಪಡೆಯಿಂದ ಬಾಳೆಲೆ, ದೇವನೂರು, ಕೆಸ್ತೂರು ಮೂಲಕ ಹುಣಸೂರು ತಾಲೂಕಿನ ಹನಗೋಡು ವ್ಯಾಪ್ತಿಯ ತನಕ ಸುಮಾರು 15 ಕಿ.ಮೀ. ನಾಗರಹೊಳೆ ಅಭಯಾರಣ್ಯದೊಳಗೆ ಈ ನದಿ ಹರಿಯಲಿದೆ. ದಟ್ಟ ಕಾನನ ನಡುವೆ ಹೂಳು ತುಂಬಿಕೊಂಡು ಮಳೆಗಾಲದಲ್ಲಿ ಪ್ರತಿಕೂಲ ಪರಿಣಾಮ ಬೀರುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡರು. ಮಳೆ ಕಡಿಮೆ : ಬಾಳೆಲೆ ಹೋಬಳಿಗೆ ವರ್ಷಂಪ್ರತಿ ಕೊಡಗಿನ ಇತರೆಡೆಗಿಂತಲೂ ಕಡಿಮೆ ಮಳೆಯಾಗುತ್ತಿದೆ. ಆದರೆ ನದಿ ಪ್ರವಾಹ ಮತ್ತು ಕೇರಳ ಭಾಗದ ಗಾಳಿಯ ಪರಿಣಾಮ ಅಪಾರ ಕೃಷಿ ನಷ್ಟದೊಂದಿಗೆ ಬೃಹತ್ ಮರಗಳು ನೆಲ ಕಚ್ಚುತ್ತಿದೆ ಎಂದು ಗ್ರಾಮಸ್ಥರು ನೆನಪಿಸಿದರು.
ತೋಟಗಳಲ್ಲಿ ತೊಡಕು : ಈ ರೀತಿ ಕಾಫಿ ತೋಟಗಳಲ್ಲಿ ಸಿಲ್ವರ್ ಸೇರಿದಂತೆ ಕಾಡುಮರಗಳು ಬಿದ್ದಿದ್ದರೂ, ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯ ನಿರ್ಬಂಧದಿಂದ ರೈತ - ಬೆಳೆಗಾರರಿಗೆ ಬಿದ್ದ ಮರ ತೆರವುಗೊಳಿಸಲಾಗದೆ, ಇನ್ನಷ್ಟು ನಷ್ಟ ಅನುಭವಿಸುವಂತಾಗಿದೆ ಎಂದು ಮೇಲ್ಮನೆ ಸದಸ್ಯರಿಗೆ ಮನವರಿಕೆ ಮಾಡಿಕೊಟ್ಟರು.
ಅಗತ್ಯ ಕ್ರಮ ಭರವಸೆ : ಗ್ರಾಮಸ್ಥರ ಅಹವಾಲು ಆಲಿಸಿದ ಸುನಿಲ್ ಸುಬ್ರಮಣಿ, ಶೀಘ್ರವೇ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕೊಡಗಿನ ಶಾಸಕರು, ಸಂಸದರೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗಮನ ಸೆಳೆದು ಜನತೆಯ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವದಾಗಿ ಭರವಸೆ ನೀಡಿದರು. ಈ ವೇಳೆ ಎ.ಎನ್. ನವೀನ್, ಎ.ಎಂ. ಮುತ್ತಪ್ಪ, ಸುಬ್ಬಯ್ಯ, ಸುಧೀರ್, ಪ್ರವೀಣ್, ವಸಂತ್, ಜ್ಯೋತಿ, ಉತ್ತಪ್ಪ, ಬಾಳೆಲೆ ಪೊಲೀಸ್ ಸಹಾಯಕ ಠಾಣಾಧಿಕಾರಿ ವೆಂಕಟೇಶ್ ಮೊದಲಾದವರು ಹಾಜರಿದ್ದರು.