ಕುಶಾಲನಗರ, ಆ. 23: ಕುಶಾಲನಗರ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಹಾಗೂ ತಪಾಸಣಾ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಪ್ರಯೋಗಾಲಯ ಮತ್ತು ತುರ್ತು ಚಿಕಿತ್ಸಾ ಘಟಕಗಳು ನಿರ್ಮಾಣವಾಗುತ್ತಿವೆ.

ಕುಶಾಲನಗರ ಸರಕಾರಿ ಆಸ್ಪತ್ರೆಗೆ ಅವಶ್ಯಕತೆ ಇದ್ದ ರಕ್ತ ಪರೀಕ್ಷಾ ಘಟಕ ಇಂದಿನಿಂದ ಲೋಕಾರ್ಪಣೆಗೊಳ್ಳಲಿದೆ. ಅಂದಾಜು 5 ಲಕ್ಷ ರೂ. ಮೌಲ್ಯದ ಈ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ರಕ್ತ ಪರೀಕ್ಷೆ ಘಟಕದ ಸಲಕರಣೆಗಳನ್ನು ಸ್ಥಳೀಯ ಪಟ್ಟಣ ಪಂಚಾಯಿತಿ ಮೂಲಕ ಕಲ್ಪಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ತೀವ್ರ ಗಾಯಾಳುಗಳಿಗೆ ತುರ್ತು ಆಮ್ಲಜನಕ ಒದಗಿಸುವ ವಿಶೇಷ ಘಟಕ ಕೂಡ ಈ ಆಸ್ಪತ್ರೆಯಲ್ಲಿ ನಿರ್ಮಾಣ ಗೊಳ್ಳುತ್ತಿದೆ. 4 ಬೆಡ್ ಗಳ ಸೌಲಭ್ಯ ಹೊಂದಿರುವ ಈ ವಿಭಾಗ ಸದ್ಯದಲ್ಲಿಯೇ ಪ್ರಾರಂಭಗೊಳ್ಳಲಿದೆ ಎಂದು ಆಸ್ಪತ್ರೆ ಯ ವೈದ್ಯರಾದ ಡಾ. ಮಧುಸೂದನ್ ‘ಶಕ್ತಿ’ಗೆ ಮಾಹಿತಿ ಒದಗಿಸಿದ್ದಾರೆ.