ಕುಶಾಲನಗರ, ಆ. 24 : ನಗರ ಪಟ್ಟಣ ಪ್ರದೇಶಗಳಲ್ಲಿ ಜನಗಳ ಹಿತದೃಷ್ಟಿಯಿಂದ ಉದ್ಯಾನವನಗಳನ್ನು ನಿರ್ಮಿಸಿ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದನ್ನು ಕಂಡಿದ್ದೇವೆ; ಕೇಳಿದ್ದೇವೆ. ಆದರೆ ಕುಶಾಲನಗರ ಪಟ್ಟಣ ಪಂಚಾಯಿತಿ ವತಿಯಿಂದ ಇಲ್ಲಿನ ಕಾವೇರಿ ಬಡಾವಣೆಯಲ್ಲಿ ದನಗಳಿಗಾಗಿಯೇ ಒಂದು ಉದ್ಯಾನವನ್ನು ನಿರ್ಮಿಸಿದ್ದಾರೆ. ಆ ಉದ್ಯಾನದಲ್ಲಿ ಯಾವಾಗಲೂ ಬರೀ ಹುಲ್ಲು, ಕಸ - ಕಡ್ಡಿಗಳೇ ಬೆಳೆದಿದ್ದು ವಿಷಪೂರಿತ ಹಾವು ಹಲ್ಲಿಗಳು ವಾಸವಿರುವುದರಿಂದ ಅಲ್ಲಿ ಜನರ ಪ್ರವೇಶ ಸಹಜವಾಗಿಯೇ ನಿಷಿದ್ಧವಾದ ಕಾರಣ ಅನಾಯಾಸವಾಗಿಯೇ ದನಗಳು ಅಲ್ಲಿ ಆಶ್ರಯ ಪಡೆಯುತ್ತವೆ. ಹಾಗಾಗಿ ಕಾವೇರಿ ಬಡಾವಣೆಯ ಉದ್ಯಾನದಲ್ಲೂ ಕೂಡ ಹೈನುಗಾರಿಕೆಗೆ ಎಂದು ದನಗಳನ್ನು ಸಾಕಿರುವವರ ಪಾಲಿಗೆ ಈ ಉದ್ಯಾನ ಕಾಮಧೇನುವಾಗಿದೆ. ಕಳೆದ ಹತ್ತು ವರ್ಷಗಳ ಹಿಂದೆ ಕುಶಾಲನಗರದ ಅಳಿಯ ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ ಶಾಸಕ ರಂಜನ್ ಪ್ರಯತ್ನ ದಿಂದಾಗಿ ಮುಖ್ಯಮಂತ್ರಿಗಳ ಅನುದಾನದಿಂದ ರೂ.20 ಲಕ್ಷ ಹಣ ಕುಶಾಲನಗರ ಪಂಚಾಯಿತಿಗೆ ಬಂದಿತ್ತು. ಆ ಹಣವನ್ನು ಕಾವೇರಿ ಬಡಾವಣೆಯಲ್ಲಿ ವಿಶೇಷವಾಗಿ ಉದ್ಯಾನ ವನ ನಿರ್ಮಿಸಲು ಬಳಸಲಾಗಿತ್ತು.
ಹಾಗೆಯೇ ಇಡೀ ಕುಶಾಲನಗರದಲ್ಲಿ ಮೊದಲು ಎಂಬಂತೆ ಈ ಉದ್ಯಾನವನ ಅಂದ ಚೆಂದವಾಗಿ ನಿರ್ಮಾಣಗೊಂಡು ಸ್ಥಳೀಯ ಹಿರಿಯ ನಾಗರಿಕರ, ಮಕ್ಕಳ ಮತ್ತು ಮಹಿಳೆಯರ ಪ್ರಮುಖ ವಿಹಾರ ಕೇಂದ್ರವಾಗಿ ಈ ಉದ್ಯಾನ ಮಾರ್ಪಟ್ಟಿತ್ತು. ಆದರೆ ಈ ಅಂದ -ಚೆಂದ ಬಹಳ ದಿನ ಉಳಿಯಲಿಲ್ಲ. ಬೇಜವಾಬ್ದಾರಿ ಪ್ರದರ್ಶಿಸುವ ಸ್ಥಳೀಯ ಜನಪ್ರತಿನಿಧಿಗಳ, ಇಚ್ಛಾಶಕ್ತಿ ಪ್ರದರ್ಶಿಸದ ಪಂಚಾಯತಿ ಅಧಿಕಾರಿಗಳ ಅಸಡ್ಡೆಯಿಂದಾಗಿ ಈ ಉದ್ಯಾನ ನಿರ್ವಹಣೆ ಇಲ್ಲದೇ ಬಳಲಿ ಬಾಡಿತು. ಇಲ್ಲಿ ಅಳವಡಿಸಿದ್ದ ಕೊಳವೆ ಬಾವಿಯಲ್ಲಿ ನೀರು ಸ್ಥಗಿತಗೊಂಡ ನೆಪವೊಡ್ಡಿ ಪಂಚಾಯಿತಿ ಅಧಿಕಾರಿಗಳು ಪರ್ಯಾಯ ನೀರಿನ ವ್ಯವಸ್ಥೆ ಕಲ್ಪಿಸಲು ಆಸಕ್ತಿ ತೋರದಾದರು. ಮಳೆ ಬಂದಾಗ ಮಳೆ ನೀರಿಗೆ ಚಿಗುರೊಡೆದು ಎಲೆ ನಳ ನಳಿಸುವ ಇಲ್ಲಿನ ಗಿಡಗಳು ಬಿಸಿಲಿಗೆ ಒಣಗ ತೊಡಗಿದವು. ಇದೀಗ ಮಳೆಯ ನೀರಿಗೆ ಒಂದಷ್ಟು ಹಸಿರನ್ನು ಹೊದ್ದು ನಿಂತ ಉದ್ಯಾನ ಬೀಡಾಡಿ ದನಗಳಿಗೆ ಮೇವಿನ ತಾಣವಾಗಿದೆ. ಜನ ಇಲ್ಲಿ ಕಾಲಿಡಲು ಹೆದರುವ ದುಸ್ಥಿತಿ ನಿರ್ಮಾಣವಾಗಿದೆ.
ಸುಂದರವಾಗಿದ್ದ ಉದ್ಯಾನವನ ಭ್ರಷ್ಟಾಚಾರ ತುಂಬಿರುವ ಪಂಚಾಯಿತಿ ಕಚೇರಿಯಷ್ಟೇ ಬಡವಾಗಿದ್ದು ಯಾರಿಗೂ ಬೇಡವಾಗಿದೆ. ಜಲಮಂಡಳಿಯ ಅನುಪಯುಕ್ತ ನೀರು ಸಾವಿರಾರು ಲೀಟರ್ ನಷ್ಟು ದಿನನಿತ್ಯವೂ ಪೆÇೀಲಾಗಿ ಇದೇ ಉದ್ಯಾನದ ಮೇಲೂ ರಸ್ತೆಯ ಚರಂಡಿಯಲ್ಲಿ ಹರಿವ ನೀರನ್ನೇ ಈ ಉದ್ಯಾನಕ್ಕೆ ಬಳಸಿಕೊಳ್ಳುವ ಎಲ್ಲಾ ಅವಕಾಶಗಳು ಇದ್ದರೂ ಕೂಡ ಈಗ ಇದು ಯಾರಿಗೂ ಬೇಡವಾಗಿದೆ. ಇನ್ನಾದರೂ ಶಾಸಕರು ಇತ್ತ ಧಾವಿಸಿ ತಾವೇ ಕೊಡಮಾಡಿದ ಅನುದಾನದ ಈ ಉದ್ಯಾನವನ ಉಳಿಸಿ ಮಹಿಳೆಯರು, ಮಕ್ಕಳಿಗೆ ಉಪಯೋಗವಾಗಲು ಪ್ರಯತ್ನಿಸಬೇಕಿದೆ.
-ಮೂರ್ತಿ