ಮಡಿಕೇರಿ, ಆ. 24: ತಲಕಾವೇರಿಯ ಬ್ರಹ್ಮಗಿರಿ ಶ್ರೇಣಿಯ ಗಜರಾಜಗಿರಿ ಬೆಟ್ಟ ಕುಸಿತದಿಂದ ಇದೇ ತಾ. 6 ರಂದು ಜೀವಂತ ಭೂಸಮಾಧಿಯೊಂದಿಗೆ; ಕಣ್ಮರೆಯಾಗಿರುವ ಅರ್ಚಕ ಕುಟುಂಬದ ಶಾಂತಾ ಆಚಾರ್ ಹಾಗೂ ಶ್ರೀನಿವಾಸ್ ಪಡ್ಡಿಲಾಯ ಅವರುಗಳ ಯಾವದೇ ಸುಳಿವು ಲಭಿಸದಿರುವ ಬಗ್ಗೆ ಜಿಲ್ಲಾಡಳಿತದಿಂದ ರಾಜ್ಯ ಸರಕಾರಕ್ಕೆ ವಿವರವಾದ ವರದಿ ಸಲ್ಲಿಸಲಾಗಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.ತಲಕಾವೇರಿಯಲ್ಲಿ ಈ ದುರಂತ ಸಂಭವಿಸಿದ ಬೆನ್ನಲ್ಲೇ, ಎನ್‍ಡಿಆರ್‍ಎಫ್ ಹಾಗೂ ಎಸ್‍ಡಿಆರ್‍ಎಫ್ ಸೇರಿದಂತೆ ಕೊಡಗು ಜಿಲ್ಲೆಯ ಪೊಲೀಸ್ ಇಲಾಖೆ, ಪೊಲೀಸ್ ಕ್ಷಿಪ್ರ ಕಾರ್ಯಪಡೆ, ಅರಣ್ಯ ಇಲಾಖೆ, ಕಂದಾಯ ಇಲಾಖೆ, ಅಗ್ನಿಶಾಮಕ ದಳದಿಂದ ಸುದೀರ್ಘ 15 ದಿವಸ ವ್ಯಾಪಕ ಕಾರ್ಯಾಚರಣೆ ನಡೆಸಿದ ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪರಿಣಾಮ ಶೋಧ ಕಾರ್ಯದ ಸಂದರ್ಭ ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕರಾಗಿದ್ದ ಟಿ.ಎಸ್. ನಾರಾಯಣಾಚಾರ್ ಅವರ ಹಿರಿಯ ಸೋದರ ಆನಂದ ತೀರ್ಥ ಸ್ವಾಮೀಜಿ, ಸಹಾಯಕ ಅರ್ಚಕ ರವಿಕಿರಣ್ ಅವರುಗಳ ಮೃತ ಶರೀರ ಲಭಿಸಿರುವ ಅಂಶವನ್ನು ಪ್ರಸ್ತಾಪಿಸಲಾಗಿದೆ.ಆ ಬಳಿಕವೂ ಸತತ 15 ದಿನಗಳ ತನಕ ನಿರಂತರ ಪ್ರಯತ್ನ ನಡೆಸಿದ್ದಲ್ಲದೆ, ಜೆಸಿಬಿ ಹಾಗೂ ಹಿಟಾಚಿ ಯಂತ್ರಗಳನ್ನು ಬಳಸಿ ಮಣ್ಣಿನೊಳಗೆ ಮತ್ತು ಕಾವೇರಿ ನದಿ ಪಾತ್ರದ ಕಾಡುಗಳಲ್ಲಿ ಶೋಧ ಕೈಗೊಂಡಿದ್ದರೂ ಭೂಸಮಾಧಿಯಾಗಿದ್ದ ಐವರು ಅರ್ಚಕ ಕುಟುಂಬ ಸದಸ್ಯರ ಪೈಕಿ ಇಬ್ಬರು ಪತ್ತೆಯಾಗಿಲ್ಲವೆಂದು ಜಿಲ್ಲಾಡಳಿತದಿಂದ ಸರಕಾರದ ಗಮನ ಸೆಳೆಯಲಾಗಿದೆ.
ಕಾರ್ಯಾಚರಣೆ ಸ್ಥಗಿತ : ಅನಿವಾರ್ಯ ಪರಿಸ್ಥಿತಿಯಲ್ಲಿ ತೀರಾ ಅಪಾಯದ ನಡುವೆ ಕಾರ್ಯಾಚರಣೆ ಬಳಿಕವೂ ಶಾಂತಾ ಆಚಾರ್ ಹಾಗೂ ಶ್ರೀನಿವಾಸ್ ಪಡ್ಡಿಲಾಯ ಇಬ್ಬರು ಪತ್ತೆಯಾಗದ ಕಾರಣ, ಕಣ್ಮರೆಯಾಗಿರುವವರ ಕುಟುಂಬ ಸದಸ್ಯರ ಅಭಿಪ್ರಾಯ ಪಡೆದು ಕಾರ್ಯಾಚರಣೆ ನಿಲ್ಲಿಸಿರುವ ಬಗ್ಗೆ ಜಿಲ್ಲಾಡಳಿತ ಸರಕಾರಕ್ಕೆ ಮಾಹಿತಿ ಒದಗಿಸಿದೆ.
ಆ ಮೇರೆಗೆ ಕಣ್ಮರೆಯಾಗಿರುವ ಇಬ್ಬರು ಈಗಾಗಲೇ ಮೃತರಾಗಿರುವ ಇತರ ಮೂವರೊಂದಿಗೆ, ಭೂಸಮಾಧಿ ವೇಳೆ ಸಾವನ್ನಪ್ಪಿರುವ ಸಾಧ್ಯತೆ ಇರುವ ಮೇರೆಗೆ, ಸರಕಾರದಿಂದ ನೊಂದ ಕುಟುಂಬ ಸದಸ್ಯರಿಗೆ ಅಗತ್ಯ ಪರಿಹಾರವನ್ನು ಸರಕಾರ ಕಲ್ಪಿಸುವಂತೆಯೂ ಈ ವರದಿಯಲ್ಲಿ ಕೋರಲಾಗಿದೆ.