ಸೋಮವಾರಪೇಟೆ, ಆ.24: ಇಲಾಖೆಯ ಮೇಲಧಿಕಾರಿಗಳ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ನಂಜನಗೂಡು ತಾಲೂಕಿನ ವೈದ್ಯಾಧಿಕಾರಿ ಎಸ್.ಆರ್. ನಾಗೇಂದ್ರ ಅವರ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಬೇಕೆಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ ಒತ್ತಾಯಿಸಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಪ್ರದೀಪ್, ಕಾರ್ಯದರ್ಶಿ ಎನ್.ಎಂ. ನಾಗೇಶ್, ಖಜಾಂಚಿ ದಿನೇಶ್ ಅವರುಗಳು, ಕೋವಿಡ್-19ರ ಸಂದಿಗ್ಧ ಸಂದರ್ಭದಲ್ಲಿ ಆರೋಗ್ಯ ಸೇವೆ ನೀಡುತ್ತಿರುವ ವೈದ್ಯರಿಗೆ ಮೇಲಧಿಕಾರಿಗಳು ಕಿರುಕುಳ ನೀಡಿರುವದು ಖಂಡನೀಯ. ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.