ಸಿದ್ದಾಪುರ, ಆ. 24: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕೂಡುಗದ್ದೆ ಸಮೀಪದಲ್ಲಿ ಸಂಪರ್ಕ ರಸ್ತೆ ಕುಸಿದಿದ್ದು, ಇದನ್ನು ಕೂಡಲೇ ದುರಸ್ತಿಪಡಿಸಬೇಕೆಂದು ಒತ್ತಾಯಿಸಿ ಸಿಪಿಐಎಂ ಪಕ್ಷದ ವತಿಯಿಂದ ಸಿದ್ದಾಪುರದ ಗ್ರಾ.ಪಂ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಪಕ್ಷದ ಜಿಲ್ಲಾ ಮುಖಂಡ ಐ.ಆರ್. ದುರ್ಗಪ್ರಸಾದ್ ಮಾತನಾಡಿ ಕೂಡಲೇ ಈ ರಸ್ತೆಯನ್ನು ವೈಜ್ಞಾನಿಕ ರೀತಿಯಲ್ಲಿ ದುರಸ್ತಿಪಡಿಸಬೇಕೆಂದು ಒತ್ತಾಯಿಸಿದರು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಹಾಗೂ ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಹೋರಾಟವನ್ನು ಮಾಡಲಾಗುವುದೆಂದು ಎಚ್ಚರಿಕೆಯನ್ನು ನೀಡಿದರು. ಈ ಸಂದರ್ಭ ಸಿಪಿಐಎಂ ಪಕ್ಷದ ಪದಾಧಿಕಾರಿಗಳಾದ ಎನ್.ಡಿ ಕುಟ್ಟಪ್ಪನ್, ಸಿ.ಯು. ಮುಸ್ತಫಾ, ಎನ್.ಕೆ ಅನಿಲ್, ಇನ್ನಿತರರು ಹಾಜರಿದ್ದರು.