ಮಡಿಕೇರಿ, ಆ. 24: ಕೊಡಗು ಜಿಲ್ಲೆಯಾದ್ಯಂತ ಭಾದ್ರಪದ ಶುಕ್ಲದ ಚೌತಿ ದಿನವಾದ ತಾ. 22ರಂದು ಶ್ರೀ ಗೌರಿ - ಗಣೇಶೋತ್ಸವ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಸರಳ ರೀತಿಯಲ್ಲಿ ಪೂಜಾ ಕೈಂಕರ್ಯಗಳು ಜರುಗಿದ್ದು, ಅಲ್ಲಲ್ಲಿ ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತೆ ನಡುವೆ ವಿಸರ್ಜನೆ ಮಾಡಿರುವ ವರದಿಗಳು ಬಂದಿವೆ.*ಸಿದ್ದಾಪುರ : ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಚೆಟ್ಟಳ್ಳಿ ಗ್ರಾಮದಲ್ಲಿ ಶ್ರೀ ವಿನಾಯಕ ದೇವಾಲಯ ಸಮಿತಿಯ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಶ್ರೀ ಗೌರಿ ಗಣೇಶೋತ್ಸವದ ಆಚರಣೆಯನ್ನು ಈ ವರ್ಷ ಪ್ರಾಕೃತಿಕ ವಿಕೋಪಗಳ ನಡುವೆ ಹಾಗೂ ಮಹಾಮಾರಿ ಕೊರೊನಾದ ನಡುವೆ ಸರಳ ರೀತಿಯಲ್ಲಿ ಶ್ರದ್ಧಾ ಭಕ್ತಿಯಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿಕೊಂಡು ಆಚರಿಸಲಾಯಿತು. ಈ ಸಂದರ್ಭ ಗ್ರಾಮದ ಶ್ರೀ ವಿನಾಯಕ ದೇವಾಲಯ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು. ಸಿದ್ದಾಪುರ : ನೆಲ್ಲಿಹುದಿಕೇರಿ ಶಾಲೆ ಸಮೀಪದ ಶ್ರೀ ಸಿದ್ದಿವಿನಾಯಕ ಮಿತ್ರ ಮಂಡಳಿಯ ವತಿಯಿಂದ 9ನೇ ವರ್ಷದ ಗೌರಿ ಗಣೇಶ ವಿಸರ್ಜನೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಈ ಸಂದರ್ಭ ಮಹೇಂದ್ರ, ವಿನು, ವಿಠ್ಠಲ, ಸುಜಿ, ಸುಮೇಶ್, ವಿಜು, ಸತ್ಯ, ಮಣಿ ಇನ್ನಿತರರು ಹಾಜರಿದ್ದರು.ನಾಪೋಕು: ನಾಪೋಕ್ಲುವಿನ ನಾಡ ಭಗವತಿ ದೇವಾಲಯದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅರ್ಚಕ ಹರೀಶ್ಭಟ್ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು. ವಿ.ಹಿಂ.ಪ. ಪ್ರಮುಖ ಚಿ.ನಾ. ಸೋಮೇಶ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಬ್ಬದ ಮಹತ್ವದ ಬಗ್ಗೆ, ಧರ್ಮಜಾಗೃತಿ ಮೂಡಿಸಿದರು. ದೇವಾಲಯದ ಆಡಳಿತ ಮಂಡಳಿ ಕಾರ್ಯದರ್ಶಿ ಅರೆಯಡ ಸೋಮಪ್ಪ; ಪ್ರಮುಖರಾದ ಕಲಿಯಂಡ ವಿಠಲ, ಶಂಕರಿಚೆಂಗಪ್ಪ, ಕುಲ್ಲೇಟಿರ ಮಾದಪ್ಪ, ಶಿವಚಾಳಿಯಂಡ ಮಾದಪ್ಪ, ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ಮಾದುಮ್ಮಯ್ಯ ಮತ್ತಿತರರು ಪಾಲ್ಗೊಂಡಿದ್ದರು. ಶಿವಚಾಳಿಯಂಡ ಜಗದೀಶ್ ಸ್ವಾಗತಿಸಿದರು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆಯ ವೇಳೆಗೆ ದೇವಾಲಯದ ಕೆರೆಯಲ್ಲಿ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು. ಕಂಗಾಂಡ ಜಾಲಿ ಪೂವಪ್ಪ ವಂದಿಸಿದರು.
ವಿಶ್ವ ಹಿಂದೂ ಪರಿಷತ್ ಮತ್ತು ಗೌರಿಗಣೇಶೋತ್ಸವ ಸಮಿತಿ ವತಿಯಿಂದ 56ನೇ ವರ್ಷದ ಗಣೇಶ ಪ್ರತಿಷ್ಠಾಪನೆ ವೈದಿಕ ವಿಧಿವಿಧಾನಗಳೊಂದಿಗೆ ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಪ್ರತಿಷ್ಠಾಪನೆಗೂ ಮುನ್ನ ರಾಮಮಂದಿರದ ಮುಖ್ಯ ಅರ್ಚಕ ದರ್ಶನ್ ಭಟ್ ನೇತೃತ್ವದಲ್ಲಿ ಗಣಹೋಮ ನೆರವೇರಿತು. ಅನಂತರ ಬೆಳಿಗ್ಗೆ 10.30ರ ಶುಭಲಗ್ನದಲ್ಲಿ ಭಕ್ತರ ಜಯಘೋಷದೊಂದಿಗೆ ಗಣೇಶ ಪೂರ್ತಿಯ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಮಹಾಪೂಜೆ, ವಿಶೇಷ ಅಲಂಕಾರ ಪೂಜೆಗಳು ನಡೆದು 11.30ಕ್ಕೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ದೇವಾಲಯಕ್ಕೆ ಭಕ್ತರು ಪ್ರವೇಶಿಸುವುದಕ್ಕೆ ಮುನ್ನ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸರ್ ಬಳಸಲಾಯಿತು. ಗೌರಿಗಣೇಶೋತ್ಸವದ ಅಂಗವಾಗಿ ಗಣಹೋಮ ನೆರವೇರಿತು. ಅರ್ಚಕ ಮನೋಜ್ ಭಟ್, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಎ. ಶ್ರೀಧರ್ ಕುಮಾರ್, ಕಾರ್ಯದರ್ಶಿ ಬಿ.ಕೆ. ಪ್ರಶಾಂತ್, ಸಮಿತಿಯ ಅಧ್ಯಕ್ಷ ಬಿ.ಎಂ. ಸುರೇಶ್, ಪ್ರಧಾನ ಕಾರ್ಯದರ್ಶಿ ಸುರೇಶ್ ಗೋಪಿ, ಪದಾಧಿಕಾರಿಗಳು ಇತರರು ಇದ್ದರು.
ಹೊರೂರು ಮಠ: ಕೆದಕಲ್ ಗ್ರಾಮ ಪಂಚಾಯಿತಿಗೆ ಸೇರಿದ ಹೊರೂರು ಮಠದಲ್ಲಿ ಸರಳ ರೀತಿಯಲ್ಲಿ ಗಣೇಶ ಪ್ರತಿಷ್ಠಾಪನಾ ಕಾರ್ಯಕ್ರಮ ನೆರವೇರಿತು. ಕಡಿಮೆ ಸಂಖ್ಯೆಯಲ್ಲಿ ಭಕ್ತರು ಹಣ್ಣುಕಾಯಿ ಪೂಜೆ ಮಾಡಿಸಿದರು. ಒಂದು ವಾರಗಳ ಕಾಲ ನಡೆಯುತ್ತಿದ್ದ ಪ್ರತಿಷ್ಠಾಪನಾ ಕಾರ್ಯಕ್ರಮ ಈ ಬಾರಿ ಆದಿನ ಸಂಜೆ ಸಂಪ್ರಾದಾಯದಂತೆ ವಿಸರ್ಜನೋತ್ಸವ ನಡೆಯಿತು. ಹೊರೂರು ಕಾಫಿ ಬೆಳೆಗಾರ ದೇವಿಪ್ರಸಾದ್ ಕಾಯಾರ್ಮಾರ್ ಸೇರಿದಂತೆ ಇತರರು ಇದ್ದರು.
ಶ್ರೀದೇವಿ: ವರ್ಷಂಪ್ರತಿ ಬಹು ವಿಜೃಂಭಣೆಯಿಂದ ನಡೆಯುತ್ತಿದ್ದ ಸುಂಟಿಕೊಪ್ಪ ಸಮೀಪದ ಶ್ರೀದೇವಿ ಗ್ರಾಮದ ಗಣೇಶ ಪ್ರತಿಷ್ಠಾಪನೆಯು ಈ ಬಾರಿ ಯಾವುದೇ ಆಡಂಬರ ಕಂಡುಬಂದಿಲ್ಲ. ಶೋಭಯಾತ್ರೆಯು ಈ ಬಾರಿ ಜೀಪಿನಲ್ಲಿ ಕುಳ್ಳಿರಿಸಿ ಸರಳವಾಗಿ ಮೆರವಣಿಗೆ ಮೂಲಕ ಸಾಗಿ ಪಕ್ಕದ ಕೆರೆಯಲ್ಲಿ ವಿಸರ್ಜಿಸಲಾಯಿತು.
ವೃಕ್ಷೋದ್ಭವ ಗಣಪತಿ ದೇವಾಲಯ: ಮಾದಾಪುರ ರಸ್ತೆಯಲ್ಲಿರುವ ವೃಕ್ಷೋದ್ಭವ ಶಕ್ತಿ ಮಹಾಗಣಪತಿ ದೇವಾಲಯದಲ್ಲಿ ಗಣೇಶ ಹಬ್ಬದ ಪ್ರಯುಕ್ತ ವಿಶೇಷÀ ಪೂಜಾ ಕೈಂಕಾರ್ಯ ನಡೆಸಲಾಯಿತು. ದೇವಾಲಯದ ಮುಖ್ಯ ಅರ್ಚಕ ಮಹಾಬಲೇಶ್ವರ ಭಟ್ ನೇತೃತ್ವದಲ್ಲಿ ಅಲಂಕಾರ, ಕುಂಕುಮಾರ್ಚನೆ, ಪೂಜೆಗಳು ನಡೆಯಿತು. ಮಧ್ಯಾಹ್ನ 12 ಗಂಟೆಗೆ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಿತು. ದೇವಾಲಯದ ಟ್ರಸ್ಟ್ ಕಾರ್ಯದರ್ಶಿ ಎ.ಲೋಕೇಶ್ ಕುಮಾರ್, ಖಜಾಂಚಿ ವೀಣಾ, ಉತ್ಸವ ಸಮಿತಿ ಅಧ್ಯಕ್ಷ ಬಿ.ಎಸ್.ಸದಾಶಿವ ರೈ ಸೇರಿದಂತೆ ಇತರರು ಇದ್ದರು.
ಕೆದಕಲ್ ದೇವಾಲಯ: ಕೆದಕಲ್ ಮಹಾದೇವ ಈಶ್ವರ ದೇವಾಲಯದಲ್ಲಿ ಬಾಲಕ ಭಕ್ತ ಮಂಡಳಿ ವತಿಯಿಂದ ಅರ್ಚಕ ಅವಿನಾಶ್ ಆರಾಧ್ಯ ನೇತೃತ್ವದಲ್ಲಿ ಗಣಹೋಮ ನಡೆದು ಸರಳ ರೀತಿಯಲ್ಲಿ ಗಣೇಶ ಹಬ್ಬವನ್ನು ಆಚರಿಸಲಾಯಿತು.ಪಟ್ಟಣದ ಜನತೆ ಗಣೇಶ ಚತುರ್ಥಿ ಹಬ್ಬವನ್ನು ಸರ್ಕಾರದ ನಿಯಮಾನುಸಾರ ಸರಳವಾಗಿ ಸಂಪ್ರದಾಯಬದ್ಧವಾಗಿ ಆಚರಿಸಿದರು.
ಗಣಪತಿ - ಚಂದ್ರಮೌಳೇಶ್ವರ - ಪಾರ್ವತಿ ದೇವಾಲಯದ ಅರ್ಚಕ ಮಾಲತೇಶ್ ಭಟ್ ನೇತೃತ್ವದಲ್ಲಿ ಸಮಿತಿ ಪದಾಧಿಕಾರಿಗಳು ಹಾಗೂ ಭಕ್ತರು ಗಂಗೆಪೂಜೆ ಮಾಡಿದ ನಂತರ ಗಣೇಶ ಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು ದೇವಾಲಯದಲ್ಲಿ ಪ್ರತಿಷ್ಠಾಪಿಸಿದರು. ಮೂರ್ತಿಯನ್ನು ಅಲಂಕರಿಸಿ, ವಿಶೇಷ ಭಕ್ಷ್ಯಗಳ ನೈವೇದ್ಯ ಸಮರ್ಪಿಸಿ, ವಿಧಿ - ವಿಧಾನಗಳೊಂದಿಗೆ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಬೆರಳೆಣಿಕೆಯ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ಕೊರೊನಾ ಸೋಂಕಿನ ಭೀತಿಯಿಂದ ಜನರು ತಮ್ಮ ತಮ್ಮ ಮನೆಗಳಲ್ಲೇ ಪರಿಸರ ಸ್ನೇಹಿ ಗಣೇಶನನ್ನು ಪ್ರತಿಷ್ಠಾಪಿಸಿ, ಕುಟುಂಬ ಸದಸ್ಯರೊಂದಿಗೆ ಸರಳವಾಗಿ ಆಚರಿಸಿ ಸಂಭ್ರಮಿಸಿದರು. ಹುದುಗೂರು
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದ ಉಮಾಮಹೇಶ್ವರ ದೇವಾಲಯದ ಆವರಣದಲ್ಲಿ ಸಮಿತಿಯ ವತಿಯಿಂದ ಗೌರಿ ಗಣೇಶ ಹಬ್ಬದ ಪ್ರಯುಕ್ತ ಚಿಕ್ಕದಾದ ವಿಗ್ರಹ ಇಟ್ಟು ಪೂಜೆಯನ್ನು ನಡೆಸಲಾಯಿತು.
ಪೂಜಾ ಕಾರ್ಯಕ್ರಮದಲ್ಲಿ ಹುದುಗೂರು ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಭಾಗವಹಿಸಿದ್ದರು. ಈ ಸಂದರ್ಭ ದೇವಾಲಯದ ಸಮಿತಿಯ ಅಧ್ಯಕ್ಷ ಟಿ.ಎಂ. ಚಾಮಿ, ಕಾರ್ಯದರ್ಶಿ ಸುರೇಶ್ ಸೇರಿದಂತೆ ಸಮಿತಿಯ ಪ್ರಮುಖರು ಹಾಗೂ ಗ್ರಾಮಸ್ಥರು ಇದ್ದರು.
ಸುಬ್ರಹ್ಮಣ್ಯ ದೇವಾಲಯ
ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಆವರಣದಲ್ಲಿ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಸರಳವಾಗಿ ಶ್ರದ್ಧಾಭಕ್ತಿಯಿಂದ ಪೂಜಾ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ನೂರಾರು ಭಕ್ತರು ಸಾಮಾಜಿಕ ಅಂತರ ನಡುವೆ ಪಾಲ್ಗೊಂಡಿದ್ದರು. ಕೂಡಿಗೆ ವ್ಯಾಪ್ತಿಗಳಲ್ಲಿ ಮನೆ ಮನೆ ಗಣಪತಿ ಹಬ್ಬ ಆಚರಣೆ ನಡೆಯಿತು.ನಾಪೋಕ್ಲು ಪಟ್ಟಣದ ರಾಮಮಂದಿರ ಗಣಪತಿ ಗುಡಿಯಲ್ಲಿ ಗಣಪತಿ ಹೋಮ ಹಾಗೂ ಇತರ ಪೂಜೆ ನೆರವೇರಿಸಲಾಯಿತು. ಅರ್ಚಕ ರವಿ ಉಡುಪ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ನಾಪೋಕ್ಲು ಪೊನ್ನುಮುತ್ತಪ್ಪ ದೇವಾಲಯದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಸಂಜೆ ದೇವಾಲಯದ ಆವರಣದಲ್ಲಿ ಗಣೇಶಮೂರ್ತಿಯನ್ನು ವಿಸರ್ಜಿಸ ಲಾಯಿತು.
ವೀರಾಜಪೇಟೆಯಲ್ಲಿ 8 ಗಣೇಶೋತ್ಸವ ಸಮಿತಿಗಳ ಉತ್ಸವ ಮೂರ್ತಿಗಳನ್ನು ಸಾಂಪ್ರದಾಯಿಕವಾಗಿ ವಿಸರ್ಜಿಸಲಾಯಿತು.
ವೀರಾಜಪೇಟೆ ದಖ್ಕನಿ ಮೊಹಲ್ಲಾದ ವಿಜಯ ವಿನಾಯಕ ಉತ್ಸವ ಸಮಿತಿ, ಅರಸು ನಗರದ ವಿಘ್ನೇಶ್ವರ ಸೇವಾ ಸಮಿತಿ, ತೆಲುಗರಬೀದಿಯ ಅಂಗಾಳಪರಮೇಶ್ವರಿ ದೇವಸ್ಥಾನದ ವಿನಾಯಕ ಯುವ ಭಕ್ತಮಂಡಳಿ, ಕಾವೇರಿ ಗಣೇಶೋತ್ಸವ ಸಮಿತಿ, ಸುಂಕದಕಟ್ಟೆಯ ಸರ್ವಸಿದ್ಧಿವಿನಾಯಕ ಉತ್ಸವ ಸಮಿತಿ, ಕೆ.ಬೋಯಿಕೇರಿಯ ವಿಘ್ನೇಶ್ವರ ಸೇವಾ ಸಮಿತಿ, ಕುಕ್ಲೂರು ವಿನಾಯಕ ಯುವಕ ಸಮಿತಿ, ಅಯ್ಯಪ್ಪಬೆಟ್ಟದ ವರದ ವಿನಾಯಕ ಸೇವಾ ಸಮಿತಿಗಳು ಗಣೇಶನ ಮೂರ್ತಿಗಳನ್ನು ವಿಸರ್ಜಿಸಿದವು.
ವೀರಾಜಪೇಟೆ ಪಟ್ಟಣದ 21 ಗೌರಿಗಣೇಶ ಉತ್ಸವ ಸಮಿತಿಗಳ ಪೈಕಿ ಪ್ರತಿಷ್ಠಾಪನೆಯ ಮೊದಲನೇ ದಿನ 9 ಉತ್ಸವ ಸಮಿತಿಗಳು, ಮೂರನೇ ದಿನ 8 ಉತ್ಸವ ಸಮಿತಿಗಳು ವಿಸರ್ಜನಾ ಕಾರ್ಯವನ್ನು ಮುಕ್ತಾಯಗೊಳಿಸಿವೆ. ಉಳಿದ ಸಮಿತಿಗಳು ಅನಂತ ಪದ್ಮನಾಭ ವ್ರತದ ದಿನವಾದ ಸೆ.1ರಂದು ಗೌರಿಗಣೇಶ ಮೂರ್ತಿಗಳನ್ನು ವಿಸರ್ಜಿಸಲಿವೆ.