ಕೊರೊನಾ ಸೋಂಕು ಬಂದರೂ, ಬಾರದಿದ್ದರೂ, ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು; ಮಕ್ಕಳ ಬಗ್ಗೆ ಹೆಚ್ಚಿನ ಜಾಗೃತೆ ವಹಿಸಬೇಕು ಎಂದು ಮಡಿಕೇರಿ ಸನಿಹದ ತಾಳತ್‍ಮನೆಯ ಮಂಜುಳಾ ಎಂಬವರು ಹೇಳುತ್ತಾರೆ.

ಮಡಿಕೇರಿಯ ಲ್ಯಾಬ್ ಒಂದರಲ್ಲಿ ಕೆಲಸ ಮಾಡುತ್ತಿರುವ ನನಗೆ ಇತರ ಸೋಂಕಿತರ ಸಂಪರ್ಕದಿಂದಾಗಿ ಪಾಸಿಟಿವ್ ವರದಿ ಬಂದಿತು. ಆದರೆ, ಜ್ವರದ ಯಾವದೇ ಲಕ್ಷಣಗಳಿರಲಿಲ್ಲ. ಸ್ವಲ್ಪ ತಲೆನೋವು ಮಾತ್ರ ಇತ್ತು. ಆರೋಗ್ಯ ಇಲಾಖೆಯಿಂದ ಕರೆ ಬಂದ ಬಳಿಕ ಕೆಲಸ ಮಾಡುತ್ತಿದ್ದ ಜಾಗದಿಂದಲೇ ಕೋವಿಡ್ ಆಸ್ಪತ್ರೆಗೆ ತೆರಳಿ ದಾಖಲಾದೆ. 16 ದಿವಸ ಆಸ್ಪತ್ರೆಯಲ್ಲಿ ಹಾಗೂ 14 ದಿವಸ ಮನೆಯಲ್ಲಿ ಕ್ವಾರಂಟೈನ್‍ನಲ್ಲಿದ್ದೆ. ಪಾಸಿಟಿವ್ ಬಂದು ಒಂದೂವರೆ ತಿಂಗಳಾಗಿದ್ದು, ಈಗ ಯಾವದೇ ತೊಂದರೆಯಿಲ್ಲದೆ ಆರೋಗ್ಯವಾಗಿದ್ದೇನೆ ಎಂದು ಹೇಳುತ್ತಾರೆ.

ಆರಂಭದಲ್ಲಿ ಆಸ್ಪತ್ರೆಯಲ್ಲಿ ಸ್ವಲ್ಪ ಅವ್ಯವಸ್ಥೆಗಳಿದ್ದರೂ ನಂತರದಲ್ಲಿ ಸರಿಯಾಯಿತು. ವ್ಯವಸ್ಥೆಗಳ ಬಗ್ಗೆ ದೂರುವದಕ್ಕಿಂತ ಮೈತುಂಬಾ ಕಿಟ್ ಧರಿಸಿ ಅವರ ಜೀವದ ಹಂಗು ತೊರೆದು ನಮ್ಮನ್ನು ಪೋಷಣೆ ಮಾಡಿದ ಶುಶ್ರೂಷಕಿಯರ ಸೇವೆಯನ್ನು ಮೆಚ್ಚಲೇಬೇಕೆಂದು ಹೇಳುವ ಮಂಜುಳಾ, ಅವರಿಗೊಂದು ಧನ್ಯವಾದ ಸಮರ್ಪಣೆ ಮಾಡುತ್ತಾರೆ.

ಕೊರೊನಾ ಬಗ್ಗೆ ಯಾವದೇ ಭಯಬೇಡ, ಮಳೆಗಾಲವಾದ್ದರಿಂದ ತಂಗಳು ಸೇವಿಸದೆ ಆದಷ್ಟು ಬಿಸಿಮಾಡಿ ಆಹಾರ ಸೇವಿಸಬೇಕು. ಬಿಸಿನೀರು ಕುಡಿಯುತ್ತಿರಬೇಕು. ಸಭೆ, ಸಮಾರಂಭಗಳಿಗೆ ತೆರಳದೆ ಸಾಮಾಜಿಕ ಅಂತರ ಕಾಪಾಡಬೇಕು, ಮಳೆಗಾಲವಾದ್ದರಿಂದ ಶೀತ, ಜ್ವರ, ಸಾಮಾನ್ಯ. ಮನೆಯಲ್ಲಿಯೇ ಕಷಾಯ ಮಾಡಿ ಕುಡಿಯಬೇಕು; ಸಾಧ್ಯವಾದಷ್ಟು ಚಿಕ್ಕ ಮಕ್ಕಳಿಂದ ಅಂತರ ಕಾಯ್ದುಕೊಳ್ಳಬೇಕು, ಹೊರಗಡೆ ಹೋಗಿ ಬಂದು ಮಕ್ಕಳನ್ನು ಮುಟ್ಟದೆ ಸ್ವಚ್ಛತೆ ಕಾಪಾಡಿಕೊಂಡು ಬೆರೆಯಬೇಕು. ಆರೋಗ್ಯ ಇಲಾಖೆ ಸೂಚನೆ ಕಾಪಾಡಿಕೊಂಡರೆ ತೊಂದರೆ ಇರುವುದಿಲ್ಲ. ಮನೆಯಲ್ಲಿ ನಿಯಮಗಳನ್ನು ಪಾಲಿಸಿದ್ದರಿಂದ ನಮ್ಮ ಮನೆಯಲ್ಲಿ ಇತರರಿಗೆ ಯಾವದೇ ತೊಂದರೆ ಆಗಿಲ್ಲ; ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕೆಂದು ಮಂಜುಳಾ ಹೇಳುತ್ತಾರೆ.