ಪಠ್ಯದಲ್ಲಿ ಕೌಶಲ್ಯ ತರಬೇತಿ ವಿಷಯ

ಬೆಂಗಳೂರು, ಆ. 24 : ರಾಜ್ಯದಲ್ಲಿ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಸೃಷ್ಟಿ ಹಾಗೂ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಶಾಲಾ, ಕಾಲೇಜು ಪಠ್ಯದಲ್ಲಿಯೇ ಕೌಶಲ್ಯ ತರಬೇತಿ ವಿಷಯವನ್ನು ಸೇರಿಸಲಾಗುತ್ತದೆ ಎಂದು ಕೌಶಲ್ಯಾಭಿವೃದ್ಧಿ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು. ನಗರದ ಮಲ್ಲೇಶ್ವರದ ಒಳಾಂಗಣ ಕ್ರೀಡಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ನಾರಾಯಣ ತರಬೇತಿ ಸಂಸ್ಥೆಗಳ ಸಹಯೋಗದಲ್ಲಿ ತೆರೆಯಲಾಗಿರುವ “ಮಲ್ಲೇಶ್ವರಂ ಕೌಶಲ್ಯ ಕೇಂದ್ರ”ದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಇವತ್ತು ಕೌಶಲ್ಯವಿರುವುದರ ಜತೆಗೆ, ಆ ಕೌಶಲ್ಯ ಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ನೌಕರಿ ಸಿಗುತ್ತದೆಯೇ ಎಂಬುದು ಬಹಳ ಮುಖ್ಯವಾದ ವಿಚಾರ. ಹೀಗಾಗಿ ಜಾಬ್ ಮಾರುಕಟ್ಟೆಗೆ ತಕ್ಕ ಹಾಗೆ, ಅಂದರೆ ಕೈಗಾರಿಕೆಗಳಿಗೆ ಅಗತ್ಯವಿರುವ ದಿಕ್ಕಿನಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಾಂಕ್ಷಿಗಳಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಅಧ್ಯಕ್ಷರಾಗಿ ಸೋನಿಯಾ ಮುಂದುವರಿಕೆ

ನವದೆಹಲಿ, ಆ. 24 : ಸೋಮವಾರ ಸುಮಾರು ಏಳು ಗಂಟೆಗಳ ಕಾಲ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯೂಸಿ) ಸಭೆಯಲ್ಲಿ ಅಂತಿಮವಾಗಿ ಹಂಗಾಮಿ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನೇ ಮುಂದುವರೆಸಲು ನಿರ್ಧರಿಸಲಾಗಿದ್ದು, ಮುಂದಿನ ಆರು ತಿಂಗಳ ನಂತರ ಪಕ್ಷಕ್ಕೆ ಹೊಸ ಅಧ್ಯಕ್ಷರ ನೇಮಕ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಇಂದು ನಡೆದ ಕಾಂಗ್ರೆಸ್ ಸಿಡಬ್ಲ್ಯೂಸಿ ಸಭೆ ಹಲವು ನಾಟಕೀಯ ಪ್ರಸಂಗಗಳಿಗೆ ಸಾಕ್ಷಿಯಾಯಿತು. ಕಾಂಗ್ರೆಸ್ ನಾಯಕತ್ವದಲ್ಲಿ ಬದಲಾವಣೆ ಯಾಗುವುದು ಅಗತ್ಯ ಇದೆ ಎಂದು ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್ ಸೇರಿದಂತೆ 23 ಹಿರಿಯ ಕಾಂಗ್ರೆಸ್ಸಿಗರು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದ ವಿಚಾರ ಈ ಸಭೆಯಲ್ಲಿ ಬಹಳಷ್ಟು ಚರ್ಚೆಯಾಗಿದೆ. ಮುಂದಿನ ಸಿಡಬ್ಲ್ಯೂಸಿ ಸಭೆಯಲ್ಲಿ ನೂತನ ಅಧ್ಯಕ್ಷರನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಅಲ್ಲಿಯವರೆಗೂ ಸೋನಿಯಾ ಅವರೇ ಹಂಗಾಮಿ ಯಾಗಿ ಮುಂದುವರಿಯಲಿದ್ದಾರೆ ಎನ್ನಲಾಗಿದೆ. ಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಕಾಂಗ್ರೆಸ್ ದೊಡ್ಡ ಕುಟುಂಬವಿದ್ದಂತೆ. ತನಗೆ ಯಾರ ವಿರುದ್ಧವೂ ದ್ವೇಷ ಇಲ್ಲ. ಆದರೆ, ಪಕ್ಷದ ವೇದಿಕೆಯಲ್ಲಿ ಮಾತ್ರ ಅಭಿಪ್ರಾಯ ವ್ಯಕ್ತಪಡಿಸಿ ಎಂದು ಹಿರಿಯ ನಾಯಕರಿಗೆ ಸಲಹೆ ನೀಡಿದ್ದಾರೆ.

ವಾಹನಗಳ ದಾಖಲೆÀ ಸಿಂಧುತ್ವ ವಿಸ್ತರಣೆ

ನವದೆಹಲಿ, ಆ. 24: ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮೋಟಾರು ವಾಹನಗಳ ದಾಖಲೆಗಳ ಸಿಂಧುತ್ವವನ್ನು ಡಿಸೆಂಬರ್ ವರೆಗೆ ವಿಸ್ತರಣೆ ಮಾಡಲು ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ. ಮೋಟಾರು ವಾಹನಗಳ ಕಾಯ್ದೆ 1988 ಹಾಗೂ ಕೇಂದ್ರ ಮೋಟಾರ್ ವಾಹನಗಳ ನಿಯಮಾವಳಿ, 1989 ಫಿಟ್ನೆಸ್, ಪರ್ಮಿಟ್, ಪರವಾನಗಿ, ನೋಂದಣಿ ಹಾಗೂ ಇತರ ದಾಖಲಾತಿಗಳ ಸಿಂಧುತ್ವವನ್ನು ಡಿ. 31 ವರೆಗೆ ವಿಸ್ತರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಇದಕ್ಕೂ ಮುನ್ನ ಮಾ.30 ಹಾಗೂ ಜೂ.09 ರಂದು ದಾಖಲೆಗಳ ಸಿಂಧುತ್ವದ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಲಾಗಿತ್ತು. ಫೆ.1 ರಿಂದ ಕೊನೆಗೊಳ್ಳಲಿದ್ದ ಸಿಂಧುತ್ವಕ್ಕೆ ಈ ವಿಸ್ತರಣೆಯ ಆದೇಶ ಅನ್ವಯವಾಗಲಿದೆ, ಅಧಿಕಾರಿಗಳು ಫೆ.1 ಕ್ಕೆ ಕೊನೆಗೊಳ್ಳಲಿದ್ದ ದಾಖಲೆಗಳ ಸಿಂಧುತ್ವವನ್ನು ಡಿ.31 ವರೆಗೆ ಪರಿಗಣಿಸಬೇಕು ಎಂದು ಸಚಿವಾಲಯ ತಿಳಿಸಿದೆ.

ಕೇರಳ ಬಿಜೆಪಿ ಅಧ್ಯಕ್ಷರ ಬಂಧನ

ತಿರುವನಂತಪುರಂ, ಆ. 24: ರಾಜತಾಂತ್ರಿಕ ಪಾರ್ಸೆಲ್ ಮೂಲಕ ಚಿನ್ನದ ಕಳ್ಳಸಾಗಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಪಿಣರಾಯಿ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಕೇರಳ ವಿಧಾನಸಭೆಯ ಮುಂದೆ ಪ್ರತಿಭಟನೆ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರನ್ನು ಸೋಮವಾರ ಬಂಧಿಸಲಾಗಿದೆ. ಮುಖ್ಯಮಂತ್ರಿ ರಾಜಿನಾಮೆ ನೀಡುವವರೆಗೂ ಬಿಜೆಪಿ ತನ್ನ ಪ್ರತಿಭಟನೆಯನ್ನು ಮುಂದುವರಿಸಲಿದೆ ಎಂದು ಹೇಳಿರುವ ಸುರೇಂದ್ರನ್, ತಿರುವನಂತಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸುವ ಕುರಿತು ವಿಧಾನಸಭೆಯಲ್ಲಿ ಮಾತನಾಡಲು ಬಿಜೆಪಿ ಶಾಸಕ ಒ ರಾಜಗೋಪಾಲ್ ಅವರಿಗೆ ಅವಕಾಶ ನೀಡದಿರುವುದನ್ನು ಖಂಡಿಸಿದ್ದಾರೆ.

ಪಾಕ್ ಪರ ಪೊಲೀಸ್ ಅಮಾನತು

ದಾವಣಗೆರೆ, ಆ. 24: ಪೊಲೀಸ್ ಕಾನ್‍ಸ್ಟೇಬಲ್‍ವೊಬ್ಬ ವಾಟ್ಸಾಪ್ ಗ್ರೂಪ್‍ನಲ್ಲಿ ‘ಪವರ್ ಆಫ್ ಪಾಕಿಸ್ತಾನ್’ ಫೇಸ್‍ಬುಕ್ ಪುಟವನ್ನು ಹಂಚಿಕೊಂಡಿದ್ದಕ್ಕಾಗಿ ಸೇವೆಯಿಂದ ಅಮಾನತುಗೊಂಡಿರುವ ಘಟನೆ ದಾವಣಗೆರೆ ಬಸವನಗರೆ ಠಾಣೆಯಲ್ಲಿ ನಡೆದಿದೆ. ಬಸವನಗರ ಠಾಣೆಯ ಪೊಲೀಸ್ ಕಾನ್‍ಸ್ಟೇಬಲ್ ಸನಾವುಲ್ಲಾ ಪಾಕ್ ಪರವಾದ ಫೇಸ್‍ಬುಕ್ ಪುಟವನ್ನು ಹಂಚಿಕೊಂಡು ಅಮಾನತು ಶಿಕ್ಷೆಗೆ ಒಳಗಾಗಿರುವ ವ್ಯಕ್ತಿಯಾಗಿದ್ದು ಇದೇ ರೀತಿಯ ಕೃತ್ಯಕ್ಕಾಗಿ ಈತ ಈ ಹಿಂದೆ 2014 ರಲ್ಲಿ ಸಹ ಒಮ್ಮೆ ಅಮಾನತು ಶಿಕ್ಷೆಗೆ ಗುರಿಯಾಗಿದ್ದ. 2008 ಬ್ಯಾಚ್ ಪೊಲೀಸ್ ಟೀಂ ಎಂಬ ವಾಟ್ಸಾಪ್ ಗ್ರೂಪ್‍ನಲ್ಲಿ ಆತ ‘ಪವರ್ ಆಫ್ ಪಾಕಿಸ್ತಾನ್’ ಫೇಸ್‍ಬುಕ್ ಪುಟವನ್ನು ಹಂಚಿಕೊಂಡಿದ್ದ ಎಂದು ತಿಳಿದುಬಂದಿದೆ. ಅಪರಾಧಕ್ಕೆ ತಕ್ಷಣ ಜಾರಿಗೆ ಬರುವಂತೆ ಸನಾವುಲ್ಲಾ ಸೇವೆಯಿಂದ ಅಮಾನತುಗೊಳಿಸಲಾಗಿದೆ.

ದೋಣಿ ಮುಳುಗಿ ಮೃತರಾದವರಿಗೆ 6 ಲಕ್ಷ

ಬೈಂದೂರು ಆ.24 : ಕಿರಿಮಂಜೇಶ್ವರ ಕೊಡೆರಿಯಲ್ಲಿ ದೋಣಿ ದುರಂತದಲ್ಲಿ ಮೃತಪಟ್ಟ ನಾಲ್ಕು ಮೀನುಗಾರರ ಕುಟುಂಬಗಳಿಗೆ ತಲಾ 6 ಲಕ್ಷ ರೂ.ಗಳ ಪರಿಹಾರವನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ. ಪರಿಹಾರದ ಆದೇಶದ ಪ್ರತಿಯನ್ನು ಸಂತ್ರಸ್ತರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೋಮವಾರ ತಿಳಿಸಿದ್ದಾರೆ. ಇಂದು ಸಚಿವರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅವರೊಂದಿಗೆ ಸಂತ್ರಸ್ತರ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು.