ಚೆಟ್ಟಳ್ಳಿ, ಆ. 24: ಪ್ರವಾಹ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾಗಿರುವ ಕುಟುಂಬಗಳಿಗೆ 200ಕ್ಕೂ ಹೆಚ್ಚು ಕಿಟ್‍ಗಳನ್ನು ಕೊಡಗು ಜಿಲ್ಲಾ ಎಸ್. ಕೆ.ಎಸ್.ಎಸ್.ಎಫ್. ಸಂಘಟನೆ ಹಾಗೂ ಎಸ್.ಕೆ.ಎಸ್.ಎಸ್.ಎಫ್.ಜಿ.ಸಿ.ಸಿ. ಕೊಡಗು ಸಮಿತಿ ವಿತರಿಸಿದರು.

ಸಿದ್ದಾಪುರ ವಕ್ಕಲ್ ಮುಲ್ಲಕೋಯ ತಂಗಳ್ ಸ್ಮಾರಕ ಭವನದಲ್ಲಿ ನಡೆದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಎಂ.ಎಂ ಅಬ್ದುಲ್ಲ ಫೈಝಿ ಕಿಟ್ ವಿತರಣೆಗೆ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಸ್.ಕೆ.ಎಸ್.ಎಸ್.ಎಫ್. ಸಂಘಟನೆಯ ಜಿಲ್ಲಾಧ್ಯಕ್ಷ ತಮ್ಲಿಖ್ ದಾರಿಮಿ ಮಾತನಾಡಿ, ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಎಸ್.ಕೆ.ಎಸ್.ಎಸ್.ಎಫ್. ಸಂಘಟನೆ ಕಳೆದ ಮೂರು ವರ್ಷಗಳಿಂದಲೂ ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ದುರಂತ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮಾನವ ರಕ್ಷಣೆ, ಸಂತ್ರಸ್ತರಿಗೆ ಸಹಾಯ ಕಿಟ್ ವಿತರಣೆ ಸೇರಿದಂತೆ ಸಹಾಯಹಸ್ತ ನೀಡುತ್ತಾ ಬಂದಿದೆ ಎಂದರು.

ಈ ಸಂದರ್ಭ ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ. ಉಸ್ಮಾನ್ ಹಾಜಿ, ಎಸ್.ಕೆ.ಎಸ್.ಎಸ್.ಎಫ್. ಸಂಘಟನೆಯ ರಾಜ್ಯ ಕಾರ್ಯದರ್ಶಿ ಆರೀಫ್ ಪೈಝಿ, ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಸಮಿತಿ ಸದಸ್ಯ ವೈ.ಎಂ ಉಮ್ಮರ್ ಫೈಝಿ, ಎಸ್.ಕೆ.ಎಸ್.ಎಸ್.ಎಫ್. ಇಸ್ತಿಖಾಮಾ ಕೇಂದ್ರ ಸಮಿತಿ ಸದಸ್ಯ ಅಬ್ದುಸ್ಸಲಾಂ ಫೈಝಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗದ ಸಂಘಟನೆಯ ಪ್ರಮುಖರು ಭಾಗವಹಿಸಿದ್ದರು.