ಮಡಿಕೇರಿ, ಆ. 21: ದಕ್ಷಿಣಕೊಡಗಿನ ಧನುಗಾಲ ಗ್ರಾಮದಲ್ಲಿ ಕಾಫಿ ತೋಟದಲ್ಲಿ ಮರ ಕಡಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಾ. 20ರ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಗೆ ತೋಟ ಮಾಲೀಕರಾಗಿರುವ ನಿವೃತ್ತ ಪೊಲೀಸ್ ಅಧಿಕಾರಿ ಮದ್ರೀರ ಉತ್ತಪ್ಪ ಅವರು ಪ್ರತಿಕ್ರಿಯಿಸಿದ್ದಾರೆ.

ಈ ವಿಚಾರದಲ್ಲಿ ತಾವು ಪರಾರಿಯಾಗಿರುವಂತೆ ಇಲಾಖೆಯವರು ತೋರಿಸಿದ್ದಾರೆ. ಆದರೆ ತಾವೂ ಕಳೆದ ಹಲವು ತಿಂಗಳಿಂದ ತಮ್ಮ ತೋಟದಲ್ಲೇ ಇದ್ದು ಪೊಲೀಸ್ ಅರಣ್ಯ ಸಂಚಾರಿದಳ ಹಾಗೂ ಅರಣ್ಯ ಇಲಾಖೆಯವರ ವಿಚಾರಣೆಗೆ ಸಹಕಾರ ನೀಡುತ್ತಿರುವ ದಾಗಿ ‘ಶಕ್ತಿ’ಗೆ ದೂರವಾಣಿ ಮೂಲಕ ತಿಳಿಸಿದರು. ಅವರ ತನಿಖೆಗೆ ಯಾವದೇ ತೊಡಕು ಮಾಡಿಲ್ಲ. ಮರಕಡಿದಿರುವದು ಮಾರಾಟ ಮಾಡಲು ಅಲ್ಲ ಆನೆಗಳ ಉಪಟಳ ಸಹಿಸಲಾರದೆ ಎಂದಿರುವ ಅವರು ತಾವೂ ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದು, ಕಾನೂನಿಗೆ ಸಹಕರಿಸುತ್ತಿರುವದಾಗಿ ತಿಳಿಸಿದರು. ಮರ ಕಡಿದಿರುವದು ನಿಜವಾದರೂ ಮಾರಾಟ ಉದ್ದೇಶ ಇಲ್ಲ ಎಂದಿದ್ದಾರೆ.

ಅರಣ್ಯ ಇಲಾಖೆ ಸ್ಪಷ್ಟನೆ

ಈ ಕುರಿತು ಪತ್ರಿಕೆಗೆ ಸ್ಪಷ್ಟನೆ ನೀಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಅರಣ್ಯ ಕಾಯ್ದೆಯಂತೆ ಮೊಕದ್ದಮೆ ದಾಖಲಾಗಿದೆ. ಇದರಲ್ಲಿ ಆರೋಪಿತರು ಅರಣ್ಯ ಕಾಯ್ದೆ ಸೆಕ್ಷನ್ 75ರಂತೆ ವಲಯ ಅರಣ್ಯ ಇಲಾಖೆಯಿಂದ ಠಾಣಾ ಜಾಮೀನು ಪಡೆಯಬೇಕಾಗಿತ್ತು. ಆದರೆ ಜಾಮೀನು ಪಡೆದಿಲ್ಲ ಎಂದು ತಿಳಿಸಿದ್ದಾರೆ.