ಪೆÇನ್ನಂಪೇಟೆ, ಆ.21: ಪ್ರಸಿದ್ಧ ಪುಣ್ಯಕ್ಷೇತ್ರವಾಗಿರುವ ತಲಕಾವೇರಿ ದೇವಾಲಯದಲ್ಲಿ ಮತ್ತು ಶ್ರೀ ಕಾವೇರಿ ಸನ್ನಿಧಿಯಲ್ಲಿ ನಿತ್ಯಪೂಜೆ ಸೇರಿದಂತೆ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸುವ ಹೊಣೆಗಾರಿಕೆಯನ್ನು ಮತ್ತೆ ಅಮ್ಮ ಕೊಡವ ಜನಾಂಗದವರಿಗೆ ವಹಿಸುವಂತೆ ಅಖಿಲ ಅಮ್ಮ ಕೊಡವ ಸಮಾಜ ಆಗ್ರಹಿಸಿದೆ. ಅಖಿಲ ಅಮ್ಮ ಕೊಡವ ಸಮಾಜದ ಗೌರವಾಧ್ಯಕ್ಷ, ಜಿ.ಪಂ. ಸದಸ್ಯ ಬಾನಂಡ ಎನ್. ಪ್ರಥ್ಯು ಅವರ ನೇತೃತ್ವದಲ್ಲಿ ಸಮಾಜದ ಅಧ್ಯಕ್ಷ ಅಚ್ಚಿಯಂಡ ಆರ್. ವೇಣುಗೋಪಾಲ್, ಉಪಾಧ್ಯಕ್ಷ ಮತ್ತು ಜಿ. ಪಂ. ಸದಸ್ಯ ಪಾಡಿಯಮಂಡ ಮುರಳಿ ಕರುಂಬಮ್ಮಯ್ಯ, ಸಮಾಜದ ಮತ್ತೋರ್ವ ಉಪಾಧ್ಯಕ್ಷೆ ಮತ್ತು ಮಡಿಕೇರಿ ತಾ. ಪಂ. ಸದಸ್ಯೆ ಉಮಾ ಪ್ರಭು ಮತ್ತು ಅಚ್ಚಿಯಂಡ ಮಿಥುನ್ ಅವರನ್ನೊಳಗೊಂಡ ಪ್ರಮುಖರ ನಿಯೋಗ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದೆ. ತಲಕಾವೇರಿ ಪುಣ್ಯಕ್ಷೇತ್ರದಲ್ಲಿ ಇತಿಹಾಸದ ಪ್ರಕಾರ ಹಲವಾರು ದಶಕಗಳ ಹಿಂದೆ ಬ್ರಾಹ್ಮಣರ ಬದಲಾಗಿ ಕೊಡಗಿನ ಮೂಲನಿವಾಸಿಗರಾಗಿರುವ ಅಮ್ಮ ಕೊಡವ ಜನಾಂಗದ ಪುರೋಹಿತರು ಶ್ರೀಮಾತೆ ಕಾವೇರಿ ಸನ್ನಿಧಿಯಲ್ಲಿ ಪೂಜಾ ಕಾರ್ಯಗಳನ್ನು ನಡೆಸುತ್ತಿದ್ದರು. ಬದಲಾದ ಸನ್ನಿವೇಶದಲ್ಲಿ ಈ ಸ್ಥಾನವನ್ನು ಬ್ರಾಹ್ಮಣ ಪುರೋಹಿತರಿಗೆ ಅಮ್ಮ ಕೊಡವ ಜನಾಂಗದವರೇ ವಹಿಸಿದ್ದರು. ಈ ಕುರಿತು ಸಾಕಷ್ಟು ಪುರಾವೆಗಳಿವೆ. ಇದೀಗ ಮತ್ತೆ ತಲಕಾವೇರಿಯಲ್ಲಿ ಅಮ್ಮ ಕೊಡವ ಸಮುದಾಯದ ಪುರೋಹಿತರು ಪೂಜಾ ಕಾರ್ಯಗಳನ್ನು ನಡೆಸಲು ಸಿದ್ಧರಿದ್ದು, ಕಾನೂನುಬದ್ಧವಾಗಿ ಇದಕ್ಕೆ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ, ಪ್ರಸ್ತಾಪಿತ ಬೇಡಿಕೆಗಳ ಕುರಿತು ಪರಿಶೀಲಿಸಲಾಗುವುದು. ಜೊತೆಗೆ ಮುಜರಾಯಿ ಸೇರಿದಂತೆ ಸಂಬಂಧಿತ ಇಲಾಖೆ ಮತ್ತು ಸಮಿತಿಯೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅದಕ್ಕೂ ಮುಖ್ಯವಾಗಿ ಈ ಕುರಿತು ಸರಕಾರದ ಅಭಿಪ್ರಾಯವನ್ನು ಪಡೆದುಕೊಳ್ಳಲಾಗುವುದು ಎಂದು ತಿಳಿಸಿರುವುದಾಗಿ ನಿಯೋಗದ ನೇತೃತ್ವ ವಹಿಸಿದ್ದ ಪ್ರಥ್ಯು ಅವರು ಹೇಳಿದ್ದಾರೆ.

ಜಿಲ್ಲಾಧಿಕಾರಿಗಳ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಥ್ಯು, ಅಮ್ಮ ಕೊಡವ ಜನಾಂಗಕ್ಕೂ ಮತ್ತು

(ಮೊದಲ ಪುಟದಿಂದ) ತಲಕಾವೇರಿ ಕ್ಷೇತ್ರಕ್ಕೂ ಪೌರಾಣಿಕ ಸಂಬಂಧವಿದೆ. ಈ ಕುರಿತು ಚರಿತ್ರೆಯಲ್ಲಿ ಯಥೇಚ್ಛ ಉಲ್ಲೇಖಗಳಿವೆ. ಕಾವೇರಿ ಕ್ಷೇತ್ರದಲ್ಲಿ ಪೂಜಾ ಕಾರ್ಯಗಳನ್ನು ನಡೆಸಲು ಅಮ್ಮ ಕೊಡವ ಜನಾಂಗದವರು ಪಾರಂಪರಿಕ ಹಕ್ಕುದಾರರಾಗಿದ್ದು, ಇದೀಗ ನಮ್ಮ ಜನಾಂಗ ಇದರಿಂದ ವಂಚಿತವಾಗಿದೆ. ಕೊಡಗಿನ ಎರಡು ಪ್ರಸಿದ್ಧ ಪುಣ್ಯಕ್ಷೇತ್ರಗಳಾದ ತಲಕಾವೇರಿ ಮತ್ತು ಪಾಡಿ ಶ್ರೀ ಇಗ್ಗುತ್ತಪ್ಪ ಕ್ಷೇತ್ರದಲ್ಲಿ ಅಮ್ಮಕೊಡವ ಜನಾಂಗದವರಿಗೆ ವಿಶೇಷ ಪ್ರಾಧಾನ್ಯತೆಯಿದ್ದು, ದೇವರ ಸೇವೆಗೆ ಇನ್ನಾದರೂ ಜನಾಂಗದವರಿಗೆ ಆದ್ಯತೆ ದೊರೆಯಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜನಾಂಗದ ಪಾರಂಪರಿಕ ಹಕ್ಕುಗಳನ್ನು ಪಡೆಯಲು ಮುಂದೆ ಕಾನೂನಾತ್ಮಕ ಮಾರ್ಗದಲ್ಲಿ ಮುಂದುವರೆಯಲಾಗುವುದು. ಜನಾಂಗಕ್ಕೆ ಸಲ್ಲಬೇಕಾದ ಧಾರ್ಮಿಕ ನೆಲೆಗಟ್ಟಿನ ಹಕ್ಕನ್ನು ಪಡೆಯಲು ಸಮಾಜದ ವತಿಯಿಂದ ಹೋರಾಟ ರೂಪಿಸಲಾಗುತ್ತಿದೆ. ನ್ಯಾಯಯುತವಾಗಿ ದಕ್ಕಬೇಕಾದ ಹಕ್ಕನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಆದರೆ ನಮ್ಮ ಕಾನೂನು ಬದ್ಧ ಹೋರಾಟಗಳಿಗೆ ಯಾರೂ ಅಡ್ಡಿಪಡಿಸಬಾರದು ಎಂದು ಮನವಿ ಮಾಡಿಕೊಂಡಿರುವ ಪ್ರಥ್ಯು ಅವರು, ಕೊಡಗಿನ ಈ ಎರಡು ಪ್ರಮುಖ ಪುಣ್ಯಕ್ಷೇತ್ರಗಳು ಮುಂದೆಯೂ ಧಾರ್ಮಿಕ ಶ್ರದ್ಧಾ ಭಕ್ತಿಯ ಕೇಂದ್ರಗಳಾಗಬೇಕೇ ವಿನಹ ಪ್ರವಾಸಿ ತಾಣಗಳಾಗಬಾರದೆಂಬ ಕಳಕಳಿ ಅಮ್ಮ ಕೊಡವ ಸಮಾಜಕ್ಕಿದೆ ಎಂದು ಹೇಳಿದರು.