ಪೆರಾಜೆ, ಆ. 21: ಮಾನವನಿಗೆ ಮನೆ ಎನ್ನುವುದು ತನ್ನ ಮೂಲಭೂತ ಅಗತ್ಯವಾಗಿದೆ. ಈ ಅವಶ್ಯಕತೆಗಳನ್ನು ಪೂರೈಸಲು ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಇದರಲ್ಲಿ ಬಡವರು, ಮಧ್ಯಮ ವರ್ಗದವರು, ಅತಿ ಕೆಳವರ್ಗದವರು, ಕಡಿಮೆ ಆದಾಯ ಹೊಂದಿರುವವರು,ಕೂಲಿ ಕೆಲಸ, ಕೃಷಿ, ನೌಕರರು ಹೀಗೆ ಎಲ್ಲರೂ ಒಳಗೊಂಡಿದ್ದಾರೆ.ಇದೀಗ ನಮ್ಮ ರಾಜ್ಯದ ಹಲವು ಕಡೆಗಳಲ್ಲಿ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಮಂಜೂರಾತಿ ದೊರಕಿದ್ದರೂ ತಾಂತ್ರಿಕ ಸಮಸ್ಯೆಯೋ, ಅಧಿಕಾರಿಗಳ ನಿರ್ಲಕ್ಷ್ಯವೋ ಇತರ ಸಮಸ್ಯೆಗಳಿಂದ ಈ ಕಾಮಗಾರಿಗಳು ಅರ್ಧಕ್ಕೆ ನಿಂತಿರುವುದರಿಂದ ಫಲಾನು ಭವಿಗಳು ಸೂರಿಲ್ಲದೆ ಇಂದು ನಾಳೆ ಬೀಳುವ ಮುರಕಲುಮನೆ, ನೆರೆಮನೆ, ಗುಡಿಸಲು ಇತರ ಕಡೆಗಳಲ್ಲಿ ದಿನ ದೂಡುವ ಪರಿಸ್ಥಿತಿ ನಿರ್ಮಾಣ ವಾಗಿದೆ.
ಇದೇ ರೀತಿ ಬಸವ ವಸತಿ ಯೋಜನೆಯಡಿ ಸರಕಾರದಿಂದ ಅನುದಾನ ಬಿಡುಗಡೆಯಾಗದೇ ಸಂಪಾಜೆ ಹೋಬಳಿಯ , ಪೆರಾಜೆ, ಚೆಂಬು, ಸಂಪಾಜೆ ಗ್ರಾಮದಲ್ಲಿ ಸ್ವಂತ ಮನೆ ಹೊಂದಿ ನೆಮ್ಮದಿಯ ಜೀವನದ ಸಾಗಿಸುವ ಫಲಾನುಭವಿಗಳ ಕನಸು ನನಸಾಗುವುದು ಕಾಣುತ್ತಿಲ್ಲ.ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಸವ ವಸತಿ ಯೋಜನೆಯಡಿ ಒಟ್ಟು 40 ಕ್ಕಿಂತಲೂ ಹೆಚ್ಚು ಮನೆಗಳು ಮಂಜೂರಾಗಿದ್ದರೂ, ಇದುವರೆಗೆ ಸರ್ಕಾರದಿಂದ ಹಣ ಬಾರದೆ ಕೆಲಸವನ್ನು ಪೂರೈಸಲಾಗದ ಪರಿಸ್ಥಿತಿಯಲ್ಲಿದ್ದಾರೆ. ಒಂದು ಮನೆ ಪಡೆಯಲು ಗ್ರಾಮಗಳ ಜನರು ತಮ್ಮ ಕಷ್ಟಗಳನ್ನು ಜನಪ್ರತಿನಿಧಿಗಳು, ಅಧಿಕಾರಿಗಳಲ್ಲಿ ತಿಳಿಸಿ ನಂತರ ಗ್ರಾಮ ಸಭೆಗಳ ಮೂಲಕ ವಸತಿಯೋಜನೆಗೆ ಆಯ್ಕೆಯಾಗಿ ಸರ್ಕಾರದಿಂದ ಮನೆ ಮಂಜೂರಾದರೂ ಕೆಲವರಿಗೆ ಒಂದು ಕಂತು, ಕೆಲವರಿಗೆ ಶೂನ್ಯ ಹೀಗೇ, ತಳಪಾಯ, ಗೋಡೆ ಇವಿಷ್ಟು ಪೂರ್ಣಗೊಂಡು ಮುಂದಿನ ಹಂತದ ಅನುದಾನ ಪಡೆಯಲು ತೊಡಕುಂಟಾ ಗುತ್ತಿದೆ. ಜನರು ತಮ್ಮ ನಿತ್ಯ ಕೆಲಸ ಕಾರ್ಯಗಳನ್ನೆಲ್ಲಾ ಬಿಟ್ಟು ಪಂಚಾಯಿತಿಗೆ ಅಲೆಯುವುದೇ ಕಾಯಕವಾಗಿದೆ. ಹಣ ಬರುವ ಯಾವುದೇ ಭರವಸೆ ಇಲ್ಲದೆ ಫಲಾನುಭವಿಗಳು ನಿರಾಶೆಯ ಮನೋಭಾವ ತಾಳಿದ್ದಾರೆ.
ಕಾರಣ ಸರಕಾರ ವಿಳಂಬ ಧೋರಣೆಯನ್ನು ಅನುಸರಿಸಿ ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡದೇ ಇರುವುದರಿಂದ ಶೀಘ್ರದಲ್ಲೆ ವಸತಿ ಹೊಂದುವ ಯೋಜನೆ ಕಾರ್ಯಗತವಾಗುತ್ತಿಲ್ಲ. ಹಾಗಾಗಿ ಕೂಡಲೇ ಈ ಯೋಜನೆಗಳಿಗೆ ಸಂಬಂಧಪಟ್ಟ, ಸಚಿವರುಗಳು, ಇಲಾಖೆಯ ಸಿಬ್ಬಂದಿಗಳು, ಅಧಿಕಾರಿಗಳು, ಇದರ ಲೋಪವನ್ನು ಪತ್ತೆ ಹಚ್ಚಿ ಶೀಘ್ರವಾಗಿ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಫಲಾನುಭವಿಗಳಿಗೆ ನೆರವಾಗ ಬೇಕಾ ಗುವ ಕೆಲಸ ಮಾಡಬೇಕಾಗಿದೆ.
ವರದಿ: ಕಿರಣ್
ಕುಂಬಳಚೇರಿ