ಕಣಿವೆ, ಆ. 21 : ಇಲ್ಲಿಗೆ ಸಮೀಪದ ಕೂಡ್ಲೂರಿನ ಕಾವೇರಿ ನದಿ ದಂಡೆಯ ಟಿ.ಆರ್.ಶರವಣಕುಮಾರ್ ಅವರ ತೋಟದಲ್ಲಿ ಮೊಸಳೆ ಮರಿ ದೊರೆತಿದೆ. ಮೊಸಳೆ ಮರಿ ಸಿಕ್ಕ ವಿಚಾರ ತಿಳಿದೊಡನೆ ಸ್ಥಳೀಯರು ಕುತೂಹಲದಿಂದ ಧಾವಿಸಿ ವೀಕ್ಷಿಸಿದರು. ಕೆಲವರು ಇಲ್ಲೇ ಕಾವೇರಿ ನದಿಗೆ ಬಿಡಲು ಮುಂದಾದಾಗ ಇಲ್ಲಿನ ರೈತರಿಗೆ ಹಾಗೂ ಜಾನುವಾರುಗಳಿಗೆ ಭವಿಷ್ಯದಲ್ಲಿ ತೊಂದರೆಯಾಗದಂತೆ ಬೇರೆಡೆಗೆ ಬಿಡಲು ತೋಟ ಮಾಲೀಕ ಶರವಣಕುಮಾರ್ ಬಯಸಿದರು.

ನಂತರ ವಲಯ ಅರಣ್ಯ ಅಧಿಕಾರಿ ಅನನ್ಯಕುಮಾರ್ ಅವರಿಗೆ ಮಾಹಿತಿ ನೀಡಿದ ಮೇರೆಗೆ ಸಿಬ್ಬಂದಿಯ ಮೂಲಕ ಸುರಕ್ಷಿತ ಸ್ಥಳಕ್ಕೆ ಬಿಡಲಾಯಿತು. ಇತ್ತೀಚೆಗೆ ಕಾವೇರಿ ನದಿ ಪ್ರವಾಹ ಬಂದ ಸಂದರ್ಭದಲ್ಲಿ ಮೊಸಳೆ ಮರಿಗಳು ನದಿ ದಂಡೆಯ ತೋಟದೊಳಗೆ ಧಾವಿಸಿರುವ ಶಂಕೆಯನ್ನು ಶರವಣಕುಮಾರ್ ವ್ಯಕ್ತಪಡಿಸಿದರು.