ಕಣಿವೆ, ಆ. 21 : ಕೊಡಗು ಜಿಲ್ಲೆಯ ಏಕೈಕ ಕೈಗಾರಿಕಾ ಪ್ರದೇಶವಾದ ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿನ ಕಾವೇರಿ ನದಿ ದಂಡೆಯಲ್ಲಿ ಯಥೇಚ್ಛವಾದ ಪ್ರಮಾಣದಲ್ಲಿ ತ್ಯಾಜ್ಯ ಗಳು ತುಂಬಿದ ಮಣ್ಣಿನ ರಾಶಿಯನ್ನು ಹಾಕಿದ್ದು, ಇಲ್ಲಿನ ನದಿ ತೀರ ಕೈಗಾರಿಕಾ ಪ್ರದೇಶದ ಕಸದ ತೊಟ್ಟಿಯಾಗಿದ್ದು ಸಂಪೂರ್ಣ ಕಸ ತ್ಯಾಜ್ಯಗಳಿಂದ ತುಂಬಿ ಗಬ್ಬೆದ್ದು ನಾರುತ್ತಿದೆ.

ಈ ಬಗ್ಗೆ ಮಾಹಿತಿ ಇದ್ದಾಗ್ಯೂ ಸ್ಥಳೀಯ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಕಳೆದ ಹಲವು ತಿಂಗಳ ಹಿಂದೆ ಏನೋ ಕಾಟಾಚಾರಕ್ಕೆ ಎಂಬಂತೆ ಇಲ್ಲಿ ಯಾರು ಕೂಡ ಕಸ, ಮಣ್ಣು ಇತ್ಯಾದಿಗಳನ್ನು ಹಾಕಬಾರದು ಎಂಬ ನಾಮಫಲಕ ಹಾಕಿದೆ. ಆದರೆ ಈ ನಾಮ ಫಲಕ ಹಾಕಿದ ಬಳಿಕವೇ ಇಲ್ಲಿ ಮಣ್ಣಿನ ರಾಶಿ ಜಾಸ್ತಿಯಾಗಿದೆ. ಆದರೂ ಕೂಡ ಈ ಪಂಚಾಯತಿ ಅಧಿಕಾರಿಗಳು ಇದ್ಯಾವುದರ ಅರಿವೇ ಇಲ್ಲದಂತೆ ಕುಳಿತಿದ್ದಾರೆ ಎಂದು ಇಲ್ಲಿನ ಉದ್ದಿಮೆದಾರರು ಹೇಳುತ್ತಾರೆ. 400 ಎಕರೆ ವಿಶಾಲವಾದ ಭೂ ಪ್ರದೇಶದಲ್ಲಿ ಇರುವ ಈ ಕೈಗಾರಿಕಾ ಪ್ರದೇಶದ ತ್ಯಾಜ್ಯ ಇಲ್ಲಿ ಕ್ರೋಡೀಕರಣವಾಗುತ್ತಿದೆ.

ಸರ್ವ ಜನರ ಪೂಜನೀಯವಾದ ಮತ್ತು ಶ್ರದ್ಧಾ ಕೇಂದ್ರ ವಾಗಬೇಕಿರುವ ಈ ನದಿಯ ತೀರವನ್ನು ಇಲ್ಲಿನ ಕೈಗಾರಿಕೋದ್ಯಮಿಗಳು ಕೈಗಾರಿಕಾ ಪ್ರದೇಶದ ಕಸದ ತೊಟ್ಟಿಯಾಗಿ ಮಾಡಿಕೊಂಡಿದ್ದಾರೆ. ಸುಂದರನಗರ ವೃತ್ತದಿಂದ ಕಾವೇರಿ ನದಿ ದಂಡೆಯವರೆಗೂ ಇರುವ ನೂರು ಅಡಿಯಷ್ಟು ಅಗಲವಿರುವ ಬೃಹತ್ ರಸ್ತೆ ನದಿಯಂಚಿನಲ್ಲಿ ಕಸ, ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ಮಣ್ಣುಗಳ ರಾಶಿಯಿಂದ ಕೂಡಿದೆ. ಕೈಗಾರಿಕಾ ಘಟಕಗಳಿಂದ ಹೊರ ಸೂಸುವ ತ್ಯಾಜ್ಯ ನೀರನ್ನು ಹರಿಸುವ ರಸ್ತೆಯ ಇಬ್ಬದಿಯ ಚರಂಡಿಗಳು ರಾಜ ಕಾಲುವೆಗಳಂತಿದ್ದು ಅವುಗಳಿಂದ ಹರಿಯುವ ಕಲುಷಿತ ನೀರು ನೇರವಾಗಿ ಕಾವೇರಿ ನದಿಯನ್ನು ಸೇರುತ್ತಿದ್ದರೂ ಕೂಡ ಪಂಚಾಯತಿ ಆಡಳಿತವಾಗಲೀ, ಕೈಗಾರಿಕಾ ಇಲಾಖೆಯಾಗಲಿ ನದಿ ದಂಡೆಯಲ್ಲಿ ಇಂಗು ಗುಂಡಿ ನಿರ್ಮಿಸುವ ಕೆಲಸವನ್ನೇ ಮಾಡಿಲ್ಲ. ಹಾಗಾಗಿ ಕಲುಷಿತ ನೀರು ನೇರವಾಗಿ ಇಲ್ಲಿ ನದಿಗೆ ಸೇರುತ್ತಿದೆ.

ಇದೇ ನದಿಯ ದಂಡೆಯಲ್ಲಿ ಕೂಡ್ಲೂರು ಗ್ರಾಮಸ್ಥರಿಗೆಂದು ಶವಾಗಾರವನ್ನು ನಿರ್ಮಿಸಲಾಗಿದೆ. ಆದರೆ ಆ ಶವಾಗಾರಕ್ಕೆ ತೆರಳಲು ಕೂಡ ಆಗದಂತೆ ಕಸದ ತ್ಯಾಜ್ಯ ಮಣ್ಣನ್ನು ಇಲ್ಲಿ ಸುರಿಯಲಾಗಿದೆ ಎಂದು ದೂರಿರುವ ಕೂಡ್ಲೂರು ಗ್ರಾಮಸ್ಥರು ಕೂಡಲೇ ಪಂಚಾಯತಿ ಅಧಿಕಾರಿಗಳು ಇಲ್ಲಿ ರಾಶಿ ಬಿದ್ದಿರುವ ಮಣ್ಣನ್ನು ತೆರವುಗೊಳಿಸಿ ನದಿ ದಂಡೆಯನ್ನು ಸ್ವಚ್ಛವಾಗಿಡಬೇಕೆಂದು ಒತ್ತಾಯಿಸಿದ್ದಾರೆ. ಈ ನದಿ ದಂಡೆಯನ್ನು ಸ್ವಚ್ಛವಾಗಿಟ್ಟು ಇಲ್ಲಿ ಸುಸಜ್ಜಿತವಾದ ಸೋಫಾನ ಕಟ್ಟೆ ನಿರ್ಮಾಣ ಮಾಡಿದರೆ ನದಿಯ ತಿರುವು ಇರುವ ಈ ಸ್ಥಳ ಮನಸ್ಸಿಗೆ ಒಂದಷ್ಟು ನೆಮ್ಮದಿ ನೀಡುವ ಸ್ಥಳವಾಗಲಿದೆ.

ಜೊತೆಗೆ ಇದೇ ನದಿ ದಂಡೆಯಲ್ಲಿ ಪೂರ್ವಾಭಿಮುಖವಾದ ಐತಿಹಾಸಿಕ ಶಿವ ದೇಗುಲವೂ ಇದ್ದು ಇದೊಂದು ಧಾರ್ಮಿಕ ಕೇಂದ್ರವು ಆಗಲಿದೆ. ಕೂಡಲೇ ಕೂಡುಮಂಗಳೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಇಲ್ಲಿಗೆ ಆಗಮಿಸಿ ನದಿ ದಂಡೆಯ ಅವ್ಯವಸ್ಥೆ ಪರಿಶೀಲಿಸಬೇಕು. ಕೂಡಲೇ ಇಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಬೇಕು. ಇನ್ನು ಮುಂದೆ ಯಾರೊಬ್ಬರು ಕೂಡ ಇಲ್ಲಿ ಯಾವುದೇ ಕಸ ತ್ಯಾಜ್ಯ ಹಾಕದಂತೆ ಎಚ್ಚರಿಕೆಯ ನಾಮಫಲಕ ಹಾಕಬೇಕು. ಜೊತೆಗೆ ಅಲ್ಲಿಯೇ ಇರುವ ಕಾಫಿ ಸಂಸ್ಕರಣಾ ಘಟಕಗಳ ಮಾಲೀಕರ ಮನವೊಲಿಸಿ ಸಿಸಿ ಕ್ಯಾಮೆರಾ ಅಳವಡಿಸುವ ಕೆಲಸವೂ ಆದರೆ ಈ ಪವಿತ್ರ ಕಾವೇರಿ ನದಿ ಸ್ವಚ್ಛವಾಗುತ್ತದೆ. ಈಗಾಗಲೇ ಕಳೆದ ಮೂರು ವರ್ಷಗಳಿಂದ ಕಾವೇರಿ ಮುನಿದು ಆಗುತ್ತಿರುವ ಜಲ ಅವಘಡಗಳಿಂದ ಮುಕ್ತವಾಗಿರಲು ನದಿಯನ್ನು ಮಾತೃಗೌರವದಿಂದ ಎಲ್ಲರೂ ನೋಡಬೇಕು ಅಷ್ಟೇ.

- ಕೆ.ಎಸ್. ಮೂರ್ತಿ