ಗೋಣಿಕೊಪ್ಪಲು, ಆ. 21 : ಕುಂಬಳ ಕಾಯಿ ತುಂಬಿದ ಲಾರಿಯಲ್ಲಿ ಬೀಟೆ ನಾಟಾ ಸಾಗಿಸುತ್ತಿದ್ದ ವೇಳೆ ಅರಣ್ಯಾಧಿಕಾರಿಗಳ ತಪಾಸಣೆ ಸಂದರ್ಭದಲ್ಲಿ ಮಾಲನ್ನು ವಶಪಡಿಸಿಕೊಂಡು ಲಾರಿ ಚಾಲಕನನ್ನು ಬಂಧಿಸಿರುವ ಘಟನೆ ಮಾಕುಟ್ಟ ಅರಣ್ಯ ತಪಾಸಣಾ ಗೇಟ್‍ನಲ್ಲಿ ನಡೆದಿದೆ. ಲಾರಿ ಚಾಲಕ ಸುರೇಶ್ ಬಾಬು ಬಂಧಿತ ಆರೋಪಿ.ಶುಕ್ರವಾರ ಬೆಳಿಗ್ಗೆ 7.55ರ ವೇಳೆಯಲ್ಲಿ ಲಾರಿಯಲ್ಲಿ (ಕೆಎಲ್ 59 ಎಂ.2532) ಕುಂಬಳ ಕಾಯಿ ತುಂಬಿಸಿ ಕೊಂಡು ಕೊಡಗಿನಿಂದ ಕೇರಳದ ಎರ್ನಾಕುಲಂಗೆ ತೆರಳುತ್ತಿದ್ದರು. ಅನುಮಾನಗೊಂಡ ಮಾಕುಟ್ಟ ಅರಣ್ಯ ಗೇಟಿನಲ್ಲಿದ್ದ ವಲಯ ಅರಣ್ಯಾಧಿಕಾರಿ ಅರುಣ್ ಹಾಗೂ ಸಿಬ್ಬಂದಿ ವರ್ಗದವರು ತಪಾಸಣೆ ನಡೆಸಿದಾಗ ಲಾರಿಯ ಒಳಗೆ ರೂ 2.5ಲಕ್ಷ ಮೌಲ್ಯದ ಭಾರೀ ಗಾತ್ರದ ಬೀಟೆ ಮರದ ತುಂಡುಗಳು ಕಂಡು ಬಂದಿವೆ.ಇದೇ ಲಾರಿ ಕೇರಳದಿಂದ ಕೆಂಪು ಇಟ್ಟಿಗೆಯನ್ನು ಪ್ರತಿದಿನ ಕೊಡಗಿಗೆ ತುಂಬಿಸಿಕೊಂಡು ಬರುತ್ತಿತ್ತು ಎನ್ನಲಾಗಿದೆ. ಕೊಡಗಿನಿಂದ ಕೇರಳಕ್ಕೆ ಕುಂಬಳಕಾಯಿ ತುಂಬಿಸಿಕೊಂಡು ಹೋಗುತ್ತಿರುವ ಬಗ್ಗೆ ಅರಣ್ಯಾಧಿಕಾರಿ ಗಳಿಗೆ ಅನುಮಾನ ಶುರುವಾಗಿದೆ. ಇದರಿಂದ ತಪಾಸಣೆಗೆ ಮುಂದಾಗಿದ್ದರು. ಲಾರಿ ಪೆರಂಬಾಡಿ ಮತ್ತು ಮಾಕುಟ್ಟ ಪೊಲೀಸ್ ಗೇಟ್ ದಾಟಿ ಬಂದಿದ್ದರೂ ಪೊಲೀಸರಿಗೆ ಸಿಕ್ಕಿ ಬಿದ್ದಿಲ್ಲ. ಈ ಬಗ್ಗೆ ಸಾರ್ವಜನಿಕರು ಪೊಲೀಸರ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಕಾರ್ಯಾ ಚರಣೆಯಲ್ಲಿ ಡಿಆರ್ ಎಫ್ ಒ ಎಚ್.ಡಿ.ಉಮೇಶ್, ಅರಣ್ಯ ವೀಕ್ಷಕರಾದ ರಮೇಶ್, ಜಯರಾಮ್, ರಾಘವೇಂದ್ರ ಪಾಲ್ಗೊಂಡಿದ್ದರು. -ಎನ್.ಎನ್. ದಿನೇಶ್