“ಪೂಜ್ಯಳಾದ ಮಹೇಶ್ವರಿಯೇ ಜಯಿಸು. ಸರ್ವೇಶ್ವರನ ಮಡದಿಯೇ ಜಯಿಸು. ಗಂಗಾದಿ ಸರ್ವತೀರ್ಥಗಳಿಗೆ ಆಶ್ರಯದಾತಳೆ ಜಯಿಸು. ಸರ್ವೋತ್ತಮಳೇ ಜಯಿಸು. ಪರಮೇಶ್ವರನ ಸರ್ವಸ್ವಳೆ ಜಯಿಸು. ವಿಷ್ಣು ಪಾದಕ್ಕೆ ನಮಿಸುವವಳೇ ಜಯಿಸು. ಭಕ್ತ ಜನೋದ್ಧಾರಿಣಿಯೇ ಜಯಿಸು. ಸರ್ವ ಸೌಖ್ಯವನ್ನು ಕೊಡುವವಳೆ ಜಯಿಸು. ಜನನ, ವೃದ್ಧಾಪ್ಯ ಹಾಗೂ ಮರಣವನ್ನು ನಿವಾರಿಸಿ ಮುಕ್ತಿ ನೀಡುವವಳೆ ಜಯಿಸು. ಜಗತ್ತಿನ ಸೃಷ್ಟಿ, ಸ್ಥಿತಿ ಲಯಗಳಿಗೆ ಕಾರಣಳಾದವಳೆ ಜಯಿಸು. ಬ್ರಹ್ಮನಾದಿಯಾಗಿ ಕೀಟಗಳವರೆಗೂ ಮೋಹಕಾರಿಣಿಯಾದವಳೇ ಜಯಿಸು. ಜಗನ್ಮಂಗಲೆಯೇ ಜಯಿಸು. ಪರಬ್ರಹ್ಮಾತ್ಮಕ ಜಿಜ್ಞಾಸೆ ಮೂಲಕ ಜ್ಞಾನವನ್ನು ನೀಡುವ ಪೂಜ್ಯಳೇ ಜಯಿಸು. “ ಎಂದು ಮಾತೆಯನ್ನು ಸ್ತ್ತುತಿಸಿದರು. ಬಲಮುರಿಯಲ್ಲಿ ನೆರೆದಿದ್ದ ಜನರೆಲ್ಲ ಉಘೇ ಉಘೇ ಎಂದು ವಿವಿಧ ಸ್ತೋತ್ರಗಳಿಂದ ಗುಣಗಾನದಿಂದ ಕಾವೇರಿಯನ್ನು ನಮಿಸಿದರು.

ತೈಸ್ಸ್ತವೈರತಿಸಂತುಷ್ಟಾ ಮಹಾ ವಿಸ್ತಾರತಾಂ ಗತಾ

ಆ ಸಂದರ್ಭ ತನ್ನ ಭಕ್ತರ ಸ್ತೋತ್ರಗಳಿಂದ ಕಾವೇರಿ ಪ್ರಸನ್ನಳಾದಳು. ಕವೇರನ ಕುವರಿಯೆಂಬ ಹೆಸರನ್ನಾಂತು ನದೀ ರೂಪಿಣಿಯಗಿ ಬಹು ವಿಸ್ತಾರ ಹೊಂದಿದಳು. ಆ ಪುಣ್ಯ ಸನ್ನಿವೇಶದಲ್ಲಿ ಎಲ್ಲರೂ ಕುತ್ತಿಗೆಯವರೆಗೆ ನೀರಿನಲ್ಲಿ ಮುಳುಗಿದ್ದರು.

ಜಲವೇಗಪ್ರಘಾತೇನ ಪಶ್ಚಾನ್ನೀವ್ಯೋಭವನ್ ಸ್ತ್ರಿಯಃ

ಜಲಪ್ರವಾಹದ ಹೊಡೆತಕ್ಕೆ ದೇವಕಾಂತನ ಪರಿವಾರದ ಮಹಿಳೆಯರೆಲ್ಲರ ಸೀರೆಯ ನಿರಿಗೆ ಹಿಂದಕ್ಕೆ ಸರಿಯಿತು. ಅವರ ಭಕ್ತಿ ಪರಾಕಾಷ್ಠೆಯನ್ನು ನೋಡಿದ ಕಾವೇರಿ ಅತಿಯಾಗಿ ಪ್ರಸನ್ನಳಾದಳು.

ನಿಜರೂಪೇಣ ಸಂದೃಷ್ಟಾ ಸ್ವರ್ಣ ಮಾಣಿಕ್ಯ ಭೂಷಿತಾ

ಸ್ವೀಯಾನಾಹ ತದಾ ದೇವೀ ತದಭೀಷ್ಟ ಪ್ರದಾಯಿನೀ

ನಂದನಾಃ ಸ್ತವಮುಖ್ಯೈರ್ವಸ್ತುಷಾ ಸರ್ವಪ್ರದಾಯಿನೀ

ವರಂ ವೃಣೀಧ್ವಂ ಸ್ವಸ್ವೇಷ್ಟಂ ಮಾಸ್ತು ಮಾಸ್ತು ವಿಲಂಬನಂ

ದೇವಕಾಂತಾದಯಸ್ಸರ್ವೇ ತಥೇತ್ಯುಕ್ತ್ವಾ ತು ವವ್ರಿರೇ

ಅಸ್ಮಾತ್ಕುಲಾಭಿಸಂವೃದ್ಧಿಂ ಯಾವದಾಚಂದ್ರತಾರಕಂ

ತಥೈಶ್ವರ್ಯಂ ಚ ಪರಮಂ ತ್ವದ್ಭಕ್ತಿಂ ಚೈವ ಶಾಶ್ವತೀಂ

ಸ್ವರ್ಣಮಾಣಿಕ್ಯಾದಿಗಳಿಂದ ಅಲಂಕೃತೆಯಾದ ಕಾವೇರಿ ಮಾತೆಯು ತನ್ನ ನಿಜರೂಪದಿಂದ ನೆರೆದವರಿಗೆ ದರ್ಶನವಿತ್ತಳು.ಅವರಿಗೆ ಇಷ್ಟಾರ್ಥಗಳನ್ನು ಪೂರೈಸಬೇಕೆಂಬ ಅಭಿಲಾಷೆ ಹೊಂದಿದಳು. ಆ ಸಂದರ್ಭ ಅವಳ ಮಾತು ಹೀಗಿತ್ತು:-ಮಕ್ಕಳೇ, ನಿಮ್ಮಿಂದ ಸಂಸ್ತುತಳಾದ ನಾನು ನಿಮಗೆ ಸರ್ವಾಭೀಷ್ಟಗಳನ್ನೂ ಕೊಡುವೆನು. ನಿಮ್ಮ ನಿಮ್ಮ ಇಷ್ಟಾರ್ಥಗಳನ್ನು ಕೇಳಿಕೊಳ್ಳಿ. ವಿಳಂಬ ಮಾಡಬೇಡಿ ಎಂದು ಹೇಳಿದಳು. ದೇವಕಾಂತನು ಎಲ್ಲರ ಪರವಾಗಿ “ ಸೂರ್ಯ- ಚಂದ್ರರಿರುವ ತನಕ ನಮ್ಮ ವಂಶವು ಸಂವೃದ್ಧಿಯಾಗುತ್ತಿರಬೇಕು” ಎಂದು ವರವನ್ನು ಕೇಳಿಕೊಂಡನು. ಐಶ್ವರ್ಯವನ್ನೂ ನೀಡು; ಮುಖ್ಯವಾಗಿ ನಿನ್ನಲ್ಲಿಯೂ- ಈಶ್ವರನಲ್ಲಿಯೂ ಭಕ್ತಿಯನ್ನೂ ನೀಡು. ಗುರು ಹಿರಿಯರನ್ನು , ಧರ್ಮಜ್ಞರನ್ನೂ ಆದರಿಸುವ ಸದ್ಭಾವವನ್ನು ದಯಪಾಲಿಸು. ಶಾಶ್ವತವಾದ ರಾಜ್ಯವನ್ನೂ ಒದಗಿಸು. ಪುರಾತನೆಯಾದ, ಪರದೇವತೆಯಾದ ಮಹಾಮಾತೆಯಾದ ಕಾವೇರಿಯೇ ನೀನೇ ನಮ್ಮ ಕುಲದೇವತೆಯಾಗಿ ಸಂರಕ್ಷಿಸು ಎಂದು ವಿನಮ್ರಪೂರ್ವಕವಾಗಿ ಕೇಳಿಕೊಂಡನು. ಜಗನ್ಮಾತೆಯೇ, ನಾವು ಸಮಸ್ತರೂ ನಿನ್ನ ಅಧೀನರು. ನೀನೇ ನಮ್ಮನ್ನು ಪಾಲಿಸಬೇಕು. ನಮಗೆ ನೀನೇ ಸಂರಕ್ಷಕಳು. ಆದುದರಿಂದ ದಯಾ ವಾರಿಧಿಯೇ ನಮ್ಮ ಅಭೀಷ್ಟಗಳನ್ನು ಅನುಗ್ರಹಿಸು ಎಂದು ಪ್ರಾರ್ಥಿಸಿದನು.

ನಿನ್ನ ಪೂಜೆಗೆ ಪುರಾಣಶಾಸ್ತ್ರತತ್ವಗಳನ್ನು ತಿಳಿದವನೂ ಹಾಗೂ ನಿನ್ನ ಆರಾಧನೆಯಲ್ಲಿ ಆಸಕ್ತಿಯುಳ್ಳವನೂ ಆಗಿರುವ ವಿಪ್ರನೊಬ್ಬನನ್ನು ಗುರುತಿಸಿಕೊಡು ಎಂದು ಪ್ರಾರ್ಥಿಸಿದನು. ಕಾವೇರಿ ನುಡಿಯುತ್ತಾಳೆ “ನಿಮ್ಮ ಉತ್ತಮ ವಂಶದಲ್ಲಿ ನನ್ನಲ್ಲಿಯೂ, ಶಿವನಲ್ಲಿಯೂ ಭಕ್ತಿಯಿರಲಿ; ಇದನ್ನು ನೀವು ಕಳೆದುಕೊಂಡರೆ ನಿಮಗೆ ಸುಖವಾಗುವದಿಲ್ಲ. ನನ್ನ ತಂದೆಯಾದ ಕವೇರ ಮುನಿಯ ಸ್ನೇಹಿತ ನನ್ನ ಭಕ್ತನಾದ ತಪಸ್ವೀ ವಿಪ್ರನೊಬ್ಬ ಮೂಲ ಕಾವೇರಿಯ ಸ್ಥಾನದಲ್ಲಿದ್ದಾನೆ. ಅವನನ್ನು ಕೇಳಿಕೊಂಡು ಪೂಜಾದಿಗಳನ್ನೆಲ್ಲ್ಲ ನಡೆಸಿಕೊಳ್ಳಿ, ಅದರಿಂದ ನಿಮಗೂ, ನಿಮ್ಮ ವಂಶಕ್ಕೂ ಎಲ್ಲ ರೀತಿಯೂ ಒಳಿತಾಗುತ್ತದೆ; ನನ್ನ ಅನುಗ್ರಹದಿಂದಾಗಿ ಕ್ಷೇಮಲಾಭವುಂಟಾಗುತ್ತದೆ. ನಿಮಗೆ ಇಹ- ಪರಗಳಲ್ಲಿ ಶ್ರೇಷ್ಠವಾದ ಕೀರ್ತಿ ಲಭ್ಯವಾಗುತ್ತದೆ. ಬಹುಕಾಲದವರೆಗೆ ರಾಜ್ಯಾಧಿಕಾರವೂ, ರಿಪು ಜಯವೂ ಶಾಶ್ವತವಾದ ಸದ್ಗತಿಯೂ ಇತರ ಇಷ್ಟಾರ್ಥಗಳು ನಿಮಗೂ, ನಿಮ್ಮ ಕುಲದವರಿಗೂ ನನ್ನ ಅನುಗ್ರಹದಿಂದ ಸಂಶಯವಿಲ್ಲದೆ ಲಭಿಸುವದು” ಎಂದು ಅನುಗ್ರಹಿಸಿ ಕಾವೇರಿಯು ಅಂತರ್ಧಾನಳಾಗಿ ಪುನಃ ಜಲರೂಪಿಣಿಯಾಗಿ ಹೊರಟಳು. ಆಕೆಯ ಮಾರ್ಗದರ್ಶನದಂತೆ ದೇವಕಾಂತನು ಬಲಮುರಿಯಿಂದ ತನ್ನ ಪರಿವಾರ ಸಹಿತ ಕಾವೇರಿಯ ಮೂಲವಾದ ತಲಕಾವೇರಿಗೆ ತೆರಳಿ ಕ್ಷೇತ್ರದಲ್ಲಿದ್ದ ತಪಸ್ವೀ ವಿಪ್ರನನ್ನು ಸಂದರ್ಶಿಸಿ ಪೂಜಾದಿಗಳ ವ್ಯವಸ್ಥೆ ಕೈಗೊಂಡನು. ಆತನ ಮೂಲಕ ಅನೇಕ ಶ್ರಾದ್ಧಗಳನ್ನು ನೆರವೇರಿಸಿ ವಿವಿಧ ದಾನಗಳನ್ನು ನೀಡಿದನು.. ತಲಕಾವೇರಿಯಲ್ಲಿ ಅಗಸ್ತ್ಯರು ಪ್ರತಿಷ್ಠೆ ಮಾಡಿದ ಈಶ್ವರ ಶಿವಲಿಂಗವನ್ನೂ, ಕುಂಡಿಕೆಯ ಕಾವೇರಿಯನ್ನೂ ಷೋಡóಶೋಪಚಾರಗಳಿಂದ ಪೂಜಿಸುತ್ತ ದೇವಕಾಂತನು ತನ್ನ ಪರಿವಾರ ಸಹಿತ ತಂಗಿದನು. ಅವನೂ ಮತ್ತು ಪರಿವಾರದವರು ಒಂದು ತಿಂಗಳ ಕಾಲ ಅಗಸ್ತ್ಯೇಶ್ವರನನ್ನೂ, ಕಾವೇರಿಯನ್ನೂ ಪೂಜಿಸಿ ಕೃತಾರ್ಥರಾದರು. ಲೋಕಮಾತೆಯ ಕಟಾಕ್ಷದಿಂದ ಮಹಾಸುಖವನ್ನು ಹೊಂದಿದನು. ಬಳಿಕ ದೇವಕಾಂತನು ಕಾವೇರಿ ಪೂಜೆಗಾಗಿ ವರ್ಷಕ್ಕೆ ಅಗತ್ಯವಾದ ಹಣವನ್ನು ನೀಡುತ್ತಿದ್ದನು. ಪ್ರತಿ ವರ್ಷವೂ ತುಲಾ ಮಾಸದಲ್ಲಿ ತಲಕಾವೇರಿಗೆ ತೆರಳಿ ಪುಣ್ಯ ತೀರ್ಥ ಸ್ನಾನ ಮಾಡುತ್ತಿದ್ದನು. ಗುರುವಿನ ಮಾರ್ಗದರ್ಶನದಂತೆ ಅನೇಕ ದಾನಗಳನ್ನು ಮಾಡುತ್ತಿದ್ದನು. ಅಗಸ್ತ್ಯೇಶ್ವರನ ಮತ್ತು ಕಾವೇರಿಯ ಅನುಗ್ರಹದಿಂದ ಇಹಲೋಕದ ಸುಖಗಳನ್ನೆಲ್ಲ ಅನುಭವಿಸಿ ಕಾಲಾಂತರದಲ್ಲಿ ಉತ್ತಮ ಗತಿಯನ್ನು ಹೊಂದಿದನು. ಅವನ ಸಂತತಿಯು ಭೂಚಕ್ರವಿರುವ ತನಕ ಶಾಶ್ವತವಾಗಿರುವದು. ಬ್ರಹ್ಮಗಿರಿಯ ಹಾಗೂ ಕಾವೇರಿಯ ವಿಷಯಗಳನ್ನೊಳಗೊಂಡ ಪಾವನವೂ, ಪಾಪ ಪರಿಹಾರಕವೂ ಆದ ಈ ಚರಿತಾಮೃತವೆಂಬ ಸಮುದ್ರವನ್ನು ಪಾನ ಮಾಡಿದ ಸಜ್ಜನರು ಪಾಪ- ತಾಪವನ್ನು ಕಳೆದುಕೊಂಡು ಜನನ ಮರಣಗಳಿಂದ ಮುಕ್ತರಾಗುತ್ತ್ತಾರೆ ಎಂದು ಸೂತ ಪುರಾಣಿಕನು ಶೌನಕಾದಿ ಮಹರ್ಷಿಗಳಿಗೆ ಹೇಳುವ ಮೂಲಕ ಸ್ಕಾಂದ ಪುರಾಣಾಂತರ್ಗತ ಕಾವೇರಿ ಮಾಹಾತ್ಮ್ಯೆಯ ಸರ್ವ ಅಧ್ಯಾಯವೂ ಮುಗಿಯಿತು.

(ಇಲ್ಲಿಗೆ ಶ್ರೀ ಸ್ಕಾಂದ ಪುರಾಣಾಂತರ್ಗತ ಶ್ರೀ ಕಾವೇರಿ ಮಾಹಾತ್ಮ್ಯೆ ಮುಕ್ತಾಯಗೊಂಡಿತು. ದಿ.ಟಿ.ಪಿ. ನಾರಾಯಣಾಚಾರ್ಯರು ಇದನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದು, ಈ ಗ್ರಂಥವನ್ನು ಬಳಸಿಕೊಳ್ಳಲು ಅವರ ಪುತ್ರ ಬೆಂಗಳೂರಿನಲ್ಲಿರುವ ಸತ್ಯಮೂರ್ತಿ ಅವರು ಅನುಮತಿಸಿದ್ದುದರಿಂದ ಅವರಿಗೆ ಈ ಮೂಲಕ ಧನ್ಯವಾದ ಅರ್ಪಣೆ. ಮುಂದಿನ ವಾರಗಳಿಂದ “ಸಾಂಸ್ಕøತಿಕ ಕಾವೇರಿ” ಎನ್ನುವ ದ್ವಿತೀಯ ಭಾಗ ಪ್ರಾರಂಭಗೊಳ್ಳಲಿದೆ.)