ಶ್ರೀಮಂಗಲ, ಆ. 20: ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಇಂದು ಕಂದಾಯ ಇಲಾಖೆಯ ವಿವಿಧ ಅಧಿಕಾರಿಗಳ ತಂಡದೊಂದಿಗೆ ಶ್ರೀಮಂಗಲ ಹಾಗೂ ಹುದಿಕೇರಿ ಹೋಬಳಿಯ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ ಮಳೆಯಿಂದ ಆಗಿರುವ ಅನಾಹುತಗಳ ಕುರಿತು ಪರಿಶೀಲನೆ ನಡೆಸಿದರು.

ಶ್ರೀಮಂಗಲ ಹೋಬಳಿಯ ಗ್ರಾಮಗಳಲ್ಲಿ ಭಾರಿ ಗಾಳಿ ಮಳೆಯಿಂದ ಬೆಳೆ ಕಳೆದುಕೊಂಡ ರೈತರ ಜಮೀನುಗಳನ್ನು ಪರಿಶೀಲನೆ ಮಾಡಿದರು ಶ್ರೀಮಂಗಲ ಹೋಬಳಿಯಲ್ಲಿ ಕುರ್ಚಿ ಗ್ರಾಮದ ಅಜ್ಜಮಾಡ ಬಿ ತಿಮ್ಮಯ್ಯ ಅವರ ಬಾಳೆ ತೋಟ, ಕಟ್ಟೆರ ತಮ್ಮಯ್ಯ ಅವರ ಕಾಫಿ ತೋಟ ಹಾಗೂ ಕುಮಟೂರು ಗ್ರಾಮದ ತೀತಿರ ಸೂರಜ್ ಅವರ ಬಾಳೆ ತೋಟ ಹಾಗೂ ಕೆ. ಬಾಡಗ ಗ್ರಾಮದಲ್ಲಿ ಅಡಿಕೆ ತೋಟಗಳು ಮಳೆಗಾಳಿಯಿಂದ ಹಾನಿಗೊಳಗಾದದನ್ನು ವೀಕ್ಷಿಸಿದರು.

ನಂತರ ನಿರೀಕ್ಷಣಾ ಮಂದಿರದಲ್ಲಿ ಜಿಲ್ಲಾಧಿಕಾರಿಯನ್ನು ಬೇಟಿ ಮಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಟಿ ಚಂಗಪ್ಪ, ಹುದಿಕೇರಿ ಹೋಬಳಿ ಅಧ್ಯಕ್ಷರಾದ ಚಂಗುಲಂಡ ಸೂರಜ್, ಬಿರುನಾಣಿಯ ಸಂಚಾಲಕ ಕರ್ತಮಾಡ ಸುಜು ಪೆÇನ್ನಪ್ಪ, ಕಾಯಪಂಡ ಮಧು, ಕರ್ತಮಾಡ ರಾಯ್ ಮಲ್ಲೆಂಗಡ ಶಮಿ ಹಾಗೂ ಶ್ರೀಮಂಗಲ, ಬೀರುನಾಣಿ, ಹುದಿಕೇರಿ ಭಾಗದ ಇತರ ರೈತ ಮುಖಂಡರು ನಮ್ಮ ಈ ಎರಡು ಹೋಬಳಿಗಳಲ್ಲಿ ಅತಿಯಾದ ಗಾಳಿ ಮಳೆಯಿಂದ ರೈತರ ಕಾಫಿ, ಅಡಕೆ, ಕಾಳುಮೆಣಸು ಕೊಳೆರೋಗಕ್ಕೆ ತುತ್ತಾಗಿ ಹಾಗೂ ಭೀಕರಗಾಳಿಯಿಂದ ಹಲವಾರು ಮರಗಳು ಬಿದ್ದು ರೈತರು ಬೆಳೆಗಳನ್ನು ಕಳೆದುಕೊಂಡು ಸಂಕಷ್ಟದ ದಿನಗಳನ್ನು ಕಳೆಯುತ್ತಿರುವುದನ್ನು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದರು. ಕಂದಾಯ ಇಲಾಖೆಯ ಕೆಲವು ಅವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಬೆಳೆಕಳೆದುಕೊಂಡ ಎಲ್ಲಾ ರೈತರು ಅರ್ಜಿ ಸಲ್ಲಿಕೆ ಮಾಡಿ ಸರಕಾರದ ಮಾರ್ಗದ ಸೂಚಿಯಂತೆ ಸೂಕ್ತ ಪರಿಹಾರ ನೀಡಲಾಗುತ್ತದೆ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಡನೆ ಚರ್ಚೆ ಮಾಡಿ ಶ್ರೀಮಂಗಲ ಹಾಗೂ ಬೀರುನಾಣಿ ಭಾಗದ ಮೊಬೈಲ್ ನೆಟ್ವರ್ಕ್ ಸರಿಪಡಿಸಲು ಕೂಡಲೇ ಆದೇಶ ನೀಡುವುದಾಗಿ ಭರವಸೆ ನೀಡಿದರು.

ದ. ಕೊಡಗಿನ ಬೆಳೆ ಹಾನಿ ಪ್ರದೇಶಗಳಿಗೆ ಡಿ.ಸಿ. ಭೇಟಿ

ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಹೈಸೊಡ್ಲೂರು, ಬೇಗೂರು ಗ್ರಾಮದಲ್ಲಿ ಪ್ರವಾಹದಿಂದ ಭತ್ತ ಬೆಳೆ ನಾಶವಾಗಿರುವ ಸ್ಥಳಕ್ಕೆ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸಬಾನಾ ಎಂ. ಶೇಕ್ ಅವರೊಂದಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಇದೇ ಸಂದರ್ಭ ರೈತರೇ ಮೊಬೈಲ್ ಮೂಲಕ ತಮ್ಮ ಜಾಗದ ಬೆಳೆಯನ್ನು ಆರ್.ಟಿ.ಸಿ.ಯಲ್ಲಿ ನಮೂದಿಸುವ ಬೆಳೆ ಸಮೀಕ್ಷೆ ಬಗ್ಗೆ ಆಯೋಜಿಸಿದ್ದ ಪ್ರಾತ್ಯಕ್ಷಿಕೆಯನ್ನು ಅವರು ವೀಕ್ಷಿಸಿದರು.

ಹೈಸೊಡ್ಲೂರು ಗ್ರಾಮದ ಮಾಚಿಮಾಡ ಗಗನ್ ಅವರ ಗದ್ದೆಯಲ್ಲಿ ಬೆಳೆ ನಮೂದಿಸುವ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಯ ಜಂಟಿ ಸಹಯೋಗದಲ್ಲಿ ನಡೆಯಿತು.

ಈ ಸಂದರ್ಭ ಹುದಿಕೇರಿ ಕಂದಾಯ ಪರಿವೀಕ್ಷಕ ನಿಸಾನ್, ಕೃಷಿ ಇಲಾಖೆಯ ಎ.ಓ. ಗಳಾದ ಪೆÇನ್ನಂಪೇಟೆ ಹೋಬಳಿಯ ರೀನಾ, ಬಾಳೆಲೆ ಹೋಬಳಿಯ ಮೀರಾ, ಹುದಿಕೇರಿ ಹೋಬಳಿಯ ಕವಿತಾ, ಕೃಷಿ ಇಲಾಖೆಯ ಆತ್ಮಯೋಜನೆಯ ಸಿಬ್ಬಂದಿಗಳು, ಹುದಿಕೇರಿ ಕೃಷಿ ಇಲಾಖೆಯ ಲೆಕ್ಕಾಧಿಕಾರಿ ಚಂಗುಲಂಡ ಹಾಜರಿದ್ದರು. ಅಯ್ಯಪ್ಪ ಕೃಷಿ ಪ್ರಾತ್ಯಕ್ಷಿಕೆ ನೀಡಿದರು.