ಮಡಿಕೇರಿ, ಆ. 20: ಕೊರೊನಾ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಇದರ ಪರಿಣಾಮ ಶಾಲಾ ಕಾಲೇಜುಗಳಿಗೆ ಬೀಗ ಬಿದ್ದಿದೆ. ಮಾರ್ಚ್ ತಿಂಗಳಲ್ಲಿ ಮುಚ್ಚಲ್ಪಟ್ಟ ಶಾಲಾ ಕಾಲೇಜುಗಳು ಇದುವರೆಗೆ ತೆರೆದಿಲ್ಲ. ಆಗಸ್ಟ್ 31 ರವರೆಗೆ ಶಾಲಾ-ಕಾಲೇಜುಗಳು ತೆರೆಯಲು ಅನುಮತಿಯಿಲ್ಲ. ಜುಲೈ 14 ರಂದು ಪದವಿಪೂರ್ವ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಹೊರಬಿದ್ದಿದೆ. ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಪದವಿ ಕಾಲೇಜು ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ.

ಪದವಿಪೂರ್ವ ತರಗತಿಯ ನಂತರ, ಉತ್ತೀರ್ಣರಾದ ಬಹುತೇಕ ಶೇಕಡಾ 85ರಷ್ಟು ವಿದ್ಯಾರ್ಥಿಗಳು ಪದವಿಗೆ ಪ್ರವೇಶ ಪಡೆಯುವುದು ವಾಡಿಕೆ. ಆದರೆ ಪ್ರಸಕ್ತ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಪದವಿಗೆ ಕಾಲೇಜಿಗೆ ಪ್ರವೇಶ ಪಡೆಯಲು ಆಸಕ್ತಿ ತೋರುತ್ತಿಲ್ಲ. ನಿತ್ಯ ಬೆರಳೆಣಿಕೆಯಷ್ಟು ಅರ್ಜಿಗಳು ಮಾತ್ರ ವಿತರಣೆಯಾಗುತ್ತಿದೆ.

ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ವಿದ್ಯಾರ್ಥಿಗಳು ಮನೆಯಿಂದ ಹೊರಗೆ ಬರುವುದೇ ಕಷ್ಟಕರವಾಗಿದೆ. ಬಹುತೇಕ ಕಡೆ ಸಾರಿಗೆ ಸಂಪರ್ಕ ಕಡಿತಗೊಂಡಿರುವುದು ಮತ್ತಷ್ಟು ಸಮಸ್ಯೆಯಾಗಿದೆ. ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ಬರಲು ಕೊಡಗು ಜಿಲ್ಲೆಯಲ್ಲಿ ಖಾಸಗಿ ಬಸ್‍ಗಳನ್ನೇ ಅವಲಂಭಿಸಿಬೇಕಾದ ಪರಿಸ್ಥಿತಿ ಇದೆ. ಜಿಲ್ಲೆಯಲ್ಲಿ ಪ್ರಸ್ತುತ ಒಂದೆರಡು ಖಾಸಗಿ ಬಸ್‍ಗಳು ಮಾತ್ರ ಸಂಚರಿಸುತ್ತಿವೆ. ಜಿಲ್ಲೆಯಲ್ಲಿ ಸರ್ಕಾರಿ ಸಾರಿಗೆ ಬಸ್‍ಗಳು ಸೇವೆ ಗ್ರಾಮೀಣ ಪ್ರದೇಶಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರವಾಗಿದೆ. ಇದರಿಂದ ಕಾಲೇಜಿಗೆ ತೆರಳಿ ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಲು ಕಷ್ಟಕರವಾಗುತ್ತಿದೆ.

ಜಿಲ್ಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಒಳಪಡುವ ಜಿಲ್ಲೆಯ ಪ್ರತಿಷ್ಠಿತ ಕಾಲೇಜುಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು, ಕುಶಾಲನಗರದ ಸರ್ಕಾರಿ ಪದವಿ ಕಾಲೇಜು ಹಾಗೂ ವೀರಾಜಪೇಟೆ ಸರ್ಕಾರಿ ಪದವಿ ಕಾಲೇಜು ಹಾಗೂ ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳಿಗಲ್ಲಿ ಪ್ರವೇಶ ಪಡೆಯಲು ಅರ್ಜಿಗಳು ವಿತರಣೆಯಾಗುತ್ತಿದೆ.

ವ್ಯಾಪಕವಾಗಿ ಹರಡುತ್ತಿರುವ ಕೊರೊನಾಗೆ ಹೆದರಿ ವಿದ್ಯಾರ್ಥಿಗಳು ಕಾಲೇಜಿನತ್ತ ನಿರೀಕ್ಷಿತ ಸಂಖ್ಯೆಯಲ್ಲಿ ತೆರಳುತ್ತಿಲ್ಲ. ಸಾಮಾನ್ಯವಾಗಿ ದ್ವಿತೀಯ ಪಿ.ಯು.ಸಿ ಫಲಿತಾಂಶ ಪ್ರಕಟವಾದ ಮರುದಿನವೇ ಪದವಿಗೆ ಪ್ರವೇಶ ಪಡೆಯಲು, ಅರ್ಜಿಗೆ ವಿದ್ಯಾರ್ಥಿಗಳು ಮುಗಿಬೀಳುತ್ತಿದ್ದರು. ಆದರೆ ಅರ್ಜಿಗಳನ್ನು ವಿತರಣೆ ಮಾಡುತ್ತಿದ್ದರೂ ಬೆರಳೆಣಿಕೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಪೆÇೀಷಕರು ಹಾಗೂ ಸಂಬಂಧಿಕರು ಬಂದು ಅರ್ಜಿಗಳನ್ನು ಪಡೆಯುತ್ತಿರುವ ದೃಶ್ಯ ಜಿಲ್ಲೆಯಲ್ಲಿ ಕಂಡುಬರುತ್ತಿದೆ.

ಬಿ.ಎ., ಬಿಕಾಂ, ಬಿಎಸ್ಸಿ, ಬಿ.ಬಿ.ಎ, ಬಿ.ಬಿ.ಎಂ ಹೀಗೆ ವಿವಿಧ ಕೋರ್ಸ್‍ಗಳಿಗೆ ಜಿಲ್ಲೆಯ ಪದವಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಇದೀಗ ಮಂಗಳೂರು ವಿಶ್ವವಿದ್ಯಾನಿಲಯದಿಂದ ಎರಡು ದಿನಗಳ ಹಿಂದೆ ಹೊಸ ಆದೇಶ ಹೊರಬಿದ್ದಿದೆ.

ಸೆಪ್ಟೆಂಬರ್ 1ರೊಳಗೆ ಪದವಿ ಪ್ರವೇಶಾತಿ ಪ್ರಕ್ರಿಯೆಯನ್ನು ಪೂರ್ಣ ಗೊಳಿಸಬೇಕೆಂದು, ಆದರೆ ವಿದ್ಯಾರ್ಥಿಗಳಲ್ಲಿ ಹುರುಪು ಮಾಯವಾಗಿದ್ದು, ಅರ್ಜಿ ಪಡೆದುಕೊಳ್ಳಲು ವಿಳಂಬ ಮಾಡುತ್ತಿರುವುದು ಕಂಡುಬಂದಿದೆ.

- ಕೆ.ಎಂ. ಇಸ್ಮಾಯಿಲ್ ಕಂಡಕರೆ