ನಾಪೆÇೀಕ್ಲು, ಆ. 20: ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಡುವ ಕೊಕೇರಿ ಮತ್ತು ಬಾವಲಿ ರಸ್ತೆಯ ಡಾಂಬರೀಕರಣಕ್ಕೆ ಪ್ರಧಾನ ಮಂತ್ರಿಗಳ ಗ್ರಾಮ ಸಡಕ್ ಯೋಜನೆಯಡಿಯಲ್ಲಿ 3.50 ಕೋಟಿ ವೆಚ್ಚದಲ್ಲಿ 5.7 ಕಿ,ಮೀ ರಸ್ತೆ ಮತ್ತು 700 ಮೀ ಕಾಂಕ್ರೀಟ್ ರಸ್ತೆ, ಮತ್ತು 15 ಮೋರಿಗಳನ್ನು ನಿರ್ಮಿಸಲು ಈ ವಿಭಾಗದ ಜಿಲ್ಲಾ ಪಂಚಾಯತ್ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ ಚಾಲನೆ ನೀಡಿದರು.
ನಂತರ ಕೊಕೇರಿ ಮಹಿಳಾ ಸಮಾಜದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ವಿಷಯದಲ್ಲಿ ಊರಿನ ಜನರು ಒಂದಾಗಬೇಕು. ಏನೇ ವಿಷಯಗಳಿದ್ದರೂ ಅದನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಂಡು ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದರು.
ಈ ಕಾಮಗಾರಿ ಪ್ರಾರಂಭಿಸಿದ ಮೇಲೆ ಕಳಪೆಯಾಗದಂತೆ ನೋಡಿಕೊಳ್ಳುವುದು ನಿಮ್ಮಗಳ ಕರ್ತವ್ಯ ಎಂದ ಅವರು ಕಾಮಗಾರಿಗಳನ್ನು ಕೂಡಲೇ ಕೈಗೆತ್ತಿಕೊಂಡು ಆದಷ್ಟು ಬೇಗನೆ ಮುಗಿಸಲಾಗುವುದು ಎಂದರು. ರಸ್ತೆ ನಿರ್ಮಾಣಕ್ಕೆ ರಸ್ತೆ ಬದಿಯ ಜಾಗದವರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ಉಮಾಪ್ರಭು, ಗ್ರಾಮದ ಹಿರಿಯ ಮೂಡೆರ ಶಂಭು ಮೊಣ್ಣಪ್ಪ ಮಾತನಾಡಿದರು. ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪೊನ್ನಚಂಡ ಮಧುಮಾದಪ್ಪ, ಆರ್ಎಂಸಿ ಸದಸ್ಯ ಚೇನಂಡ ಗಿರೀಶ್ಪೂಣಚ್ಚ, ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಪೊಕ್ಕುಳಂಡ್ರ ಧನೋಜ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಕೆ.ಯು. ಪ್ರಕಾಶ್, ಬಿಳಿಯಂಡ್ರ ರತೀಶ್ಕುಮಾರ್, ಕೋಡಿ ಪ್ರಸನ್ನ, ಶಾಂತಿ, ಮೇಚಂಡ ರಾಜು ಚೆಂಗಪ್ಪ, ಗುತ್ತಿಗೆದಾರ ಬಾಬು, ಪಾಲ್ಗೊಂಡಿದ್ದರು. ಚೇನಂಡ ಸಂಪತ್ ಸ್ವಾಗತಿಸಿದರು. ಚೇನಂಡ ಜಪ್ಪು ವಂದಿಸಿದರು. ಭಗವತಿ ದೇವಾಲಯದ ಅರ್ಚಕ ಪೃಥ್ವಿರಾಜ್ ಪೂಜೆ ನೆರವೇರಿಸಿದರು.
-ದುಗ್ಗಳ