ಮಡಿಕೇರಿ, ಆ. 20: ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯಲ್ಲಿ ಭೂಕುಸಿತ ಹಾಗೂ ಪ್ರವಾಹ ಸಂಭವಿಸಿ ಸಾಕಷ್ಟು ನಷ್ಟ ಉಂಟಾಗಿದ್ದು, ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ. ಬೋಪಯ್ಯ ಅವರು ಬೆಂಗಳೂರಿನಲ್ಲಿ ಭೇಟಿ ಮಾಡಿ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಭೂಕುಸಿತ ಹಾಗೂ ಪ್ರವಾಹದಿಂದಾಗಿ ರಸ್ತೆ ಹಾಗೂ ಸೇತುವೆಗೆ ಮರಗಳು ಬಿದ್ದಿದ್ದು, ಬೀಟಿಮರ ಹೊರತುಪಡಿಸಿ ಉಳಿದ ಮರಗಳನ್ನು ಮಾಲೀಕರೇ ಮಾರಾಟ ಮಾಡಲು ಅವಕಾಶ ನೀಡಬೇಕು ಎಂದು ಕೆ.ಜಿ ಬೋಪಯ್ಯ ಅವರು ಮನವಿ ಮಾಡಿದ್ದಾರೆ.

ಹಾಗೆಯೇ ಪ್ರವಾಹದಿಂದ ಗದ್ದೆಗೆ ಮರಳು ಮತ್ತು ಮಣ್ಣು ತುಂಬಿ ಹೋಗಿದ್ದು, ರಾಯಲ್ಟಿ ಪಾವತಿಸದೆ ಮರಳು ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಅವರು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರತ್ಯೇಕ ಬೇಡಿಕೆ ಸಲ್ಲಿಸುವಂತೆ ಸಲಹೆ ಮಾಡಿದ್ದಾರೆ.

ಈ ಹಿಂದೆ ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರಕ್ಕೆ 536 ಕೋಟಿ ರೂ. ಪ್ರಕಟಿಸಲಾಗಿತ್ತು, ಅದರಲ್ಲಿ ಈಗಾಗಲೇ 100 ಕೋಟಿ ರೂ. ಬಿಡುಗಡೆಯಾಗಿದೆ. ಬಾಕಿ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ ಎಂದು ಶಾಸಕ ಕೆ.ಜಿ ಬೋಪಯ್ಯ ಅವರು ತಿಳಿಸಿದ್ದಾರೆ.