ಮಡಿಕೇರಿ, ಆ. 20: ಅಕ್ರಮವಾಗಿ ಕೋಳಿಗಳನ್ನು ಕಟ್ಟಿ ಜೂಜಾಡುತ್ತಿದ್ದ ವೇಳೆ ದಾಳಿ ನಡೆಸಿರುವ ಪೊಲೀಸರು ಹತ್ತು ಮಂದಿಯನ್ನು ಬಂಧಿಸಿ ಹಣ ಹಾಗೂ ಕೋಳಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಬಳಿಕ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.ನಿನ್ನೆ ದಿನ ಸಂಪಾಜೆ ಚೆಂಬು ಗ್ರಾಮದ ಊರುಬೈಲ್‍ನಲ್ಲಿ ಗುಂಪೊಂದು ಕೋಳಿಗಳನ್ನು ಕಟ್ಟಿ ಅಕ್ರಮವಾಗಿ ಜೂಜಾಡುತ್ತಿರುವುದಾಗಿ ದೊರೆತ ಮಾಹಿತಿ ಮೇರೆಗೆ ಡಿಸಿಐಬಿ ತಂಡ ಜೂಜಾಟದ ಸ್ಥಳಕ್ಕೆ ದಾಳಿ ನಡೆಸಿದ್ದು, ಕೋಳಿಗಳನ್ನು ಕಟ್ಟಿ ಜೂಜಾ ಡುತ್ತಿದ್ದ 10 ಮಂದಿಯನ್ನು ಬಂಧಿಸಿ 15 ಸಾವಿರ ರೂ. ಬೆಲೆ ಬಾಳುವ 35 ಕೋಳಿಗಳನ್ನು ಹಾಗೂ ನಗದು ರೂ. 20,300ಗಳನ್ನು ವಶಪಡಿಸಿ ಕೊಂಡಿದ್ದಾರೆ. ಗುಂಪಿನಲ್ಲಿದ್ದ ಇನ್ನೂ ಹಲವರು ಕೋಳಿಗಳೊಂದಿಗೆ ಪರಾರಿಯಾಗಿದ್ದಾರೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜೂಜಾಡುತ್ತಿದ್ದ ವ್ಯಕ್ತಿಗಳ ವಿರುದ್ಧ ಪ್ರಕರಣ (ಮೊದಲ ಪುಟದಿಂದ) ದಾಖಲಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪೊಲೀಸ್ ಅಧೀಕ್ಷಕಿ ಕ್ಷಮ ಮಿಶ್ರ ಅವರ ಮಾರ್ಗದರ್ಶನದಲ್ಲಿ ಡಿಸಿಐಬಿಯ ಇನ್ಸ್‍ಪೆಕ್ಟರ್ ಎನ್ ಕುಮಾರ್ ಆರಾಧ್ಯ, ಮಡಿಕೇರಿ ಗ್ರಾಮಾಂತರ ಠಾಣಾ ಉಪನಿರೀಕ್ಷಕ ಹೆಚ್.ವಿ. ಚಂದ್ರ ಶೇಖರ್, ಡಿಸಿಐಬಿ ಸಿಬ್ಬಂದಿ ಗಳಾದ ವಿ.ಜಿ. ವೆಂಕಟೇಶ್, ಬಿ.ಎಲ್. ಯೋಗೇಶ್ ಕುಮಾರ್, ಕೆ.ಆರ್. ವಸಂತ, ಎಂ.ಎನ್. ನಿರಂಜನ್, ಕೆ.ಎಸ್. ಶಶಿಕುಮಾರ್ ಹಾಗೂ ಸಂಪಾಜೆ ಉಪಠಾಣಾ ಎಎಸ್‍ಐ ಶ್ರೀಧರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.