ಮಡಿಕೇರಿ, ಆ. 18 : ಬೆಳಕನ್ನೇ ಕಾಣದ ಕಡು ಬಡವರಿಗೆ..., ಗುಡ್ಡಗಾಡು ಪ್ರದೇಶಗಳಲ್ಲಿ ನೆಲೆಸಿರುವ ಕುಟುಂಬಗಳಿಗೆ ಬೆಳಕು ಒದಗಿಸುವ ಉದ್ದೇಶದೊಂದಿಗೆ ಕೇಂದ್ರ ಸರಕಾರ ಜಾರಿಗೊಳಿಸಿರುವ ‘ಸೌಭಾಗ್ಯ’ ಯೋಜನೆಯಡಿ ಗ್ರಾಹಕರಿಂದ ಹಣ ಪಡೆದು ವಿದ್ಯುತ್ ಸಂಪರ್ಕ ಕಲ್ಪಿಸಿರುವ ದಂಧೆಯ ಜಾಲ ಬೆಳಕಿಗೆ ಬಂದಿದೆ. ಈ ಸಂಬಂಧ ಇಲಾಖಾ ತನಿಖೆ ನಡೆದು ಪ್ರಬಾರ ಅಭಿಯಂತರರೋರ್ವರು ಅಮಾನತುಗೊಂಡಿದ್ದಾರೆ. ಆದರೆ ಈ ವಂಚನೆಯ ಜಾಲದ ಹೆಜ್ಜೆಯನ್ನು ಅರಸುತ್ತಾ ಹೋದಂತೆ ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ. ಮತ್ತೋರ್ವ ಅಧಿಕಾರಿ ಹಾಗೂ ಗುತ್ತಿಗೆದಾರ ರಂತೆ, ಏಜೆಂಟರಂತೆ ಕಾರ್ಯನಿರ್ವಹಿಸುತ್ತಿರುವವರು ಭಾಗಿಯಾಗಿರುವುದು ತಿಳಿದು ಬಂದಿದೆ.ಸೌಭಾಗ್ಯ ಯೋಜನೆಯಡಿ ಕಾಂತೂರು - ಮೂರ್ನಾಡು ವ್ಯಾಪ್ತಿಯ ಗ್ರಾಹಕರಿಂದ ಹಣ ವಸೂಲಿ ಮಾಡಿದ್ದಲ್ಲದೆ, ಇತರ ಸಾಮಾನ್ಯ ಕೆಲಸಗಳನ್ನು ಕೂಡ ಗ್ರಾಹಕರಿಂದ ಹಣ ಪಡೆದು ಸೌಭಾಗ್ಯ ಯೋಜನೆಯಡಿ ಪೂರೈಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಶಕ್ತಿ’ಯಲ್ಲಿ ಪ್ರಕಟಗೊಂಡ ವರದಿ ಆಧಾರದಲ್ಲಿ ಈ ಬಗ್ಗೆ ತನಿಖೆ ನಡೆಸಿದ ಇಲಾಖಾಧಿಕಾರಿಗಳು ದುರುಪಯೋಗಪಡಿಸಿ ಕೊಂಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ
(ಮೊದಲ ಪುಟದಿಂದ) ಮೂರ್ನಾಡು ಶಾಖೆಯಲ್ಲಿ ಪ್ರಬಾರ ಅಭಿಯಂತರರಾಗಿದ್ದ ಎಂ. ಚೇತನ್ಕುಮಾರ್ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿದ್ದರು.
ಇನ್ನಷ್ಟು ಅವ್ಯವಹಾರ
ಇದೇ ವಿಚಾರದ ಬಗ್ಗೆ ಮತ್ತಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ವಾಸ್ತವದ ಒಳಹೊಕ್ಕು ನೋಡಿದಾಗ ಇನ್ನಷ್ಟು ಅವ್ಯವಹಾರ ಆಗಿರುವುದು ಗೋಚರಿಸಿದೆ. ಪಾಲೆಮಾಡು ಪೈಸಾರಿಯಲ್ಲಿ ಸುಮಾರು 250 ರಿಂದ 300 ಕುಟುಂಬಗಳು ನೆಲೆಸಿವೆ. ಇಲ್ಲಿ ಕಡು ಬಡವರೂ ಸೇರಿದಂತೆ ಅಲ್ಪಸ್ವಲ್ಪ ಉಳ್ಳವರು, ತಾರಸಿ ಮನೆಗಳಲ್ಲೂ ನೆಲೆನಿಂತವರಿದ್ದಾರೆ. ಇಲ್ಲಿಗೂ ಸೌಭಾಗ್ಯ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇಲ್ಲಿನ ಪ್ರತಿಮನೆಗಳಿಂದ ವಯರಿಂಗ್ ಮಾಡುವಾಗ ಹಾಗೂ ವಿದ್ಯುತ್ ಸಂಪರ್ಕ ಒದಗಿಸುವಾಗ ಒಟ್ಟು ರೂ.600, 800, 1000ಗಳಿಗಿಂತಲೂ (ಅನುಕೂಲಕ್ಕೆ ತಕ್ಕಂತೆ) ಹಣ ವಸೂಲಿ ಮಾಡಿರುವುದಾಗಿ ಅಲ್ಲಿನ ನಿವಾಸಿಗಳು ಹೇಳುತ್ತಾರೆ. ಸ್ಥಳೀಯರ ಮೂಲಕ ಹಣ ಸಂಗ್ರಹಿಸಿರುವುದಾಗಿ ಹೇಳುತ್ತಾರೆ.
ತಾರಸಿ ಮನೆಗೆ ಸಂಪರ್ಕ
ವಾಟೆಕಾಡುವಿನಲ್ಲಿ ರಸ್ತೆ ಬದಿಯಲ್ಲಿಯೇ ಇರುವ ನೂತನವಾಗಿ ನಿರ್ಮಾಣವಾಗುತ್ತಿರುವ, ದೊಡ್ಡದಾದ ತಾರಸಿ ಮನೆಗೂ ‘ಸೌಭಾಗ್ಯ’ ಕಲ್ಪಿಸಲಾಗಿದೆ. ಆಲಿ ಎಂಬವರಿಗೆ ಸೇರಿದ ಮನೆಯ ಸುತ್ತಮುತ್ತ ಮನೆಗಳಿದ್ದು, ವಿದ್ಯುತ್ ಮಾರ್ಗ ಕೂಡ ಹಾದು ಹೋಗಿದೆ. ಆದರೂ ಅಷ್ಟೊಂದು ದೊಡ್ಡ ಮನೆಗೆ ‘ಉಚಿತ’ ವಿದ್ಯುತ್ ಭಾಗ್ಯ ಕಲ್ಪಿಸಲಾಗಿದೆ. ಇಲ್ಲಿಯೂ ಯೋಜನೆಯ ದುರುಪಯೋಗವಾಗಿರುವುದು ಕಂಡುಬರುತ್ತದೆ.
ಅಷ್ಟೊಂದು ದೊಡ್ಡ ಮನೆಗೆ ಕೇವಲ ಒಂದು ಬಲ್ಬ್ ಮತ್ತು ಸ್ವಿಚ್ ಸಾಕಾಗಬಹುದೇ ಎಂಬುದು ಇಲ್ಲಿ ಪ್ರಶ್ನೆಯಾಗಿದೆ...!
ಕಾಂತೂರು - ಮೂರ್ನಾಡು ಪಟ್ಟಣಕ್ಕೆ ಹೊಂದಿಕೊಂಡಿರುವ ಪ್ರದೇಶದ ಬಡಾವಣೆಯೊಂದರ ತಾರಸಿ ಮನೆಗೂ ಸೌಭಾಗ್ಯ ವಿದ್ಯುತ್ ಕಲ್ಪಿಸಲಾಗಿದೆ. ಈ ಮನೆಗೆ ಮೂರು ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದ್ದು, ಸಂಪರ್ಕ ಒದಗಿಸಲು ರೂ. 10 ಸಾವಿರ ಪಡೆದುಕೊಂಡಿರುವುದಾಗಿ ಮಾಹಿತಿ ಲಭಿಸಿದೆ.
ಕಂಬದ ಹೆಸರಲ್ಲಿ ವಸೂಲಿ...!
ಇನ್ನೂ ಈ ನಿಟ್ಟಿನಲ್ಲಿ ಹುಡುಕಾಟಕ್ಕೆ ಇಳಿದಾಗ, ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಈ ಯೋಜನೆಯಡಿ ಸಾಕಷ್ಟು ದುರ್ಬಳಕೆ ಆಗಿರುವ ಬಗ್ಗೆ ಮಾಹಿತಿ ಲಭಿಸಿದೆ.
ಗ್ರಾ.ಪಂ. ವ್ಯಾಪ್ತಿಯ ಹೊಸ್ಕೇರಿ ಗ್ರಾಮದ ಗಣೇಶ್ ಎಂಬವರು ರಸ್ತೆ ಬದಿಯಲ್ಲಿ ನೂತನವಾಗಿ ಮನೆ ನಿರ್ಮಿಸುತ್ತಿದ್ದು, ಮನೆಗೆ ವಿದ್ಯುತ್ ಸಂಪರ್ಕಕ್ಕೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಮನೆಗೆ ವಿದ್ಯುತ್ ಸಂಪರ್ಕ ಒದಗಿಸಲು ಹತ್ತು ಕಂಬಗಳ ಅವಶ್ಯಕತೆಯಿದ್ದು, ಸುಮಾರು ರೂ. 40 ಸಾವಿರ ನೀಡಬೇಕಾಗುತ್ತದೆ ಎಂದು ಗುತ್ತಿಗೆ ಕಾರ್ಯನಿರ್ವಹಿಸುವ ಹಾಲೇರಿ ಸತೀಶ್ ಎಂಬವರು ಹೇಳಿದ್ದಾರೆ. ಬಳಿಕ ಹಾಕತ್ತೂರಿನ ಗುತ್ತಿಗೆದಾರನಂತೆ ಕೆಲಸ ಮಾಡುವ ಗಣೇಶ್ ಎಂಬಾತ ಇಂಜಿನಿಯರ್ಗಳಿಗೆ ಹಣ ನೀಡಬೇಕಾಗುತ್ತದೆ ಎಂದು ಮೂರ್ನಾಡು ಶಾಖೆಯ ಮೇಲ್ವಿಚಾರಕರಾಗಿರುವ ನಾಗೇಂದ್ರ ಅವರ ಮೂಲಕ ರೂ. 25 ಸಾವಿರಕ್ಕೆ ವ್ಯವಹಾರ ಕುದುರಿಸಿದ್ದಾನೆ. ಈ ಬಗ್ಗೆ ಸಾಕಷ್ಟು ಮಾತುಕತೆ ಬಳಿಕ ಗಣೇಶ್ ಅವರು ರೂ. 16 ಸಾವಿರ ನಾಗೇಂದ್ರ ಅವರಿಗೆ ನೀಡಿದ್ದಾರೆ. ಅಲ್ಲದೆ, ವಿದ್ಯುತ್ ಕೆಲಸ ಮಾಡಲು ಬಂದವರಿಗೆ ರೂ.2,500 ಹಣ ನೀಡಿದ್ದಾರೆ. ರೂ.16 ಸಾವಿರ ಪಡೆದ ಅಧಿಕಾರಿಗಳು ಸೌಭಾಗ್ಯ ವಿದ್ಯುತ್ ಯೋಜನೆಯಡಿ ಕಂಬ ಅಳವಡಿಸಿ, ಮೀಟರ್ ಹಾಗೂ ಒಂದು ಬಲ್ಬ್ ಹಾಗೂ ಒಂದು ಸ್ವಿಚ್ ಅಳವಡಿಸಿದ್ದಾರೆ. ಇನ್ನೂ ಕೂಡ ಗೋಡೆ ಕೆಲಸ ಆಗದ ಕಾರಣ ಬಲ್ಬ್ ಅನ್ನು ಕಿಟಕಿಯಲ್ಲಿ ತೂಗು ಹಾಕಿ ತೆರಳಿದ್ದಾರೆ. ಇನ್ನೂ ಸಂಪರ್ಕ ಕಲ್ಪಿಸಿಲ್ಲ. ಇದೀಗ ಗಣೇಶ್ ಅವರು ಅಷ್ಟು ದೊಡ್ಡ ಮನೆಗೆ ಒಂದು ಬಲ್ಬ್ ಇರಿಸಿಕೊಂಡು ಏನು ಮಾಡುವುದೆಂಬ ಚಿಂತೆಯಲ್ಲಿದ್ದಾರೆ.
ವೃದ್ಧರಿಂದ 10 ಸಾವಿರ...!
ಮರಗೋಡು ಗ್ರಾ.ಪಂ. ವ್ಯಾಪ್ತಿಯ ಕಟ್ಟೆಮಾಡುವಿನ ಶ್ರೀ ಮೃತ್ಯುಂಜಯ ದೇವಾಲಯ ಬಳಿ ಇರುವ ವೃದ್ಧ ದಂಪತಿಯ ಮನೆಗೂ ಇದೇ ರೀತಿ ಸಂಪರ್ಕ ಕಲ್ಪಿಸಿ ಹಣ ಪಡೆಯಲಾಗಿದೆ. ಎರಡು ಕಂಬಗಳನ್ನು ಅಳವಡಿಸಲಾಗಿದ್ದು, ಇನ್ನೂ ಕೂಡ ಸಂಪರ್ಕ ಕಲ್ಪಿಸಿಲ್ಲ. ಆದರೆ, ರೂ. 10 ಸಾವಿರ ಹಣ ಪಡೆದುಕೊಂಡಿರು ವುದಾಗಿ ವೃದ್ಧರಾದ ಬೋಪಯ್ಯ ಹೇಳುತ್ತಾರೆ.
ಇನ್ನಷ್ಟು ಹಣ ಪಡೆಯುವ ಹುನ್ನಾರ...!
ವಿದ್ಯುತ್ ಸಂಪರ್ಕದ ಬೇಡಿಕೆ ಬಂದ ನೂತನ, ತಾರಸಿ ಮನೆಗಳ ಗ್ರಾಹಕರಿಗೆ ಸದ್ಯಕ್ಕೆ ಸೌಭಾಗ್ಯ ಯೋಜನೆಯಡಿ ಒಂದು ಬಲ್ಬ್ ಸಂಪರ್ಕ ಒದಗಿಸಿ, ಬಳಿಕ ಮನೆಯ ಇತರ ಕೋಣೆಗಳಿಗೂ ವಿಸ್ತರಿಸುವ ಸಂದರ್ಭ ಇನ್ನಷ್ಟು ಹಣ ಪಡೆಯುವ ಹುನ್ನಾರದೊಂದಿಗೆ ಅಧಿಕಾರಿಗಳು ಈ ರೀತಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿ ದ್ದಾರೆ. ಸಂಬಂಧಿಸಿದ ಇಲಾಖಾಧಿ ಕಾರಿಗಳು, ಜಿಲ್ಲಾಡಳಿತ, ಜನಪ್ರತಿನಿದಿ üಗಳು ಕೇಂದ್ರದ ಮಹತ್ವಾಕಾಂಕ್ಷೆಯ ಈ ಸೌಭಾಗ್ಯ ಯೋಜನೆ ಯಲ್ಲಾಗಿರುವ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಸರಕಾರಕ್ಕೆ ಹಾಗೂ ಬಡ ಗ್ರಾಹಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕಾಗಿದೆ. -ಸಂತೋಷ್.