ಮಡಿಕೇರಿ, ಆ. 19: ಕಳೆದ ತಾ. 6 ರಂದು ತಲಕಾವೇರಿಯ ಗಜರಾಜಗಿರಿ ಬೆಟ್ಟ ಕುಸಿತದಿಂದ ಸಂಭವಿಸಿರುವ ದುರಂತದಿಂದ ಇದುವರೆಗೂ ಕಣ್ಮರೆಯಾಗಿರುವ ಶಾಂತಾ ಆಚಾರ್ ಹಾಗೂ ಶ್ರೀನಿವಾಸ್ ಪಡಿಲಾಯ ಅವರುಗಳ ಪತ್ತೆಗಾಗಿ ಸತತ 14ನೇ ದಿನವಾದ ಇಂದೂ ಕಾರ್ಯಾಚರಣೆ ನಡೆಸಲಾಯಿತು. ತಲಕಾವೇರಿಯ ನಾಗತೀರ್ಥ ಸೇತುವೆ ಬಳಿಯಿಂದ ನದಿಗೆ ಅಡ್ಡಲಾಗಿ ಬಿದ್ದಿರುವ ಮರಮುಟ್ಟುಗಳನ್ನು ಜೆಸಿಬಿ ಯಂತ್ರದಿಂದ ತೆರವುಗೊಳಿಸುವುದರೊಂದಿಗೆ ಇವರಿಬ್ಬರ ಪತ್ತೆ ಕಾರ್ಯ ಕೈಗೊಳ್ಳಲಾಯಿತು.ಆದರೆ, ಇದುವರೆಗೆ ಯಾವುದೇ ಮಾಹಿತಿ ಕಾರ್ಯಾಚರಣೆ ತಂಡಕ್ಕೆ ಲಭಿಸಿಲ್ಲ. ಕ್ಷೇತ್ರದ ಪ್ರಧಾನ ಅರ್ಚಕರಾಗಿದ್ದ ಟಿ.ಎಸ್. ನಾರಾಯಣಾಚಾರ್ ಮೃತದೇಹ ಈ ಮೊದಲು ಗೋಚರಿಸಿದ್ದ ಸ್ಥಳದ ಬಳಿ; ವಾರದ ಹಿಂದೆ ಶಾಂತಾ ಆಚಾರ್ ಹಾಗೂ ಶ್ರೀನಿವಾಸ್ ಪಡಿಲಾಯ ಅವರಿಬ್ಬರಿಗೆ ಸಂಬಂಧಿಸಿದ ಪ್ರತ್ಯೇಕ ಪರ್ಸ್ ಹಾಗೂ ಗುರುತು ಚೀಟಿ ಲಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಜಾಡು ಆಧರಿಸಿ ಇಂದು ಎನ್‍ಡಿಆರ್‍ಎಫ್

(ಮೊದಲ ಪುಟದಿಂದ) ಹಾಗೂ ಕೊಡಗು ಜಿಲ್ಲಾ ಪೊಲೀಸ್ ತಂಡ ಮತ್ತು ಅರಣ್ಯ ಸಿಬ್ಬಂದಿ ಜಂಟಿಯಾಗಿ ಹುಡುಕಾಟ ಕೈಗೊಂಡರೂ ಸಂಜೆಯ ತನಕ ಯಾವುದೇ ಕುರುಹು ದೊರಕಿರುವುದಿಲ್ಲ ಎಂದು ಭಾಗಮಂಡಲ ಪೊಲೀಸ್ ಠಾಣಾಧಿಕಾರಿ ಹೆಚ್. ಮಹದೇವ್ ಅವರು ಖಚಿತಪಡಿಸಿದ್ದಾರೆ. ಅಲ್ಲದೆ ಇದುವರೆಗೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಎಸ್‍ಡಿಆರ್‍ಎಫ್ ತಂಡವನ್ನು ರಾಜ್ಯ ಸರಕಾರದ ನಿರ್ದೇಶನದಂತೆ ಉತ್ತರ ಕರ್ನಾಟಕ ಪ್ರವಾಹ ಪೀಡಿತ ಪ್ರದೇಶಕ್ಕೆ ಕರೆಸಿಕೊಳ್ಳಲಾಗಿದೆ ಎಂದು ಗೊತ್ತಾಗಿದೆ.

-ಚಿತ್ರ: ಕೆ.ಡಿ. ಸುನಿಲ್