ಗೋಣಿಕೊಪ್ಪಲು, ಆ. 19: ಈ ಬಾರಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯಾಗಿದ್ದು ಈ ಬಗ್ಗೆ ಸರಕಾರ ಕೂಡಲೇ ಕೊಡಗಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಒತ್ತಾಯಿಸಿ ರೈತ ಸಂಘ ಜಿಲ್ಲಾಧಿಕಾರಿ ಅನಿಶ್ ಕಣ್ಮಣಿ ಜಾಯ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ಜಿಲ್ಲಾ ಪದಾಧಿಕಾರಿಗಳು ಭೇಟಿ ಮಾಡಿದರು.

ಕೊಡಗಿನಲ್ಲಿ ಸತತವಾಗಿ ಕಳೆದ ಮೂರು ವರ್ಷದಿಂದ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ,ಭೂ ಕುಸಿತ, ಬಿರುಗಾಳಿ, ಜಲಪ್ರಳಯವಾಗುತ್ತಿದೆ. ಆದ್ದರಿಂದ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಮನವಿ ಮಾಡಿದರು.

ಈ ಬಗ್ಗೆ ಕೇಂದ್ರ ಸರ್ಕಾರದ ಎನ್‍ಡಿಆರ್‍ಎಫ್ ಹಾಗೂ ರಾಜ್ಯ ಸರ್ಕಾರದ ಎಸ್‍ಡಿಆರ್‍ಎಫ್‍ನ ಪರಿಹಾರ ಮೂರು ಪಟ್ಟು ಹೆಚ್ಚಿಸಬೇಕು.

ವಿಶೇಷ ತಜ್ಞರ ತಂಡ ರಚನೆ ಸಂದರ್ಭ ಕಂದಾಯ, ಕೃಷಿ, ತೋಟಗಾರಿಕೆ, ಕಾಫಿ ಬೋರ್ಡ್ ಇಲಾಖೆಯೊಂದಿಗೆ ಆಯಾಯ ಭಾಗದ ಅನುಭವಿ ರೈತರನ್ನು ಒಳಗೊಂಡ ಸಮಿತಿ ರಚಿಸಬೇಕು. ಈ ತಂಡವು ಪ್ರಕೃತಿ ವಿಕೋಪದಲ್ಲಿ ನಷ್ಟ ಸಂಭವಿಸಿದ ಸ್ಥಳಗಳಿಗೆ ಭೇಟಿ ನೀಡಿ ವರದಿಯನ್ನು ಸರ್ಕಾರಕ್ಕೆ ಕಳುಹಿಸುವಂತಾಗಬೇಕು ಎಂದು ಗಮನ ಸೆಳೆಯಲಾಯಿತಲ್ಲದೆ ಇನ್ನಿತರ ಬೇಡಿಕೆಗಳನ್ನು ಮುಂದಿಡಲಾಯಿತು.