ಸುಂಟಿಕೊಪ್ಪ, ಆ. 18: ಇಲ್ಲಿಗೆ ಸಮೀಪದ ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯ ಮೋಟಂಡ ಎ. ಕುಟ್ಟಪ್ಪ ಅವರ ಮನೆ ಅಂಗಳಕ್ಕೆ ಮರಿಯಾನೆ ಸೇರಿದಂತೆ ಆನೆಗಳ ಹಿಂಡು ರಾತ್ರಿ ಮೂರು ಗಂಟೆಗೆ ದಾಳಿ ಮಾಡಿ ಅಂಗಳದಲ್ಲಿ ಘೀಳಿಡುತ್ತಾ ಮನೆಯವರನ್ನು ನಿದ್ರೆ ಮಾಡದಂತೆ ಭಯ ಭೀತರನ್ನಾಗಿಸಿದೆ.
ರಾತ್ರಿ ವೇಳೆ ಆನೆಗಳನ್ನು ಓಡಿಸಲು ಮನೆಯವರು ಹರಸಾಹಸ ಪಡಬೇಕಾಯಿತು. ಸಿಗರೇಟಿನ ಹೊಗೆಯ ವಾಸನೆಗೆ ಆನೆಗಳು ನಿಲ್ಲುವುದಿಲ್ಲ ಎಂದು ಯಾರೋ ಹೇಳಿದ್ದು ನೆನಪಿಗೆ ಬಂದು ನಂತರ ಸಿಗರೇಟು ಸೇದಿ ಹೊಗೆ ಬಿಟ್ಟ ನಂತರ ಮನೆ ಅಂಗಳದಲ್ಲಿದ್ದ ತೆಂಗು ಗಿಡವನ್ನು ನಾಶಪಡಿಸಿ ಲದ್ದಿ ಹಾಕಿ ಆನೆಗಳು ಅಲ್ಲಿಂದ ಕಾಲ್ಕಿತ್ತಿದೆ ಎಂದು ಮನೆ ಮಾಲೀಕರು ತಿಳಿಸಿದ್ದಾರೆ.
ನಂತರ ತೋಟಕ್ಕೆ ತೆರಳಿ ಕಾಫಿ ಗಿಡಗಳನ್ನು ಧ್ವಂಸ ಮಾಡಿ, ಗದ್ದೆಗೆ ತೆÀರಳಿ ನಾಟಿ ಮಾಡಿದ್ದ ಗದ್ದೆಯನ್ನು ತುಳಿದು ನಾಶಪಡಿಸಿವೆ. ಇದೇ ಗ್ರಾಮದ ಚಿಮ್ಮಂಡ ಗಣಪತಿ ಅವರ ನಾಟಿ ಮಾಡಿದ ಗದ್ದೆಗೆ ತೆರಳಿ ಸಂಪೂರ್ಣ ನಾಶಪಡಿಸಿದ್ದು, ನಷ್ಟ ಸಂಭವಿಸಿದೆ ಎಂದು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.