ಕಣಿವೆ, ಆ. 19: ಅಲ್ಲೊಂದು ಮದ್ಯದಂಗಡಿ. ಆ ಮದ್ಯದಂಗಡಿಯ ಮುಂಬದಿಯಲ್ಲೊಂದು ಮನೆ. ಮದ್ಯದಂಗಡಿಗೆ ನಿಶೆ ಏರಿಸಲು ಬರುವ ಅನೇಕರು ಮೂತ್ರ ಮಾಡಲು ಮದ್ಯದಂಗಡಿ ಶೌಚಾಲಯ ಬಳಸದೆ ನೇರವಾಗಿ ಮದ್ಯದಂಗಡಿ ಎದುರಿಗಿರುವ ಮನೆಯ ಮುಂಬದಿಯ ಗೇಟಿನಲ್ಲಿ ಉದ್ದಕ್ಕೂ ಮೂತ್ರ ಮಾಡುತ್ತಾರೆ ಎಂದು ಕುಟುಂಬ ಸದಸ್ಯರು ಖಿನ್ನತೆಗೆ ಒಳಗಾಗಿದ್ದಾರೆ. ಕೂಡಿಗೆಯ ಹಾರಂಗಿ ನದಿಯ ಸೇತುವೆ ಬಳಿ ಇರುವ ಮದ್ಯದಂಗಡಿ ಒಂದಕ್ಕೆ ಬರುವ ಗ್ರಾಹಕರು ಮದ್ಯ ಸೇವಿಸಿದ ಬಳಿಕ ಹೆದ್ದಾರಿಯಂಚಿನಲ್ಲಿರುವ ವಾಸದ ಮನೆಯ ಪ್ರವೇಶ ದ್ವಾರದಲ್ಲಿ ಬೇಲಿಯುದ್ದಕ್ಕೂ ಮೂತ್ರ ಮಾಡಿ ಅಸಹ್ಯ ಉಂಟು ಮಾಡುತ್ತಿದ್ದಾರೆ ಎಂದು ದೂರಿರುವ ಮನೆಯ ಮಾಲೀಕರಾದ ಜೋಸೆಫ್ ಮತ್ತು ಫಿಲೋಮಿನಾ ಜೋಸೆಫ್ ದಂಪತಿ ಕೂಡಲೇ ಸ್ಥಳೀಯ ಪಂಚಾಯಿತಿ ಆಡಳಿತ ಮನೆಯ ಸುತ್ತಲಿನ ನದಿಯ ಪರಿಸರವನ್ನು ಮೂತ್ರ ಮುಕ್ತಗೊಳಿಸಬೇಕು ಎಂದು ಆಗ್ರಹಿಸುತ್ತಾ ಬಂದಿರುವುದು ಒಂದೆಡೆಯಾದರೆ, ಅತ್ತ ಆ ಮದ್ಯದಂಗಡಿಯಲ್ಲಿ ಸೂಕ್ತ ಶೌಚಾಲಯ ಅಳವಡಿಸಿ ಗ್ರಾಹಕರಿಗೆ ಒದಗಿಸಿದರೆ ಇಲ್ಲಿ ನಮಗೆ ಸಮಸ್ಯೆಯೇ ಇಲ್ಲ. ಕೂಡಲೇ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಅಬಕಾರಿ ಇಲಾಖೆಗೂ ದೂರು ನೀಡಿದ್ದಾರೆ. ಆದರೆ ಪಂಚಾಯಿತಿ ಹಾಗೂ ಅಬಕಾರಿ ಇಲಾಖೆ ಎರಡೂ ಕೂಡ ಇಲ್ಲಿ ಬೇಜವಾಬ್ದಾರಿ ತೋರುತ್ತಿವೆ ಎಂದು ದೂರಿರುವ ಈ ದಂಪತಿ ಪ್ರತಿ ದಿನವೂ ಮದ್ಯದಂಗಡಿ ಆರಂಭಗೊಂಡ ನಂತರ ಮನೆಯ ಬಾಗಿಲಿನಲ್ಲೇ ಕಲ್ಲುಗಳನ್ನು ಇಟ್ಟುಕೊಂಡು ಮೂತ್ರ ಮಾಡಲು ಬರುವವರಿಗೆ ಕಲ್ಲಿನಿಂದ ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಇದು ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಪ್ರಕ್ರಿಯೆಯಾಗಿದ್ದು, ಇದರಿಂದ ಬೇಸತ್ತ ಈ ದಂಪತಿಗಳು ಒಂದು ರೀತಿಯಲ್ಲಿ ವ್ಯವಸ್ಥೆಗೆ ಬೇಸತ್ತು ಖಿನ್ನತೆಗೆ ಒಳಗಾಗಿರುವುದಾಗಿ ಹೇಳುತ್ತಾರೆ.

ಈ ದಂಪತಿಯ ಗೋಳಿಗೆ ಒಂದಷ್ಟು ಸ್ಪಂದನ ನೀಡಿರುವ ಕೂಡಿಗೆ ಗ್ರಾಮ ಪಂಚಾಯಿತಿ ಇವರ ಮನೆಯ ಮುಂದೆ ಇಲ್ಲಿ ಯಾರು ಮಲ-ಮೂತ್ರ ಮಾಡದೇ ಶುಚಿತ್ವ ಕಾಪಾಡಬೇಕೆಂದು ನಾಮಫಲಕ ಅಳವಡಿಸಿದ್ದರೂ ಕೂಡ ನಿಶೆ ಏರಿಸಿದ ಕಣ್ಣುಗಳಿಗೆ ಈ ನಾಮಫಲಕ ಕಾಣುವುದಿಲ್ಲ. ಹಾಗಾಗಿ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ.

ವರದಿ : ಕೆ.ಎಸ್.ಮೂರ್ತಿ,