ಭಾಗಮಂಡಲ, ಆ. 18: ಭಾಗಮಂಡಲ ಹೋಬಳಿಯ ನೆರೆಪೀಡಿತ ಪ್ರದೇಶಗಳಾದ ಭಾಗಮಂಡಲ, ತಣ್ಣಿಮಾನಿ ಹಾಗೂ ಚೇರಂಗಾಲ ಗ್ರಾಮಗಳಿಗೆ ಶಾಸಕ ಕೆ.ಜಿ.ಬೋಪಯ್ಯ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚೇರಂಗಾಲ ಗ್ರಾಮದ ಕೂಡಕಂಡಿ ಮನೆಗಳಿಗೆ ತೆರಳುವ ರಸ್ತೆಯಲ್ಲಿನ ಕಾಲು ಸೇತುವೆ ಮುರಿದುಹೋಗಿದ್ದು, ಪರಿವಾರ ಹಾಗೂ ಮತ್ತಾರಿ ಮನೆಗಳಿಗೆ ತೆರಳುವ ರಸ್ತೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಮುಳುಗುಸೇತುವೆ ಹಾನಿಗೀಡಾಗಿದ್ದು ತಾತ್ಕಾಲಿಕವಾಗಿ ಕಾಲು ಸೇತುವೆ ನಿರ್ಮಿಸಲಾಗಿದ್ದು, ಅವುಗಳ ಪರಿಶೀಲನೆ ನಡೆಸಲಾಯಿತು. ಇಲ್ಲಿನ ಹಾನಿಗೀಡಾದ ಕೆಲವು ಮನೆಗಳಿಗೆ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು.(ಮೊದಲ ಪುಟದಿಂದ) ಬಳಿಕ ಮಾತನಾಡಿದ ಅವರು ಹಾನಿಗೀಡಾದ ಸೇತುವೆ ಹಾಗೂ ರಸ್ತೆಗಳನ್ನು ಕೂಡಲೇ ದುರಸ್ತಿಗೊಳಿಸಲು ಕ್ರಮಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ನಾಳೆಯೇ ಅಭಿಯಂತರರು ಭೇಟಿ ನೀಡಿ ಕ್ರಿಯಾಯೋಜನೆ ತಯಾರಿಸಿ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳುವುದಾಗಿ ಹೇಳಿದರು. ಚೇರಂಗಾಲ ಹಾಗೂ ತಣ್ಣಿಮಾನಿ ಭಾಗಗಳಲ್ಲಿ ಪ್ರವಾಹದಿಂದಾಗಿ ಹಾಗೂ ಭೂಕುಸಿತದಿಂದಾಗಿ ನಾಟಿ ಮಾಡಿದ ಗದ್ದೆಗಳು ಕೆಸರುಮಣ್ಣಿನಿಂದ ತುಂಬಿ ರೈತರಿಗೆ ನಷ್ಟವುಂಟಾಗಿದೆ. ಚೇರಂಗಾಲ ವ್ಯಾಪ್ತಿಯಲ್ಲಿ ಸಾಕಷ್ಟು ಭತ್ತ ಹಾಗೂ ತೋಟಗಳು ಹಾನಿಗೊಳಗಾಗಿದ್ದು ರೈತಾಪಿ ವರ್ಗಕ್ಕೆ ಯಾವುದೇ ನಿಬಂಧನೆ ಇಲ್ಲದೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ ಎಲ್ಲಾ ರೈತರಿಗೂ ಕೂಡಲೇ ಪರಿಹಾರ ವಿತರಿಸಲು ಕ್ರಮಕೈಗೊಳ್ಳಲಾಗುವುದು ಎಂದರು. ತಣ್ಣಿಮಾನಿ ಗ್ರಾಮದ ಕುದುಪಜೆ ಐನ್‍ಮನೆಗೆ ತೆರಳುವ ರಸ್ತೆಯಲ್ಲಿನ ಸೇತುವೆ ಹಾನಿಗೊಳಗಾಗಿದ್ದು, ಕೂಡಲೇ ದುರಸ್ತಿ ಮಾಡಲಾಗುವುದು.

ಚೇರಂಗಾಲದ ಬೆನ್ನೂರುಕಾಡಿನಲ್ಲಿ ಸುಮಾರು 50 ಎಕರೆಯಷ್ಟು ಪ್ರದೇಶ ಮಣ್ಣು ಕುಸಿದು ಹಾನಿಗೊಳಗಾಗಿದೆ. ಇಲ್ಲಿನ ಪರಿಶಿಷ್ಟ ಕಾಲೋನಿ, ಕೋಳಿಕಾಡು ಸ್ಥಳಗಳಿಗೆ ಸಾಕಷ್ಟು ಹಾನಿಯಾಗಿದೆ. ಚೇರಂಗಾಲ ವ್ಯಾಪ್ತಿಯಲ್ಲಿನ ಸುಮಾರು ನಾಲ್ಕೈದು ಮನೆಗಳು ಮಳೆ-ಗಾಳಿಯಿಂದಾಗಿ ಕುಸಿದು ಬಿದ್ದು ವಾಸಕ್ಕೆ ಯೋಗ್ಯವಿಲ್ಲದಂತಾಗಿದೆ. ಅವರಿಗೆ ಬದಲಿ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದರು.

ಶೋಧಕಾರ್ಯ: ತಲಕಾವೇರಿಯಲ್ಲಿ ಕಳೆದ 12 ದಿನಗಳ ಹಿಂದೆ ಭೂಕುಸಿತದಿಂದಾಗಿ ಕಣ್ಮರೆಯಾಗಿದ್ದ ಅರ್ಚಕರ ಕುಟುಂಬದ ಮೂವರ ಶವ ಪತ್ತೆಯಾಗಿದ್ದು ಉಳಿದ ಇಬ್ಬರ ಶವದ ಶೋಧ ಕಾರ್ಯಕ್ಕಾಗಿ ಚೇರಂಗಾಲ ಗ್ರಾಮದ ನಾಗತೀರ್ಥ ಎಂಬಲ್ಲಿ ಕೆಸರು ಮಣ್ಣು ತುಂಬಿದ್ದು ಜೆಸಿಬಿ ಹಾಗೂ ಹಿಟಾಚಿ ಮೂಲಕ ಕೆಲಸ ಆರಂಭಿಸಿ ಶೋಧಕಾರ್ಯ ನಡೆಸಲಾಗುವುದು ಎಂದು ಶಾಸಕರು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾಪ್ರಭಾಕರ್, ಮಾಜಿ ಸದಸ್ಯ ಪಿ.ಎಂ. ರಾಜೀವ್, ತಹಶೀಲ್ದಾರ್ ಮಹೇಶ್, ಗ್ರಾಮಲೆಕ್ಕಿಗರಾದ ಶರ್ಮಿಳ, ಗ್ರಾಮಪಂಚಾಯಿತಿ ಮಾಜಿ ಸದಸ್ಯರಾದ ರಾಜುರೈ, ಪುರುಷೋತ್ತಮ ಹಾಗೂ ಇನ್ನಿತರರು ಇದ್ದರು. - ಕೆ.ಡಿ.ಸುನಿಲ್