ಮಡಿಕೇರಿ, ಆ. 18: ಕೊರೊನಾ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಪ್ರವಾಸೋದ್ಯಮ ನೆಲಕಚ್ಚಿದೆ. ಪ್ರವಾಸಿಗರ ಆಗಮನಕ್ಕೆ ವಿಧಿಸಲಾದ ನಿರ್ಬಂಧದೊಂದಿಗೆ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು ಮುಚ್ಚಲ್ಪಟ್ಟಿವೆ. ಈ ನಡುವೆ ಕೊರೊನಾ ಸಂಬಂಧದ ನಿರ್ಬಂಧನೆಯಲ್ಲಿ ಮಾರ್ಪಾಡು ಮಾಡಿದ ಸರಕಾರ ಪ್ರವಾಸೋದ್ಯಮ ಆರಂಭಕ್ಕೆ ಷರತ್ತು ಬದ್ಧ ಅನುಮತಿ ನೀಡಿತು. ಇದು ರಾಜ್ಯದ ಹಲವೆಡೆಗಳಲ್ಲಿ ಜಾರಿಯಾಗಿದೆ. ಆದರೆ ಕೊಡಗಿನಲ್ಲಿ ಮಾತ್ರ ಇದುವರೆಗೂ ಪ್ರವಾಸಿ ತಾಣಗಳು ತೆರೆಯಲ್ಪಟ್ಟಿಲ್ಲ. ಐದಾರು ತಿಂಗಳ ಬಳಿಕ ಇಂದು ರಾಜಾಸೀಟು ತೆರೆಯಲ್ಪಟ್ಟಿದೆಯಾದರೂ ಉಳಿದಂತೆ ಜಿಲ್ಲೆಯ ಪ್ರವಾಸಿ ತಾಣಗಳೆಲ್ಲವೂ ಬಂದ್ ಆಗಿವೆ.ನಗರದ ರಾಜಾಸೀಟು ಉದ್ಯಾನವನವನ್ನು ಪ್ರವಾಸಿಗರ ಪ್ರವೇಶಕ್ಕೆ ಮುಕ್ತಗೊಳಿಸಿದ್ದು, ಬೆಳಿಗ್ಗೆಯಿಂದಲೇ ಪ್ರವಾಸಿಗರು ರಾಜಾಸೀಟಿಗೆ ತೆರಳುತ್ತಿದ್ದ ದೃಶ್ಯ ಕಂಡುಬಂತು. ಜಿಲ್ಲೆಯಾದ್ಯಂತ ರಾಜಾಸೀಟು ಹೊರತುಪಡಿಸಿ ಬೇರೆ ಯಾವುದೇ ಪ್ರವಾಸಿ ಸ್ಥಳಗಳನ್ನು ತೆರೆಯಲಾಗಿಲ್ಲ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ ತಿಳಿಸಿದ್ದಾರೆ. ಉಳಿದ ಪ್ರವಾಸಿ ಸ್ಥಳಗಳನ್ನು ತೆರೆಯುವ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ರಾಜಾಸೀಟು - ಪ್ರವಾಸಿಗರು ಕ್ಷೀಣ
ರಾಜಾಸೀಟು ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ ಆದರೂ, ಇಂದು 10 ಹಲವು ಮಂದಿ ಪ್ರವಾಸಿಗರು ಮಾತ್ರ ಇಲ್ಲಿಗೆ ಭೇಟಿ ನೀಡಿದ್ದರು. ಕೊರೊನಾ ಹಿನ್ನೆಲೆ ಸ್ಥಳೀಯರಿಗೂ ಈ ಹಿಂದೆ ಬೆಳಿಗ್ಗಿನ ಜಾವ ಹಾಗೂ ಸಂಜೆಯ ವೇಳೆ ವಾಯುವಿಹಾರಕ್ಕೆ ಅವಕಾಶವಿರಲಿಲ್ಲ. ಬಳಿಕ ಹೊಸ ಮಾರ್ಗಸೂಚಿಯಲ್ಲಿ ಉದ್ಯಾನವನಗಳಲ್ಲಿ ಕೆಲವು ನಿರ್ಬಂಧಗಳನ್ನೊಳಗೊಂಡು ಬೆಳಿಗ್ಗೆ ಹಾಗೂ ಸಂಜೆಯ ಹೊತ್ತು ಸ್ಥಳೀಯರಿಗೆ ಅವಕಾಶ ನೀಡಲಾಗಿದ್ದು, ರಾಜಾಸೀಟಿನಲ್ಲಿಯೂ ಸ್ಥಳೀಯರು ವಾಯುವಿಹಾರಕ್ಕೆ ಆಗಮಿಸುತ್ತಿದ್ದರು. ಆದರೆ ಇಂದಿನಿಂದ ರಾಜಾಸೀಟನ್ನು ಪ್ರವಾಸಿಗರಿಗೂ ತೆರೆಯಲಾಗಿದೆ ಎಂದು ರಾಘವೇಂದ್ರ ಮಾಹಿತಿ ನೀಡಿದ್ದಾರೆ.
ಅಬ್ಬಿ ಜಲಪಾತಕ್ಕೆ ‘ನೋ ಎಂಟ್ರಿ’
ಕೆ.ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಅಬ್ಬಿ ಜಲಪಾತಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಪ್ರವೇಶ ಗೇಟ್ ಮುಚ್ಚಲಾಗಿದ್ದು, ‘ನೋ ಎಂಟ್ರಿ’ ಫಲಕವನ್ನು ಗೇಟಿಗೆ ಅಳವಡಿಸಲಾಗಿದೆ. ಈ ಕುರಿತು ಮಾಹಿತಿ ಇಲ್ಲದ ಹಲವು ಪ್ರವಾಸಿಗರು ಇಲ್ಲಿಗೆ ಆಗಮಿಸಿ ವಾಹನ ನಿಲ್ದಾಣದಲ್ಲಿ ಕೆಲ ಕಾಲ ಕಳೆದು ಹಿಂತೆರಳಿದ ದೃಶ್ಯ ಕಂಡು ಬಂತು. ಕೆಲ ದಿನಗಳ ಹಿಂದೆ ಹಲವು ಪ್ರವಾಸಿಗರು ಅಬ್ಬಿ ಜಲಪಾತ ವೀಕ್ಷಣೆಗೆ ಮುಚ್ಚಲ್ಪಟ್ಟಿದ್ದ ಅಲ್ಲಿನ ಗೇಟನ್ನು ಜಿಗಿದು ತೆರಳುತ್ತಿರುವ ಬಗ್ಗೆ ಮಾಹಿತಿ ದೊರೆತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಕುರಿತು ತಿಳಿದು ಬಂದಿದೆ. ಮತ್ತೊಂದು ಪ್ರಸಿದ್ಧ ಪ್ರವಾಸಿ ತಾಣ ಮಾಂದಲಪಟ್ಟಿ ಕೂಡ ಮುಚ್ಚಿದ್ದು ಪ್ರವಾಸಿಗರು ಜೀಪ್ ಮೂಲಕ ಮಾಂದಲಪಟ್ಟಿಯ ಪ್ರವೇಶದ್ವಾರದ ತನಕ ಬಂದು ಹಿಂತೆರಳುತ್ತಿದ್ದಾರೆ.
ಕುಶಾಲನಗರದಲ್ಲಿ ಪ್ರವಾಸಿ ತಾಣಗಳು ಸ್ತಬ್ಧ
ಕುಶಾಲನಗರ ಮತ್ತು ಸುತ್ತಮುತ್ತಲ ವ್ಯಾಪ್ತಿಯ ಪ್ರವಾಸಿ ಕೇಂದ್ರಗಳಿಗೆ ಈ ವರ್ಷದ ಮಾರ್ಚ್ ಎರಡನೇ ವಾರದಿಂದ (ಮೊದಲ ಪುಟದಿಂದ) ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಿರುವ ಸರಕಾರದ ಆದೇಶ ಇನ್ನೂ ತೆರವುಗೊಳ್ಳದ ಹಿನ್ನೆಲೆ ಸದಾ ಗಿಜಿಗುಡುತ್ತಿದ್ದ ಕೇಂದ್ರಗಳು ಪ್ರವಾಸಿಗರಿಲ್ಲದೆ ಕಳೆದ 5 ತಿಂಗಳುಗಳಿಂದ ಸ್ತಬ್ಧಗೊಂಡಿವೆ.
ಸಣ್ಣಪುಟ್ಟ ಅಂಗಡಿಗಳು ಸೇರಿದಂತೆ ಬೃಹತ್ ವಾಣಿಜ್ಯ ಉದ್ಯಮಗಳು ಈ ಪ್ರವಾಸಿ ಕೇಂದ್ರಗಳಲ್ಲಿ ಬಾಗಿಲು ತೆರೆಯದೆ ಇಡೀ ಪ್ರದೇಶ ಸ್ಮಶಾನ ಸದೃಶ್ಯವಾಗಿ ಕಂಡುಬರುತ್ತಿದೆ. ಲಾಕ್‍ಡೌನ್ ತೆರವುಗೊಳಿಸಿದರೂ ಪ್ರವಾಸಿಗರಿಗೆ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ ಹೋಟೆಲ್‍ಗಳು ಕೂಡ ಮುಚ್ಚಿರುವ ದೃಶ್ಯ ಕಂಡುಬಂದಿದೆ. ಈ ಮೂಲಕ ಸಾವಿರಕ್ಕೂ ಅಧಿಕ ಕಾರ್ಮಿಕರು ನೌಕರರು ಕೆಲಸವಿಲ್ಲದೆ ಜೀವನಕ್ಕೆ ಪರದಾಡುವ ಸ್ಥಿತಿ ಸೃಷ್ಟಿಯಾಗಿದೆ.
ರಾಜ್ಯ ಮತ್ತು ನೆರೆ ರಾಜ್ಯಗಳಿಂದ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ತನ್ನ ತೆಕ್ಕೆಗೆ ಬರಮಾಡಿಕೊಳ್ಳುತ್ತಿದ್ದ ಕುಶಾಲನಗರ ಸಮೀಪದ ಕಾವೇರಿ ನಿಸರ್ಗಧಾಮ, ದುಬಾರೆ, ಹಾರಂಗಿ ಉದ್ಯಾನವನ ಮತ್ತು ಸಮೀಪದ ಟಿಬೇಟಿಯನ್ ಕಾಲೋನಿಯ ಗೋಲ್ಡನ್ ಟೆಂಪಲ್ ಇನ್ನೂ ಮುಚ್ಚಲ್ಪಟ್ಟಿವೆ. ದುಬಾರೆಯಲ್ಲಿ ರ್ಯಾಫ್ಟಿಂಗ್ ಕ್ರೀಡೆ ಸ್ಥಗಿತಗೊಳ್ಳುವುದರೊಂದಿಗೆ ಅಲ್ಲಿನ ಸಾಕಾನೆ ಶಿಬಿರ, ಹೊಟೇಲ್ ವ್ಯಾಪಾರ ವಹಿವಾಟಿಗೆ ಸ್ಥಳೀಯ ಆಡಳಿತ ಇನ್ನೂ ಅನುಮತಿ ನೀಡಿಲ್ಲ.
ನಂಜರಾಯಪಟ್ಟಣ ದುಬಾರೆ ಸಂಪರ್ಕ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸುವುದರೊಂದಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಇನ್ನೊಂದೆಡೆ ಹೊಟೇಲ್ ಮತ್ತಿತರ ವ್ಯಾಪಾರಕ್ಕೆ ಕೂಡ ಸ್ಥಳೀಯ ಪಂಚಾಯಿತಿ ವಹಿವಾಟಿಗೆ ಅನುಮತಿ ಕೂಡ ನೀಡಿಲ್ಲ ಎಂದು ಸ್ಥಳೀಯ ಉದ್ಯಮಿ ರತೀಶ್ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಸಾಕಾನೆ ಶಿಬಿರ ಮತ್ತು ಕುಶಾಲನಗರ ಕಾವೇರಿ ನಿಸರ್ಗಧಾಮ ಪ್ರವಾಸಿಗರಿಗೆ ಭೇಟಿ ನೀಡಲು ಸರಕಾರ ಇನ್ನೂ ಅನುಮತಿ ನೀಡಿಲ್ಲ ಎಂದು ಅರಣ್ಯ ಇಲಾಖೆ ಉಪ ವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ನಿಸರ್ಗಧಾಮದ ಮುಂಭಾಗದಲ್ಲಿರುವ 100 ಕ್ಕೂ ಅಧಿಕ ಅಂಗಡಿ ಮುಂಗಟ್ಟುಗಳು ಕೂಡ ಇನ್ನೂ ವ್ಯಾಪಾರ ವಹಿವಾಟು ಪ್ರಾರಂಭಿಸದಿರುವುದು ಕಂಡುಬಂದಿದೆ. ಹಾರಂಗಿ ಉದ್ಯಾನವನಕ್ಕೆ ಒಳಗೆ ಪ್ರವೇಶ ನಿಷಿದ್ದವಾಗಿದ್ದು ವಾರಾಂತ್ಯದಲ್ಲಿ ಬರುವ ಪ್ರವಾಸಿಗರು ರಸ್ತೆಯಿಂದಲೇ ಅಣೆಕಟ್ಟೆಯನ್ನು ವೀಕ್ಷಿಸಿ ತೆರಳುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಸರಕಾರದ ಸೂಚನೆಯನ್ವಯ ನೆರೆಯ ಬೈಲುಕೊಪ್ಪೆ ಟಿಬೇಟಿಯನ್ ಗೋಲ್ಡನ್ ಟೆಂಪಲ್ ಆಗಸ್ಟ್ 31 ರ ತನಕ ಪ್ರವಾಸಿಗರಿಗೆ ಭೇಟಿಗೆ ಅವಕಾಶ ಕಲ್ಪಿಸದಿರಲು ನಿರ್ಧಾರ ಮಾಡಿದೆ. ಇನ್ನೊಂದೆಡೆ ನೆರೆ ರಾಜ್ಯಗಳ ಗಡಿ ಬಂದ್ ಆಗಿರುವ ಹಿನ್ನೆಲೆಯಲ್ಲಿ ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಿಂದ ಆಗಮಿಸುತ್ತಿದ್ದ ಪ್ರವಾಸಿಗರ ತಂಡಗಳು ಕೂಡ ಕಂಡುಬಾರದೆ ಸುತ್ತಮುತ್ತಲಲ್ಲಿ ತಲೆಎತ್ತಿದ್ದ ಡಿಜೆ ಕೇಂದ್ರಗಳ ಅಬ್ಬರ ಕೂಡ ಕಡಿಮೆಯಾಗಿದೆ.
ಮಲ್ಲಳ್ಳಿ ಜಲಪಾತ: ಬೀಗ ಒಡೆದು ಪ್ರವೇಶಕ್ಕೆ ಯತ್ನ
ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತಕ್ಕೆ ಬೆರಳೆಣಿಕೆಯ ಪ್ರವಾಸಿಗರು ಆಗಮಿಸುತ್ತಿದ್ದು, ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತದ ಆದೇಶವನ್ನು ಧಿಕ್ಕರಿಸಿ ಜಲಪಾತದ ಕೆಳಭಾಗಕ್ಕೆ ಇಳಿಯುತ್ತಿದ್ದಾರೆ.
ಸ್ಥಳೀಯ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಜಲಪಾತದ ಪ್ರವೇಶ ದ್ವಾರಕ್ಕೆ ಬೀಗ ಜಡಿದು ಬಂದ್ ಮಾಡಲಾಗಿದ್ದರೂ ಸಹ ಪಕ್ಕದ ತೋಟದೊಳಗಿನಿಂದ ತೆರಳುವ ಮಂದಿ, ಜಲಪಾತದ ತಳಭಾಗದಲ್ಲಿ ಓಡಾಡುತ್ತಿದ್ದಾರೆ.
ಪಂಚಾಯಿತಿಯಿಂದ ಅಳವಡಿಸಿದ್ದ ಬೀಗವನ್ನು ಒಡೆದು ಒಳಪ್ರವೇಶಿಸಲು ಯತ್ನ ನಡೆಸಿದ್ದ ಘಟನೆಯೂ ಜರುಗಿದ್ದು, ಇದೀಗ ಪಂಚಾಯಿತಿಯಿಂದ ನೂತನ ಬೀಗ ಅಳವಡಿಸಲಾಗಿದೆ. ಜಲಪಾತಕ್ಕೆ ಪ್ರವೇಶವಿಲ್ಲ ಎಂಬ ಫಲಕವನ್ನು ಹಾಕಿದ್ದರೂ ಸಹ ಇದಕ್ಕೆ ಕ್ಯಾರೇ ಎನ್ನದ ಮಂದಿ ತೋಟದೊಳಗಿನಿಂದ ಜಲಪಾತಕ್ಕೆ ತೆರಳುತ್ತಿರುವ ಘಟನೆಗಳು ನಡೆಯುತ್ತಿವೆ.
ಆದೇಶಗಳನ್ನು ಮೀರಿ ಜಲಪಾತಕ್ಕೆ ಪ್ರವೇಶಿಸಿದರೆ ಕಾನೂನು ಕ್ರಮದೊಂದಿಗೆ ದಂಡ ವಿಧಿಸಲಾಗುವದು. ಪ್ರಸ್ತುತ ಆದೇಶವನ್ನು ಮೀರುತ್ತಿರುವ ಬಗ್ಗೆ ಪ್ರವಾಸೋದ್ಯಮ ಇಲಾಖೆಗೆ ಮಾಹಿತಿ ನೀಡಲಾಗಿದೆ. ಈ ಹಿಂದೆ ಇದ್ದಂತಹ ಪ್ರವಾಸಿ ಮಿತ್ರ ಸಿಬ್ಬಂದಿಗಳೂ ಸಹ ಇದೀಗ ಜಲಪಾತಕ್ಕೆ ಆಗಮಿಸುತ್ತಿಲ್ಲ. ಹಾಗಾಗಿ ಪ್ರವಾಸಿಗರಿಗೆ ತಡೆಯೊಡ್ಡಲು ಸಾಧ್ಯವಾಗುತ್ತಿಲ್ಲ. ಎಷ್ಟೇ ಎಚ್ಚರಿಕೆ ನೀಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ತಿಳಿಸಿದ್ದಾರೆ.
ಹೊನ್ನಮ್ಮನಕೆರೆ: ತಾಲೂಕಿನ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಇತಿಹಾಸ ಪ್ರಸಿದ್ಧ ಹೊನ್ನಮ್ಮನಕೆರೆಗೆ ಪ್ರವಾಸಿಗರು ಆಗಮಿಸುತ್ತಿದ್ದಾರೆ. ದೈವಿಕ ಹಿನ್ನೆಲೆಯ ಕ್ಷೇತ್ರವಾಗಿರುವದರಿಂದ ಆಸ್ತಿಕರು ಭೇಟಿ ನೀಡುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಮೋಜು ಮಸ್ತಿಗೆ ಸ್ಥಳೀಯರು ಅವಕಾಶ ನೀಡುತ್ತಿಲ್ಲ.
ಈ ಹಿಂದೆ ಹೊನ್ನಮ್ಮನಕೆರೆಗೆ ಭೇಟಿ ನೀಡುತ್ತಿದ್ದ ಪ್ರವಾಸಿಗರು ಬೃಹತ್ ಕೆರೆಯನ್ನು ವೀಕ್ಷಿಸಿ, ನಂತರ ಸಮೀಪದಲ್ಲೇ ಇರುವ ಗವಿಬೆಟ್ಟಕ್ಕೆ ತೆರಳಿ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಿದ್ದರು. ಕೋವಿಡ್‍ನಿಂದಾಗಿ ಜಿಲ್ಲಾಡಳಿತ ನೂತನ ಆದೇಶ ಹೊರಡಿಸಿದ ನಂತರ ಗವಿಬೆಟ್ಟಕ್ಕೆ ತೆರಳಲು ಯಾರಿಗೂ ಅವಕಾಶ ನೀಡುತ್ತಿಲ್ಲ. ರಸ್ತೆ ಬದಿಯಲ್ಲಿಯೇ ಹೊನ್ನಮ್ಮನಕೆರೆ ಇರುವದರಿಂದ ಪ್ರವಾಸಿಗರಿಗೆ ತಡೆಯೊಡ್ಡಲು ಸಾಧ್ಯವಾಗುತ್ತಿಲ್ಲ. ದೇವಾಲಯದಲ್ಲಿ ಅರ್ಚಕರು ಪ್ರತಿನಿತ್ಯ ಪೂಜೆ ನೆರವೇರಿಸುತ್ತಿದ್ದು, ಹೊರಭಾಗದ ಮಂದಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸುತ್ತಿಲ್ಲ.
ಇರ್ಪು ಜಲಪಾತ: ವೀಕ್ಷಣೆಗಿಲ್ಲ ಅವಕಾಶ..!
ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣವಾದ ದ.ಕೊಡಗಿನ ಇರ್ಪು ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ. ಆದರೆ ಜಲಪಾತ ವೀಕ್ಷಣೆಗೆ ಅವಕಾಶ ನಿರಾಕರಿಸಲಾಗಿದೆ.
ಮಳೆಗಾಲದಲ್ಲಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಈ ಜಲಪಾತ ಇದೀಗ ಪ್ರವಾಸಿಗರು ಭೇಟಿ ನೀಡದಂತಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಈ ಭಾಗಕ್ಕೆ ಯಾವುದೇ ಪ್ರವಾಸಿಗರು ಪ್ರವೇಶ ಮಾಡದಂತೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ.
ವರದಿ: ಪ್ರಜ್ವಲ್, ಚಂದ್ರಮೋಹನ್, ವಿಜಯ್, ಜಗದೀಶ್.