ಮೂಲತ ಮಡಿಕೇರಿ ಸಮೀಪದ ಮಕ್ಕಂದೂರಿನ ನಿವಾಸಿಗಳಾಗಿದ್ದು, ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಅರ್ಪಿತ (35) ಹರೀಶ್ (42) ದಂಪತಿಗಳು ಜೂನ್ ತಿಂಗಳಿನಲ್ಲಿ ಕಾರ್ಯನಿಮಿತ್ತ ತಮ್ಮ ಮನೆಗೆ ಹೊರಟಿದ್ದರು. ಹೊರಡುವ ಎರಡು ದಿನಗಳ ಹಿಂದೆ ಹರೀಶ್ ಅವರಿಗೆ ಜ್ವರ ಕಾಣಿಸಿಕೊಂಡಿದ್ದು, ಮಾತ್ರೆ ಸೇವಿಸಿದಾಗ ಅದು ವಾಸಿಯಾಗಿತ್ತು. ಪ್ರಯಾಣದ ನಡುವೆ ಹರೀಶ್ ಅವರ ಸಹೋದ್ಯೋಗಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆಯೆಂಬ ಮೆಸೇಜ್ ದೊರಕಿತು. ಹೀಗಾಗಿ ಹರೀಶ್ ದಂಪತಿಗಳು ಮಡಿಕೇರಿಗೆ ತಲುಪಿದಾಗ ತಮ್ಮ ಮನೆಗೆ ತೆರಳದೇ ನೇರವಾಗಿ ಕೋವಿಡ್ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡರು.

ಕೊರೊನಾ ಪಾಸಿಟಿವ್ ಫಲಿತಾಂಶ ಬಂತು. ಇಬ್ಬರಿಗೂ ಒಮ್ಮೆ ಗಾಬರಿ ಆತಂಕ ಎದುರಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯಿತು. ಆಸ್ಪತ್ರೆಯ 16 ದಿನಗಳ ಆರೈಕೆ ಬಳಿಕ ಎರಡು ದಿನಗಳ ಕಾಲ ನವೋದಯ ಶಾಲೆಯಲ್ಲಿ ತಂಗಬೇಕಾಗಿ ಬಂತು ಎಂದು ಅರ್ಪಿತ ಹರೀಶ್ ‘ಶಕ್ತಿ’ಯೊಂದಿಗೆ ಹೇಳಿದರು. ಕೊರೊನಾ ನೆಗೆಟಿವ್ ಬಂದ ಬಳಿಕ 14 ದಿನಗಳ ಕಾಲ ನಾವು ಮನೆಯಲ್ಲಿ ಕಳೆದು ಮತ್ತೆ ಬೆಂಗಳೂರಿಗೆ ಮರಳಿದ್ದು ಈಗ ಆರೋಗ್ಯವಾಗಿದ್ದೇವೆ ಎಂದು ಅವರು ತಿಳಿಸಿದರು. ಆಸ್ಪತ್ರೆಯಲ್ಲಿ ಆರಂಭದ ಮೂರ್ನಾಲ್ಕು ದಿನಗಳ ಕಾಲ ನೀಡಿದ ಆಹಾರ ಹೊರತುಪಡಿಸಿದರೆ ಉಳಿದಂತೆ ಒಳ್ಳೆಯ ಗುಣಮಟ್ಟದ ಆಹಾರವನ್ನೇ ನೀಡಿದ್ದಾರೆ, ಅಂತೆಯೇ ತಮ್ಮನ್ನು ವೈದ್ಯರು, ಆರೋಗ್ಯ ಕಾರ್ಯಕರ್ತರು, ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದ ಅರ್ಪಿತ ಅವರು, ಕೊರೊನಾ ಪಾಸಿಟಿವ್ ಬಂತೆಂದು ಯಾರೂ ಎದೆಗುಂದಬೇಕಿಲ್ಲ. ಟೆನ್ಶನ್ ಮಾಡಿಕೊಳ್ಳದೇ ಹೋದರೆ ಕೊರೊನಾವನ್ನು ಸೋಲಿಸಿ ನಾವು ಗೆದ್ದು ಬರಬಹುದು, ಹಿರಿಯ ವಯಸ್ಕರಾದ ಹಲವರು ಕೊರೊನಾ ಪಾಸಿಟಿವ್ ಬಂದು ಮತ್ತೆ ಗುಣಮುಖರಾದ ಉದಾಹರಣೆಗಳಿವೆ ಎಂದರು. ಉದ್ಯೋಗ ಸ್ಥಳದಲ್ಲಿ ಎಸಿ ಬಳಸದೆ ಇರುವುದು ಒಳ್ಳೆಯದು, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾಸ್ಕನ್ನು ಕಡ್ಡಾಯಗೊಳಿಸಿದ್ದೇ ಆದಲ್ಲಿ ಕೊರೊನಾದಿಂದ ಸುಲಭವಾಗಿ ಪಾರಾಗಬಹುದು ಎಂದು ಅವರು ಹೇಳುತ್ತಾರೆ.