ಮಡಿಕೇರಿ, ಆ. 19: ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಗೆ ಪೆರಿಯಂಡ ಮೋಹನ್ ಎಂಬವರಿಗೆ ಸೇರಿದ್ದ ಮನೆ ಸಂಪೂರ್ಣ ನಾಶವಾಗಿದ್ದು, ಇವರಿಗೆ ಪರಿಹಾರವಾಗಿ ರೂ. 1 ಲಕ್ಷವನ್ನು ‘ಕೂರ್ಗ್ ಫೌಂಡೇಶನ್’ ಸಂಸ್ಥೆ ವತಿಯಿಂದ ನೀಡಲಾಯಿತು. ಅರೆಕಲ್ ವಸಂತ ಎಂಬವರ ಕುಟುಂಬಕ್ಕೂ ರೂ. 35 ಸಾವಿರ, ತಮ್ಮ ಮನೆ ಹಾನಿಯಾದ ಕಾರಣ ದಾನ ಮಾಡಲಾಯಿತು. ಇದರೊಂದಿಗೆ ರೂ. 20 ಸಾವಿರ ‘ಎನ್‍ವೈರನ್‍ಮೆಂಟ್ ಹೆಲ್ತ್ ಫೌಂಡೇಶನ್’ಗೆ ನೀಡಲಾಯಿತು. ಕೇವಲ 15 ದಿನಗಳಲ್ಲಿ ರೂ. 1,55,000 ಸಂಗ್ರಹಿಸಿ ಸಂಸ್ಥೆಯಿಂದ ದಾನ ಮಾಡಲಾಗಿದೆ. ಸಂಸ್ಥೆ ನೇತೃತ್ವದಲ್ಲಿ ತಯಾರಿಸಿದ ಸ್ಯಾಂಡ್‍ವಿಚ್‍ಗಳು ಹಾಗೂ ಕೊಡಗಿನಲ್ಲಿ ಬೆಳೆಯುವ ಬಟರ್ ಫ್ರೂಟ್ ಹಣ್ಣುಗಳನ್ನು ಬೆಂಗಳೂರಿನಲ್ಲಿ ಮಾರಾಟ ಮಾಡುವ ಮೂಲಕ ಇಷ್ಟು ಮೊತ್ತ ಸಂಗ್ರಹಿಸಿ ನೆರವು ನೀಡಲು ಸಾಧ್ಯವಾಗಿದೆ ಎಂದು ಸಂಸ್ಥೆಯ ಸ್ಥಾಪಕಿ ನಿಕ್ಕಿ ಪೊನ್ನಪ್ಪ ತಿಳಿಸಿದ್ದಾರೆ.