ವೀರಾಜಪೇಟೆ, ಆ. 19: ಕೊರೊನಾ ವೈರಸ್ ತಡೆಗಟ್ಟಲು ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ಪಕ್ಷದ ಪ್ರಥಮ ಹಂತದಕಾರ್ಯವಾಗಿ ಮನೆ ಮನೆ ಭೇಟಿ ನೀಡಿ ಕೊರೊನಾ ತಪಾಸಣೆ ನಡೆಸಲಿದೆ. ಕೊರೊನಾ ಸಾಂಕ್ರಾಮಿಕ ವೈರಸ್‍ನ ಸಂಬಂಧದಲ್ಲಿ ಯಾರಿಗೂ ಆತಂಕಬೇಡ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹೇಳಿದರು.
ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಲ್ಲಿನ ಗಣಪತಿ ಆರ್ಕೆಡ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೊರೊನಾ ವಾರಿಯರ್ಸ್ ತಂಡಕ್ಕೆ ಆರೋಗ್ಯ ಸುರಕ್ಷಾ ಕಿಟ್ ವಿತರಣೆ ಮಾಡಿ ಅವರು ಮಾತನಾಡಿದರು. ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಕೆ. ಮಂಜುನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ಎ.ಐ.ಸಿ.ಸಿ ವಕ್ತಾರ ಬ್ರಿಜೇಶ್ ಕಾಳಪ್ಪ, ಪ್ರದೇಶ ಕಾಂಗ್ರೆಸ್ ಸಮಿತಿಯ ಆರೋಗ್ಯ ಘಟಕದ ಡಾ. ಜ್ಯೋತಿ ಅವರುಗಳು ಮಾತನಾಡಿದರು. ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ ಹಾಗೂ ಪದಾಧಿಕಾರಿಗಳು ವೀರಾಜಪೇಟೆ ವಲಯದ ಸುಮಾರು 19 ಮಂದಿ ಕಾಂಗ್ರೆಸ್ ವಾರಿಯರ್ಸ್‍ಗೆ ಆರೋಗ್ಯ ಕಿಟ್‍ಗಳನ್ನು ವಿತರಿಸಿದರು.
ಕಾಂಗ್ರೆಸ್ ಪಕ್ಷದ ಪದವೀಧರ ಕ್ಷೇತ್ರ ಜಿಲ್ಲಾ ಸಮಿತಿಯ ಅಧ್ಯಕ್ಷ ಎನ್. ನರೇಂದ್ರನಾಥ್ ಕಾಮತ್, ಕಿಸಾನ್ ಸೆಲ್‍ನ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗೋಪಾಲಕೃಷ್ಣ, ಜಿಲ್ಲಾ ಎಸ್.ಸಿ. ಘಟಕದ ವಿ.ಕೆ. ಸತೀಶ್‍ಕುಮಾರ್, ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್‍ನ ಎಂ. ನವೀನ್, ವೀಕ್ಷಕ ಪಿ.ರಾಜು, ಪಟ್ಟಣ ಪಂಚಾಯಿತಿ ಸದಸ್ಯ ಡಿ.ಪಿ. ರಾಜೇಶ್, ನಗರ ಸಮಿತಿ ಅಧ್ಯಕ್ಷ ಜಿ.ಜಿ. ಮೋಹನ್ ಕಾರ್ಯದರ್ಶಿ ಎಂ.ಎಂ. ಶಶಿಧರನ್, ಪಕ್ಷದ ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲೂಕು ಪಂಚಾಯಿತಿ ಸದಸ್ಯರುಗಳು, ಪಕ್ಷದ ತಾಲೂಕಿನ ಪ್ರಮುಖರು ಹಾಜರಿದ್ದರು.