ಶನಿವಾರಸಂತೆ, ಆ. 19: ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಮೂದರವಳ್ಳಿ ಗ್ರಾಮದ ರಸ್ತೆಯಲ್ಲಿ ಇಂದು ಬೆಳಗ್ಗಿನ ಜಾವ ಪಿಕ್‍ಅಪ್ ವಾಹನ (ಕೆಎ -12, ಎ-7748)ರಲ್ಲಿ 4 ದನಗಳನ್ನು ಸರಕಾರದ ಯಾವುದೇ ಪರವಾನಿಗೆ ಇಲ್ಲದೆ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದಾಗ, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಜಾನುವಾರು ಹಾಗೂ ಪಿಕ್‍ಅಪ್ ವಾಹನವನ್ನು ವಶಪಡಿಸಿಕೊಂಡು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತಾರೆ.

ಸೋಮವಾರಪೇಟೆ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರಿಗೆ ಜಾನುವಾರುಗಳನ್ನು ಕಸಾಯಿಖಾನೆಗೆ ಅಕ್ರಮ ಸಾಗಾಟ ಮಾಡುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆ ಅವರ ಮಾರ್ಗದರ್ಶನದಲ್ಲಿ ಇಂದು ಬೆಳಗ್ಗಿನ ಜಾವ ಗಸ್ತಿನಲ್ಲಿದ್ದ ಪೊಲೀಸರು ಮೂದರವಳ್ಳಿ ರಸ್ತೆಯಲ್ಲಿ ಅರಕಲಗೋಡಿಗೆ ಹೋಗುತ್ತಿದ್ದ ಪಿಕ್‍ಅಪ್ ವಾಹನವನ್ನು ತಡೆದು ನಿಲ್ಲಿಸಿದಾಗ, 4 ದನಗಳನ್ನು ಸಾಗಾಟ ಮಾಡುತ್ತಿದ್ದುದು ಕಂಡುಬಂದಿದೆ.

ಕೊಡ್ಲಿಪೇಟೆಯ ಚಿಕ್ಕಕುಂದಾ ಗ್ರಾಮದ ಚಾಲಕ ಕೆ.ಎಂ. ಚೇತನ್, ಸಹಕರಿಸುತ್ತಿದ್ದ ಅರಕಲಗೋಡು ತಾಲೂಕಿನ ಹೊಳಲುಗೋಡು ಗ್ರಾಮದ ಅಕ್ಮಲ್ ಹಾಗೂ ಜಾನುವಾರುಗಳು, ವಾಹನವನ್ನು ವಶಪಡಿಸಿಕೊಂಡು ಕಲಂ 4,5,8,11 ರೀತ್ಯಾ ಪ್ರಕರಣ ದಾಖಲಿಸಿ ಜಾನುವಾರುಗಳನ್ನು ಮೈಸೂರಿನ ಪಿಂಜರ್ ಪೋಲ್‍ಗೆ ಸಾಗಿಸಲಾಯಿತು.

ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ದೇವರಾಜ್, ಸಿಬ್ಬಂದಿಗಳಾದ ರಘು, ಸಂತೋಷ್, ರವಿಚಂದ್ರ ಬೋಪಣ್ಣ, ಶಫೀರ್ ಇತರರು ಪಾಲ್ಗೊಂಡಿದ್ದರು.