ಕಣಿವೆ, ಆ. 19 : ಅದೇ ನೋಡಿ ಆಶ್ಚರ್ಯಕರ ಸಂಗತಿ. ಕಳೆದ 2018..... ಇದು ಕಾವೇರಿ ನದಿಯ ಈವರೆಗಿನ ಐತಿಹಾಸಿಕ ಪ್ರವಾಹದ ವರ್ಷ. ಯಾವುದೇ ನದಿಯಲ್ಲಿಯೂ ಇಡೀ ವರ್ಷ ಹರಿಯುವ ನೀರಿನ ಪ್ರಮಾಣವನ್ನು ಅಳತೆ ಮಾಡಿದವರೂ ಇಲ್ಲ. ಮುಂದಕ್ಕೂ ಮಾಡುವವರು ಬರುವುದಿಲ್ಲವೇನೋ....! ಈ ನದಿಗಳಲ್ಲಿ ಈವರೆಗೂ ನೀರಿನ ಹರಿವಿನ ಆಡಿಟಿಂಗ್ ಮಾಡುವ ಪದ್ಧತಿ ಇದ್ದಿದ್ದರೆ.....? ಏನಾಗುತ್ತಿತ್ತೋ...ದೇವರೇ ಬಲ್ಲ. ಅಂದಿನಿಂದ ಇಂದಿನತನಕವೂ ಬಹುತೇಕ ಎಲ್ಲಾ ನದಿಗಳ ವಿಚಾರದಲ್ಲಿ ನದಿಯಲ್ಲಿನ ನೀರಿನ ಹರಿವಿನ ಬಗ್ಗೆ ಅಂಕಿ ಅಂಶಗಳು ಇದ್ದರೂ ಕೂಡ ಅದರ ಪ್ರತಿಪಾದನೆಯಲ್ಲಿ ಭಿನ್ನತೆ, ಅವರವರ ಮೂಗಿನ ನೇರಕ್ಕೆ ಅಂಕಿ ಅಂಶಗಳನ್ನು ಸೃಷ್ಟಿಸುವಲ್ಲಿಯೇ ಆಯಾ ಪ್ರದೇಶದ ಆಸಕ್ತಿ ಅಷ್ಟೆ. ಹೀಗಾಗಿ ಅದು ನೈಜತೆಯನ್ನು ಪ್ರಶ್ನಿಸುತ್ತದೆ. ಉದಾಹರಣೆಗೆ ಹಿಮಾಲಯದ ನದಿಗಳಲ್ಲಿ ಹರಿಯುವ ನೀರಿನ ಪ್ರಮಾಣ ತಿಳಿದಿದ್ದರೂ
(ಮೊದಲ ಪುಟದಿಂದ) ತಾಂತ್ರಿಕ ಕಾರಣಗಳಿಗಾಗಿ ಸರ್ಕಾರ ಅದನ್ನು ಪ್ರಕಟಿಸುವುದಿಲ್ಲ.
ಇನ್ನು ದಕ್ಷಿಣದ ನದಿಗಳ ವಿಚಾರಕ್ಕೆ ಬಂದರೆ ಒಂದು ರಾಜ್ಯದವರು ಅಳೆದದ್ದನ್ನು ಮತ್ತೊಂದು ರಾಜ್ಯದವರು ಒಪ್ಪುವುದೇ ಇಲ್ಲ. ಇನ್ನು ಕೆಲ ನದಿಗಳದ್ದು ಮಳೆಗಾಲದ ನೀರೆಷ್ಟು? ಹರಿದು ಹೋಗುವು ದೆಷ್ಟು ? ಎಂಬುದು ಗೊತ್ತೇ ವಿನಹ ಬೇಸಗೆಯ ಪ್ರಮಾಣದಲ್ಲಿ ಯಾರಿಗೂ ನಿಖರತೆ ಇಲ್ಲ. ಸರಕಾರಕ್ಕೆ ಅಂಕಿ ಅಂಶಗಳ ಮೇಲಿನ ಆಸಕ್ತಿ ಬೃಹತ್ ಯೋಜನೆಗಳ ಅನುಷ್ಠಾನದ ಸಂದರ್ಭದಲ್ಲಿ ಹೊರತು ಬೇರೆ ಸಂದರ್ಭಗಳಲ್ಲಿ ಇಲ್ಲ.
ಕೊಡಗಿನ ಬ್ರಹ್ಮಗಿರಿಯ ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿ ಉದಯಿಸುವ ಕರ್ನಾಟಕ ಹಾಗೂ ತಮಿಳುನಾಡು ಎರಡೂ ರಾಜ್ಯಗಳಲ್ಲಿ ಸರಿ ಸುಮಾರು 800 ಕಿ.ಮೀ. ಉದ್ದ ಹರಿದು, 81,155 ಚದರ ಕಿ.ಮೀ. ಜಲಾನಯನ ಪ್ರದೇಶದ ವಿಸ್ತಾರವನ್ನು ಹೊಂದಿರುವ ಕಾವೇರಿ ನದಿಯಲ್ಲಿ ಹರಿಯುವ ನೀರಿನ ಪ್ರಮಾಣವನ್ನು ಅರಿಯಲೆಂದೇ ಕೇಂದ್ರ ಸರ್ಕಾರ ಕಣಿವೆ ಬಳಿ ಸ್ಥಾಪಿಸಿರುವ ಜಲಮಾಪನ ಕೇಂದ್ರದಲ್ಲಿನ ವರದಿಯಂತೆ ನದಿಯ ಹರಿವಿನ ಇತಿಹಾಸದಲ್ಲೇ ಮೊದಲು ಎಂಬಂತೆ ಕಳೆದ 2018 ರ ಆಗಸ್ಟ್ 16 ಮತ್ತು 17 ರಂದು ಎರಡು ದಿನಗಳಲ್ಲಿ ಬಂದ ಪ್ರವಾಹ ಅತ್ಯಂತ ಗರಿಷ್ಠದ ಪ್ರವಾಹವಾಗಿದೆ. ಅಂದರೆ 2018 ರಲ್ಲಿ ನದಿಯ ಪ್ರವಾಹ 16.220 ಮೀಟರ್ ಗಳಷ್ಟು ಎತ್ತರಕ್ಕೆ ಬಂದಿತ್ತು.
16.220 ಮೀಟರ್ಗಳಷ್ಟು ಎತ್ತರದ ಅಂತರದಲ್ಲಿ ನದಿ ಪ್ರವಹಿಸಿತ್ತು. ಇದರ ದುಷ್ಪರಿಣಾಮ ಕಣಿವೆ, ಕೂಡಿಗೆ, ಮುಳ್ಳುಸೋಗೆ, ಕುಶಾಲನಗರ ಹಾಗೂ ತೆಪ್ಪದಕಂಡಿಯಲ್ಲಿನ ಜನವಸತಿ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದ್ದವು. ಹಾಗೆಯೇ 2019 ರಲ್ಲಿ ನದಿಯ ಪ್ರವಾಹ 15.730 ಮೀ. ಇದ್ದರೆ, 2020 ರಲ್ಲಿ 14.720 ಮೀ. ನಷ್ಟು ನೀರಿನ ಪ್ರವಾಹ ಇತ್ತು. ಕಣಿವೆಯ ಜಲಮಾಪನ ಕೇಂದ್ರದ ಬಳಿ ಕಾವೇರಿ ನದಿ 140 ಮೀ. ಅಗಲವಿದ್ದು, ಎಡದಂಡೆ 12.50 ಮೀ.ಎತ್ತರವಿದ್ದರೆ, ನದಿಯ ಬಲದಂಡೆ 12.40 ಮೀ.ಎತ್ತರವಿದೆ. 2018 ರಲ್ಲಿ ಕಾವೇರಿ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ 1227.52 ಮಿ.ಲೀ.ಮಳೆಯಾಗಿತ್ತು. 2019 ರಲ್ಲಿ 1243.70 ಮಿ.ಲೀ.ಮಳೆಯಾಗಿತ್ತು.
ಹಾಗೆಯೇ 2020 ರಲ್ಲಿ 1048.40 ಮಿ.ಲೀ ಮಳೆಯಾಗಿತ್ತು. ತಲಕಾವೇರಿಯಿಂದ ಆರಂಭಗೊಂಡು ಕಣಿವೆ ಬಳಿ ಮೊದಲ ಜಲಮಾಪನ ಘಟಕವಿದೆ. ಹಾಗೆಯೇ ಕಾವೇರಿ ನದಿ ಮುಂದೆ ಹೋದಂತೆ ಮುಕ್ಕಂದೂರು ಹೊಸಳ್ಳಿ, ಕಟ್ಡೆಮಳಲವಾಡಿ, ಚುಂಚನಕಟ್ಟೆ, ಅಕ್ಕಿಹೆಬ್ಬಾಳು, ಟಿ.ನರಸೀಪುರ, ಕೊಳ್ಳೇಗಾಲ, ಬೆಂಡರಹಳ್ಳಿ, ಟಿ.ಕೆ.ಹಳ್ಳಿ, ಕರ್ನಾಟಕದ ಗಡಿ ಬಿಳಿಗುಂಡ್ಲು ಹಾಗೂ ತಮಿಳುನಾಡಿನ ಪ್ರವೇಶದ್ವಾರ ಹೊಗೇನಕಲ್ ಫಾಲ್ಸ್ ಸೇರಿದಂತೆ 22 ಘಟಕಗಳಿವೆ.
ಕಾವೇರಿ ಕಣಿವೆ ಅಚ್ಚುಕಟ್ಟು ಪ್ರದೇಶಗಳಲ್ಲಿ ಇರುವ ಕಾವೇರಿ, ಹಾರಂಗಿ, ಹೇಮಾವತಿ, ಕಬಿನಿ, ಲಕ್ಷ್ಮಣತೀರ್ಥ ಸೇರಿದಂತೆ ಕೆಆರ್ ಎಸ್ನಿಂದ ತಮಿಳುನಾಡಿಗೆ ಹರಿಯುವ ನೀರಿನ ಪ್ರಮಾಣವನ್ನು ಬಿಳಿಗುಂಡ್ಲುವಿನಲ್ಲಿರುವ ಜಲಮಾಪನ ಕೇಂದ್ರ ನಿರ್ಣಾಯಕ ಪಾತ್ರ ವಹಿಸುತ್ತದೆ. ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳ ಜೀವನದಿಯಾಗಿರುವ ಕಾವೇರಿ ಕರ್ನಾಟಕ ರಾಜ್ಯದಲ್ಲಿ 320 ಕಿ.ಮೀ. ತಮಿಳುನಾಡಿನಲ್ಲಿ 416 ಕಿ.ಮೀ. ಹರಿಯುತ್ತದೆ.
ಈ ನದಿಯಿಂದ ಕರ್ನಾಟಕದಲ್ಲಿ 34.273 ಚದರ ಕಿ.ಮೀ. ಕೇರಳದ 2.86 ಚದರ ಕಿ.ಮೀ ಮತ್ತು ತಮಿಳುನಾಡಿನ 44 ಸಾವಿರ ಚದರ ಕಿ.ಮೀ. ಪ್ರದೇಶವನ್ನು ಫಲವತ್ತಾಗಿಸುತ್ತದೆ. ಜೊತೆಗೆ ಕಾವೇರಿ ಜಲಾನಯನ ಪ್ರದೇಶದ ಎಂಟು ಜಿಲ್ಲೆಗಳ ವ್ಯಾಪ್ತಿಯಲ್ಲಿ 1340 ಕೆರೆಗಳಿದ್ದು ಅವುಗಳಿಗೂ ಕೂಡ ಈ ನದಿಯ ಮೂಲಕ ಏತನೀರಾವರಿ ಯೋಜನೆ ಕೈಗೊಂಡು ನೀರು ತುಂಬಿಸುವ ಕಾರಣ ಲಕ್ಷಾಂತರ ಎಕರೆ ಭೂಮಿ ನೀರಾವರಿಗೆ ಬಳಕೆಯಾಗುತ್ತಿದೆ. ಒಟ್ಟಾರೆ ತಲಕಾವೇರಿಯಲ್ಲಿ ಉದಯಿಸುವ ಈ ಕಾವೇರಿ ಎರಡೂ ರಾಜ್ಯಗಳ ಜೀವ ನದಿಯಾಗಿದ್ದು ತನ್ನ ತವರಿನಲ್ಲಿ ಕಳೆದ ಮೂರು ವರ್ಷಗಳಿಂದ ಉಂಟು ಮಾಡುತ್ತಿರುವ ಹಾನಿ ಮಾತ್ರ ಅಪಾರ. ಅದು ಮುಂದಿನ ದಿನಗಳಲ್ಲಿ ಪುನರಾವರ್ತನೆ ಗೊಳ್ಳದಿದ್ದರೆ ಸಾಕು.