ಮಡಿಕೇರಿ, ಆ. 19: ಮಡಿಕೇರಿ ನಗರಕ್ಕೆ ಪ್ರಸಕ್ತ ವರ್ಷ ಜನವರಿಯಿಂದ ಈತನಕ ಒಟ್ಟು 98.62 ಇಂಚು ಮಳೆಯಾಗಿದೆ. 2020ರ ಜನವರಿ ಯಿಂದ ಈ ದಿನಾಂಕದವರೆಗೆ ನಗರಕ್ಕೆ ಇಷ್ಟು ಪ್ರಮಾಣದ ಮಳೆ ಸುರಿದಿದೆ. 2018ರಲ್ಲಿ ನಗರ ಇತ್ತೀಚಿನ ವರ್ಷಗಳಲ್ಲಿ ಭಾರೀ ಮಳೆಗಾಲವನ್ನು ಎದುರಿಸಿದ್ದು, ಆ ವರ್ಷ ಜನವರಿ ಯಿಂದ ಡಿಸೆಂಬರ್ ತನಕ ಒಂದು ವರ್ಷದ ಅವಧಿಯಲ್ಲಿ 232 ಇಂಚಿನಷ್ಟು ಮಳೆಯಾಗಿತ್ತು. 2019ರಲ್ಲಿ ಜನವರಿಯಿಂದ ಡಿಸೆಂಬರ್ ತನಕ ಒಟ್ಟು 132.92 ಇಂಚು ಮಳೆ ದಾಖ ಲಾಗಿತ್ತು ಎಂದು ನಗರದಲ್ಲಿರುವ ಕೃಷಿ ಸಂಶೋಧನಾ ಇಲಾಖೆಯ ಮಾಹಿತಿ ತಿಳಿಸಿದೆ. ಮಡಿಕೇರಿ ನಗರದ ಒತ್ತಿನಲ್ಲೇ ಬರುವ ಮೂರನೇ ಮೈಲ್‍ಗೆ ಈ ಬಾರಿ ನಗರಕ್ಕಿಂತ ಹೆಚ್ಚು ಮಳೆಯಾಗಿದೆ. ಈ ವ್ಯಾಪ್ತಿಗೆ ಈ ತನಕ ಒಟ್ಟು 109.75 ಇಂಚು ಮಳೆ ದಾಖಲಾಗಿದೆ.

ಅದರಲ್ಲೂ ಜುಲೈ ಅಂತ್ಯದ ತನಕ 56.35 ಇಂಚು ಮಳೆಯಾಗಿದ್ದು, ಕೇವಲ ಆಗಸ್ಟ್‍ನಲ್ಲೇ 53.40 ಇಂಚು ಮಳೆಯಾಗಿದೆ. ಕಳೆದ ಇಡೀ ವರ್ಷದಲ್ಲಿ 165.75 ಇಂಚು ಮಳೆಯಾಗಿದ್ದು, ಆಗಸ್ಟ್ ಅಂತ್ಯಕ್ಕೆ 108 ಇಂಚು ಮಳೆ ದಾಖಲಾಗಿತ್ತು ಎಂದು ವರ್ಷಂಪ್ರತಿ ಮಳೆ ಪ್ರಮಾಣದ ದಾಖಲಾತಿಯ ಹವ್ಯಾಸ ಹೊಂದಿರುವ ಕೆ.ಎಸ್. ದೇವಯ್ಯ ಅವರು ಮಾಹಿತಿ ನೀಡಿದ್ದಾರೆ.