ಕೂಡಿಗೆ, ಆ. 19: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖ್ಯ ರಸ್ತೆ ಮತ್ತು ಅದಕ್ಕೆ ಹೊಂದಿಕೊಂಡಂತೆ ಉಪ ರಸ್ತೆಗಳ ಕಾಮಗಾರಿಯು ನೀರಾವರಿ ಇಲಾಖೆಯ ವತಿಯಿಂದ ನಡೆಯುತ್ತಿದ್ದು, ಶೇ. 70 ಭಾಗದಷ್ಟು ಮುಗಿದಿದೆ. ಉಳಿದ ಕೆಲ ಭಾಗದ ಕಾಮಗಾರಿಯು ಜಾಗದ ಸಮಸ್ಯೆ ಕಾರಣದಿಂದಾಗಿ ಸ್ಥಗಿತಗೊಂಡಿತ್ತು. ಇದೀಗ ಗ್ರಾಮಸ್ಥರ ತೀರ್ಮಾನದಂತೆ ಉಳಿಕೆ ಕಾಮಗಾರಿಯನ್ನು ಪ್ರಾರಂಭಗೊಳಿಸಲಾಗಿದೆ.

ಕಳೆದ ವಾರ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ತೊರೆನೂರು ಗ್ರಾಮದ ಬೆಳೆ ಹಾನಿಗೊಳಗಾದ ಭಾಗಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ರಸ್ತೆಯ ವಿಷಯವನ್ನು ಪ್ರಸ್ತಾವನೆ ಮಾಡಿದರು. ಸಮಸ್ಯೆ ಬಗೆಹರಿಸಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದ್ದರು. ಅದರಂತೆ ಕಾವೇರಿ ನೀರಾವರಿ ನಿಗಮದ ವತಿಯಿಂದ ಟೆಂಡರ್ ಪಡೆದ ಗುತ್ತಿಗೆದಾರ ಬಾಕಿ ಉಳಿದ ಕಾಮಗಾರಿಯನ್ನು ಪಾರಂಭಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್, ಇಂಜಿನಿಯರ್ ನಾಗರಾಜ್, ಗುತ್ತಿಗೆದಾರರು ಇದ್ದರು.