ವೀರಾಜಪೇಟೆ, ಆ. 18: ವೀರಾಜಪೇಟೆ ತಾಲೂಕಿನಲ್ಲಿ ಈಚೆಗೆ ಬಿದ್ದ ಭಾರೀ ಮಳೆ ಗಾಳಿಯಿಂದ ಮನೆ ಜಖಂ, ಗದ್ದೆ ಜಲಾವೃತ, ಕಾಫಿ ಗಿಡಗಳು ಹಾಗೂ ಫಸಲು ನಾಶ, ಮಣ್ಣು ಜರಿದಿರುವುದು ಸೇರಿದಂತೆ ಈತನಕ ಅಂದಾಜು ತಾಲೂಕಿನಲ್ಲಿ ರೂ. ಎರಡೂವರೆ ಕೋಟಿಗೂ ಅಧಿಕ ನಷ್ಟ ಉಂಟಾಗಿದ್ದು, ಮೊದಲ ಹಂತವಾಗಿ ಪರಿಹಾರ ಒದಗಿಸಲು ಸರಕಾರ ರೂ. ಒಂದು ಕೋಟಿ ಬಿಡುಗಡೆ ಮಾಡಿರುವುದಾಗಿ ತಹಶೀಲ್ದಾರ್ ಎಲ್.ಎಂ. ನಂದೀಶ್ ತಿಳಿಸಿದ್ದಾರೆ.
ಈಗ ಮಳೆ ಕುಂಠಿತಗೊಂಡಿ ರುವುದರಿಂದ ಆರು ಹೋಬಳಿಗಳ ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಗ್ರಾಮ ಸೇವಕರು ನಷ್ಟದ ಕುರಿತು ಖುದ್ದು ಸಮೀಕ್ಷೆ ನಡೆಸುತ್ತಿದ್ದು, ಮುಂದಿನ 7 ದಿನಗಳ ಅವಧಿಯಲ್ಲಿ ತಾಲೂಕಿನಲ್ಲಿ ನಷ್ಟದ ಅಂದಾಜು ಪ್ರಮಾಣ ಗೊತ್ತಾಗಲಿದೆ. ಇದರ ನಂತರ ನಷ್ಟದ ನಿಖರವಾದ ಮೊಬಲಗನ್ನು ಪರಿಹಾರದ ಮಂಜೂರಾತಿಗಾಗಿ ಸರಕಾರಕ್ಕೆ ಕಳಿಸಲಾಗುವುದು. ಈಗ ತಾಲೂಕಿನ ವಿವಿಧ ಕಡೆಗಳಲ್ಲಿ ಮನೆಗೆ ನೀರು ನುಗ್ಗಿ ಜಖಂಗೊಂಡು ಕಷ್ಟದಲ್ಲಿರುವವರು, ಭಾಗಶಃ ಮನೆ ಜಖಂಗೊಂಡು ಅಪಾಯದ ಅಂಚಿನಲ್ಲಿರುವವರಿಗೆ ಮೊದಲ ಹಂತದಲ್ಲಿ ್ಲತಲಾ ರೂ 10,000 ನಗದು ಪರಿಹಾರ ನೀಡಲಾಗುವುದು. ಉಳಿದಂತೆ ಮನೆ ನೆಲಸಮ, ಮನೆ ಜಖಂಗೊಂಡವರಿಗೂ ಇಲಾಖೆ ವತಿಯಿಂದ ಅಂದಾಜು ನಷ್ಟ ಗೊತ್ತುಪಡಿಸಿ ಪರಿಹಾರ ನೀಡಲಾಗು ವುದು ಎಂದು ನಂದೀಶ್ ತಿಳಿಸಿದರು.
ಮಳೆ ಕಡಿಮೆಯಾದುದರಿಂದ ಎರಡು ದಿನಗಳಿಂದ ವೀರಾಜಪೇಟೆ ತಾಲೂಕಿನಾದ್ಯಂತ ಪ್ರವಾಸ ಕೈಗೊಂಡಿದ್ದು ನಷ್ಟದ ಪ್ರಮಾಣ ಅಂದಾಜು ಸಮೀಕ್ಷೆ ಮಾಡಲು ಕಂದಾಯ ಸಿಬ್ಬಂದಿಗಳನ್ನು ಚುರುಕು ಗೊಳಿಸಲಾಗಿದೆ. ಗದ್ದೆ ಜಲಾವೃತ, ಕಾಫಿ ತೋಟದಲ್ಲಿ ಮರಗಳು ಬಿದ್ದು ಕಾಫಿಗಿಡಗಳ ನಾಶದಿಂದಲೂ ಅಧಿಕ ನಷ್ಟ ಸಂಭವಿಸಿದೆ. ತಾಲೂಕಿನಲ್ಲಿ ಭಾರೀ ಮಳೆ ಗಾಳಿಯಿಂದಾಗಿ ಸಾಕಷ್ಟು ಮನೆಗಳು ಭಾಗಶಃ ಜಖಂಗೊಂಡಿರುವುದು ಗೊತ್ತಾಗಿದೆ ಎಂದು ನಂದೀಶ್ ತಿಳಿಸಿದರು.