ಸೋಮವಾರಪೇಟೆ,ಆ.19: ರೈತರ ಹಿತ ಕಾಪಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿದ್ದು, ರೈತ ಹಾಗೂ ಕಾರ್ಮಿಕ ವಿರೋಧಿ ನೀತಿಗಳಿಂದ ಜನರನ್ನು ಸಂಕಷ್ಟಕ್ಕೆ ತಳ್ಳಿಗೆ ಎಂದು ತಾಲೂಕು ಜೆಡಿಎಸ್ ಆರೋಪಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ತಾಲೂಕು ಅಧ್ಯಕ್ಷ ಸಿ.ಎಸ್.ನಾಗರಾಜ್, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜೆಡಿಎಸ್‍ನಿಂದ ತಾ. 21ರಂದು ಜಿಲ್ಲಾಕೇಂದ್ರದಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದರು.

ನೂತನವಾಗಿ ಜಾರಿಗೆ ತಂದಿರುವ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ರಾಜ್ಯದ ರೈತರ ಮರಣ ಶಾಸನವಾಗಿದೆ. ಬಹುರಾಷ್ಟ್ರೀಯ ಕಂಪನಿಗಳು ರೈತರ ಕೃಷಿ ಭೂಮಿಯನ್ನು ಖರೀದಿಸಲು ಸುಗ್ರಿವಾಜ್ಞೆಯ ಮೂಲಕ ರಾಜ್ಯದ ಬಿಜೆಪಿ ಸರ್ಕಾರ ಅನುವು ಮಾಡಿಕೊಟ್ಟಿದೆ. ಮುಂದೊಂದು ದಿನ ರೈತರು ಕೃಷಿ ಭೂಮಿಯನ್ನು ಮಾರಿ ಗುಳೇ ಹೋಗುವಂತ ದುಸ್ಥಿತಿ ಒದಗಲಿದೆ. ಇಂತಹ ರೈತ ವಿರೋಧಿ ಧೋರಣೆಯ ವಿರುದ್ಧ ಜೆಡಿಎಸ್ ನಿರಂತರ ಹೋರಾಟ ಸಂಘಟಿಸಲಿದೆ ಎಂದು ತಿಳಿಸಿದರು.

ಇದರೊಂದಿಗೆ ಎಪಿಎಂಸಿ ಕಾಯ್ದೆಗೆ ಸುಗ್ರಿವಾಜ್ಞೆಯ ಮೂಲಕ ತಿದ್ದುಪಡಿ ತಂದಿರುವದೂ ಕೂಡ ರೈತ ವಿರೋಧಿಯಾಗಿದೆ. ಕೂಡಲೆ ಈ ಸುಗ್ರಿವಾಜ್ಞೆಯನ್ನು ಹಿಂಪಡೆಯಬೇಕು. ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕಾರ್ಮಿಕರಿಗೆ ಸಿಕ್ಕಿದ್ದ ಶೇ.90ರಷ್ಟು ಸೌಲಭ್ಯ ಕಿತ್ತುಕೊಂಡು ಕಾರ್ಮಿಕರನ್ನು ಬೀದಿಗೆ ತಳ್ಳುತ್ತಿದೆ ಎಂದು ಆರೋಪಿಸಿದರು.ಕೊರೊನಾ ಸಂತ್ರಸ್ತರಿಗೆ ಸೌಲಭ್ಯ ಹಾಗೂ ಸೂಕ್ತ ಪರಿಹಾರ ಒದಗಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಇದರೊಂದಿಗೆ ವೈರಸ್ ಹರಡುವದನ್ನು ತಡೆಗಟ್ಟುವಲ್ಲೂ ಎಡವಿದೆ ಎಂದರು.

ಗೋಷ್ಠಿಯಲ್ಲಿ ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ಪಿ.ಡಿ. ರವಿಕುಮಾರ್, ಯುವ ಘಟಕದ ತಾಲೂಕು ಅಧ್ಯಕ್ಷ ಡಿ.ಸಿ.ರವಿಕುಮಾರ್, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಎ.ಜಿ.ವಿಜಯ, ಪಕ್ಷದ ಜಿಲ್ಲಾ ಕಾರ್ಯದರ್ಶಿ ದೇವಪ್ಪಗೌಡ ಉಪಸ್ಥಿತರಿದ್ದರು.