ವೀರಾಜಪೇಟೆ, ಆ. 19: ವೀರಾಜಪೇಟೆಯ ಜೈನರ ಬೀದಿಯಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ಗೌರಿ-ಗಣೇಶಉತ್ಸವ ಸಮಿತಿಯಿಂದ ಗೌರಿ ಪಲ್ಲಕ್ಕಿ ಉತ್ಸವ ಜರುಗಲಿದೆ.

ತಾ.21ರಂದು ಬೆಳಿಗ್ಗೆ ಗೌರಿ ಮೂರ್ತಿಯನ್ನು ಸಿದ್ದಾಪುರ ರಸ್ತೆಯಲ್ಲಿರುವ ದಿ. ಎನ್.ಬಿ.ಉತ್ತಪ್ಪ ಅವರ ಜಾಗದಲ್ಲಿರುವ ಕೆರೆಯಿಂದ ಶಾಸ್ತ್ರೋಕ್ತವಾಗಿ ಗೌರಿಯನ್ನು ತರುವುದು. ನಂತರ ಮುತ್ತೈದೆಯರು ಗೌರಿಗೆ ಬಾಗಿನ ಅರ್ಪಿಸಲು ಬೆಳಿಗ್ಗೆ 9 ರಿಂದ ಸಂಜೆ 6.30 ರ ತನಕ ಅವಕಾಶ ಕಲ್ಪಿಸಲಾಗಿದೆ. ರಾತ್ರಿ 7 ಗಂಟೆಗೆ ಬಸವೇಶ್ವರ ದೇವಾಲಯದಲ್ಲಿ ಮಹಾಪೂಜಾ ಸೇವೆಯೊಂದಿಗೆ ಗೌರಿಯ ಪ್ರತಿಷ್ಠಾಪನೆ ನಡೆಯಲಿದೆ. ಕೋವಿಡ್-19ನ ಸರಕಾರದ ಆದೇಶ ಮಾರ್ಗ ಸೂಚಿಯನ್ನು ಪಾಲಿಸುವ ಸಲುವಾಗಿ ಈ ಬಾರಿ ಗೌರಿ ಪಲ್ಲಕ್ಕಿ ಉತ್ಸವದ ಮೆರವಣಿಗೆಯನ್ನು ರದ್ದುಪಡಿಸಲಾಗಿದೆ ಎಂದು ಉತ್ಸವ ಸಮಿತಿಯ ಅಧ್ಯಕ್ಷ ಎನ್.ಜಿ. ಕಾಮತ್ ತಿಳಿಸಿದ್ದಾರೆ.

ತಾ.22ರಂದು ಬೆಳಿಗ್ಗೆ 11 ಗಂಟೆಗೆ ಗಣೇಶನ ಮೂರ್ತಿಯ ಪ್ರತಿಷ್ಠಾಪನೆ ವಿಧಿ ವಿಧಾನಗಳ ಪ್ರಕಾರ ನಡೆಯಲಿದೆ. ಸೆಪ್ಟಂಬರ್ 1 ರಂದು ಸಂಜೆ 6.30 ರೊಳಗೆ ಗೌರಿ-ಗಣೇಶನ ವಿಸರ್ಜನೋತ್ಸವವು ಸಾಂಪ್ರದಾಯಿಕ ಬದ್ಧವಾಗಿ ಇಲ್ಲಿನ ಗೌರಿಕೆರೆಯಲ್ಲಿ ಜರುಗಲಿದೆ.