ಮಡಿಕೇರಿ, ಆ. 18: ಮಡಿಕೇರಿ - ಮಂಗಳೂರು ರಸ್ತೆಯ ದೇವರಕೊಲ್ಲಿ ಬಳಿ ಸರಕಾರಿ ಬಸ್ ಅವಘಡದಿಂದ ಪಾದಚಾರಿ ಓರ್ವರು ಸಾವನ್ನಪ್ಪಿದ ಘಟನೆ ಸಂಭವಿಸಿದೆ. ತಾ. 17 ರಂದು ಮೈಸೂರಿನಿಂದ ಪುತ್ತೂರಿಗೆ ತೆರಳುತ್ತಿದ್ದ ಬಸ್ ದೇವರಕೊಲ್ಲಿ ಬಳಿ ನಿಯಂತ್ರಣ ತಪ್ಪಿ ರಸ್ತೆಯ ಬಳಿ ಮಗುಚಿ ಬಿದ್ದಿದೆ. ಈ ಸಂದರ್ಭ ಬಸ್‍ನ ಹಿಂಭಾಗ ಪಾದಚಾರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಮದೆನಾಡು ನಿವಾಸಿ, ವಿಜಯ್‍ಕುಮಾರ್ ಎಂಬವರಿಗೆ ತಗುಲಿದ್ದು, ಕೆಳಗೆ ಬಿದ್ದ ವಿಜಯ್ ಕುಮಾರ್ ಅವರ ತಲೆಗೆ ಕಲ್ಲು ಬಡಿದು, ಗಂಭೀರ ಗಾಯವಾಗಿತ್ತು. ಆಸ್ಪತ್ರೆಗೆ ದಾಖಲಿಸಲಾಯಿತಾದರೂ ತಾ. 17ರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆ ಸಂಜೆ ಸುಮಾರು 4.45ಕ್ಕೆ ಸಂಭವಿಸಿದ್ದು, ಮೃತ ವಿಜಯ್‍ಗೆ ಸುಮಾರು 45 ವಯಸ್ಸಾಗಿತ್ತು. ಬಸ್‍ನಲ್ಲಿ ಓರ್ವ ಪ್ರಯಾಣಿಕನಿದ್ದುದಾಗಿ ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ.