ಮಡಿಕೇರಿ, ಆ. 18: ನಿನ್ನೆದಿನ ಸುಂಟಿಕೊಪ್ಪ ಹೋಬಳಿಯ ಅಂದಗೋವೆ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಿದ ಬೆನ್ನಲ್ಲೇ ರಾತ್ರಿವೇಳೆ ಕಾಡಾನೆಗಳು ದಾಂಧಲೆಯನ್ನು ಮುಂದುವರಿಸಿವೆ. ಹಗಲಿನ ವೇಳೆ ಅರಣ್ಯಕ್ಕೆ ಅಟ್ಟಲ್ಪಟ್ಟ ಕಾಡಾನೆಗಳು ಕಳೆದ ರಾತ್ರಿ ನಾಕೂರು ಶಿರಂಗಾಲದ ಸಿ.ವಿ. ಹೇಮಾವತಿ ಎಂಬವರ ತೋಟಕ್ಕೆ ನುಗ್ಗಿದ್ದು, ಸುಮಾರು ಎರಡು ಎಕರೆಯಷ್ಟು ಕೆಸ ಹಾಗೂ ಸುವರ್ಣಗೆಡ್ಡೆ ಬೆಳೆಗಳನ್ನು ಧ್ವಂಸಗೊಳಿಸಿವೆ. ಅರಣ್ಯ ಇಲಾಖೆ ಸೂಕ್ತ ಪರಿಹಾರ ಒದಗಿಸುವಂತೆ ಹೇಮಾವತಿ ಮನವಿ ಮಾಡಿದ್ದಾರೆ.