ಗುಡ್ಡೆಹೊಸೂರು, ಆ. 19: ರಾಷ್ಟ್ರೀಯ ಹೆದ್ದಾರಿಗೆ ಸ್ಥಳ ಗುರುತು ಮಾಡಿರುವ ಹಿನ್ನೆಲೆಯಲ್ಲಿ ಈ ಭಾಗದ ನೂರಾರು ರೈತರು ಕಂಗಾಲಾಗಿದ್ದಾರೆ. ಮೈಸೂರು ಮೂಲಕ ಮಂತನಹಳ್ಳಿ ದೊಡ್ಡೆಹೊಸುರು, ಮರೂರು ಮೂಲಕ ತೆಪ್ಪದ ಕಂಡಿ ತೂಗು ಸೇತುವೆ ಬಳಿ ಸೇತುವೆ ನಿರ್ಮಾಣವಾಗಿ ಮುಂದೆಸಾಗುವ ಮಾರ್ಗಕ್ಕೆ ಗುರುತಿನ ಕಲ್ಲು ನೆಡಲಾಗಿದೆ.

ಈ ಮಾರ್ಗದಲ್ಲಿ ಸಾವಿರಾರು ಮಂದಿ ವಾಸದ ಮನೆಗಳು, ತೋಟ, ಜಾಗ ಕಳೆದುಕೊಳ್ಳುವ ಬಗ್ಗೆ ಭಯಭೀತರಾಗಿದ್ದಾರೆ. ಕೊಡಗಿನ ಜನ ಒಂದು ಕಡೆಯಿಂದ ಕೊರೊನಾ ಮತ್ತೊಂದು ಕಡೆ ಮ¼,É ಬೆಟ್ಟ, ಗುಡ್ಡ ಕುಸಿತದಿಂದ ನಲುಗಿಹೋಗಿದ್ದಾರೆ. ಮತ್ತೆ ರಸ್ತೆಗಾಗಿ ಭೂಮಿ ಕೊರೆದರೆ ಮುಂದೆ ಕೊಡಗಿಗೆ ಭಾರೀ ದುರಂತ ತಪ್ಪಿದಲ್ಲ ಎಂಬುದು ಜನವಲಯದ ಅಭಿಪ್ರಾಯ. ಮೈಸೂರಿನಿಂದ ಜಿಲ್ಲೆಗೆ ಸೇರ್ಪಡೆಗೊಳ್ಳುವ ರಸ್ತೆಯನ್ನು ಅಭಿವೃದ್ಧಿ ಪಡಿಸಿದಲ್ಲಿ ಕೊಡಗಿನಲ್ಲಿ ಯಾವದೇ ಸಮಸ್ಯೆ ಇರುವುದಿಲ್ಲ. ಕೊಡಗು ಬೆಟ್ಟ ಗುಡ್ಡದ ಪ್ರದೇಶವಾಗಿದ್ದು, ಕಾವೇರಿ ನದಿಗೆ ಸೇತುವೆ ನಿರ್ಮಿಸಿ ರಸ್ತೆ ಮಾಡುವುದಕ್ಕಿಂತ ಕೊಡಗು ಜಿಲ್ಲೆಯ ಮಟ್ಟಿಗೆ ಇರುವ ರಸ್ತೆಯನ್ನು ಅಭಿವೃದ್ಧಿ ಪಡಿಸಲಿ ಎಂಬುದು ಜನಸಾಮಾನ್ಯರ ಕೋರಿಕೆಯಾಗಿದೆ. - ಗಣೇಶ್ ಕುಡೆಕಲ್