ಮಡಿಕೇರಿ, ಆ. 19: ಇತ್ತೀಚೆಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಗೋಣಿಕೊಪ್ಪಲು ವತಿಯಿಂದ ಸರ್ಕಾರದ ವಿದ್ಯಾಗಮ ಕಾರ್ಯಕ್ರಮದಡಿ ಶಾಲೆಯ ಶಿಕ್ಷಕರು ಗೋಣಿಕೊಪ್ಪಲು ಸಮೀಪದ ಈರಣ್ಣ ಕಾಲೋನಿ ಹಾಗೂ ಕೈಕೇರಿ ಗ್ರಾಮದ ಮಕ್ಕಳ ಮನೆಗೆ ತೆರಳಿ ಯೋಗಕ್ಷೇಮ ವಿಚಾರಿಸಿ, ಪಾಠಬೋಧನೆ ಮಾಡಿದರು.

ಶಿಕ್ಷಕ ಬಿ.ಆರ್ ಸತೀಶ್ ಸ್ಯಾನಿಟೈಸರನ್ನು ಮಕ್ಕಳ ಕೈಗಳಿಗೆ ಸಿಂಪಡಿಸಿ ಮಾಸ್ಕನ್ನು ಧರಿಸುವಂತೆ ತಿಳಿಯಪಡಿಸಿದರು. ಮುಖ್ಯ ಶಿಕ್ಷಕಿ ಕೆ.ಆರ್. ಶಶಿಕಲಾ ಅವರಿಂದ ಅಲ್ಲಿಯೇ ಇದ್ದ ಇಬ್ಬರು ಮಕ್ಕಳನ್ನು ಶಾಲೆಯ ದಾಖಲಾತಿಗೆ ಸೇರಿಸಿಕೊಳ್ಳಲಾಯಿತು. ಮುಖ್ಯೋಪಾದ್ಯಾಯರು ಕೊರೊನಾದ ಬಗ್ಗೆ ಜಾಗೃತಿಯನ್ನು ತಿಳಿಯಪಡಿಸಿದರು. ಕೆಲವೊಂದು ಪಾಠದ ವಿವರವನ್ನು ನೀಡಿದರು.

ಈ ವರ್ಷದಲ್ಲಿ ಮಕ್ಕಳು ಕಲಿಕೆಯನ್ನು ತಪ್ಪಿಸದಂತೆ ಎಚ್ಚರ ವಹಿಸಲು ಪೋಷಕರಿಗೂ ಸಲಹೆ ನೀಡಿದರು. ದೈಹಿಕ ಶಿಕ್ಷಕ ಟಿ.ಡಿ. ರಮಾನಂದ ಅವರು ವಿದ್ಯಾರ್ಥಿಗಳಿಗೆ ಯೋಗಾಸನದ ಬಗ್ಗೆ ಮಾಹಿತಿಯನ್ನು ನೀಡಿದರು. ಚಿತ್ರಕಲಾ ಶಿಕ್ಷಕ ಬಿ.ಆರ್. ಸತೀಶ್ ಅವರು ಚಿತ್ರಕಲೆಯ ಬಗ್ಗೆ ಮಾತನಾಡಿ, ಸರಳವಾಗಿ ಚಿತ್ರ ರಚನೆ, ವಿದ್ಯಾಗಮದ ಕಲಿಕಾ ಪೂರಕ ಚಿತ್ರಕಲೆಯ ಪುಸ್ತಕವನ್ನು ತಯಾರಿಸಿ ಮಕ್ಕಳಿಗೆ ವಿತರಿಸಿ ಮನೆಯಲ್ಲಿ ಚಿತ್ರವನ್ನು ರಚಿಸುವಂತೆ ಹೇಳಿದರು. ಶಿಕ್ಷಕರು ತಂದಿದ್ದ ಪುಸ್ತಕ, ಪೆನ್ಸಿಲ್, ಕ್ರಯಾನ್, ಡ್ರಾಯಿಂಗ್ ಶೀಟ್‍ಗಳನ್ನು ಮಕ್ಕಳಿಗೆ ವಿತರಿಸಿ ಮನೆಯಲ್ಲಿಯೇ ಕೆಲಸವನ್ನು ಮಾಡುವಂತೆ ತಿಳಿಸಿದರು. ಪಾಠಬೋಧನೆಯ ಸಂದರ್ಭದಲ್ಲಿ ಪೋಷಕರು ಕೂಡ ಭಾಗಿಯಾಗಿದ್ದರು.