ಕಣಿವೆ, ಆ. 18: ಆನೆಕಾಡು ಅರಣ್ಯದ ರಾಜ್ಯ ಹೆದ್ದಾರಿಯಲ್ಲಿ ನಿಂತು ಹಾರಿಸಿದ ಪಾರಿವಾಳ ಐವತ್ತು ಕಿ.ಮೀ ದೂರದ ಹುಣಸೂರು ಬಳಿಯ ಹಳ್ಳಿಯೊಂದರ ಮನೆಯಲ್ಲಿನ ತನ್ನ ಗೂಡಿಗೆ ಕೇವಲ ಮೂರು ಗಂಟೆಗಳ ಅವಧಿಯಲ್ಲಿ ಆಗಸದಲ್ಲಿ ಹಾರಾಡಿ ತೂರಾಡಿಕೊಂಡು ಹೋಗಿ ಸೇರಿಕೊಂಡಿದೆ.ಈ ಪಾರಿವಾಳವನ್ನು ಹಾರಿಬಿಟ್ಟವರು ಹುಣಸೂರು ಬಳಿಯ ಊಯಿಗೌಡನಹಳ್ಳಿ ಗ್ರಾಮದ ವೆಂಕಟೇಶ್. ಇವರಿಗೆ ಪಾರಿವಾಳ ಅಂದರೆ ಬಲು ಪ್ರೀತಿ. ಕಳೆದ ಹಲವು ವರ್ಷಗಳಿಂದ ಪಾರಿವಾಳಗಳನ್ನು ಸಾಕುತ್ತಿರುವ ಇವರು, ಆಗಿಂದಾಗ್ಗೆ ತಾವು ಸಾಕಿರುವ ಪಾರಿವಾಳಗಳನ್ನು ಆಗಸದಲ್ಲಿ ಹಾರಿಬಿಡುವ ಮೂಲಕ ಒಂದು ರೀತಿ ಮನೋರಂಜನೆ ಮತ್ತೊಂದು ರೀತಿ ತರಬೇತಿ ಎರಡನ್ನು ಏಕಕಾಲದಲ್ಲಿ ಮಾಡುತ್ತಾ ಬರುತ್ತಿದ್ದಾರೆ.

ತಮ್ಮ ಮನೆಯಂಗಳದಲ್ಲಿ ಸಾಕಿರುವ ಈ ಪಾರಿವಾಳವನ್ನು ಕಾಗದದ ಬಾಕ್ಸ್ ಒಂದರೊಳಗೆ ಇಟ್ಟು ತನ್ನನ್ನು ಎಲ್ಲಿ ಒಯ್ಯುತ್ತಿದ್ದಾರೆ ಎಂಬ ಸುಳಿವೂ ಸಿಗದಂತೆ ತಮ್ಮ ವಾಹನದಲ್ಲಿ ಒಯ್ದು ಹತ್ತು ಕಿಮೀ, ಇಪ್ಪತ್ತೈದು ಕಿ.ಮೀ., ಐವತ್ತು ಕಿ.ಮೀ. ಹೀಗೆ ಕನಿಷ್ಟ ಹಾಗೂ ಗರಿಷ್ಠ ಅಂತರದಲ್ಲಿ ಈ ಪಾರಿವಾಳಗಳನ್ನು ಹಾರಿಬಿಟ್ಟು ಮನೆಗೆ ಬರುವ ವೆಂಕಟೇಶ್‍ಗೆ ಗೊತ್ತೇ ಆಗದಂತೆ ಈ ಪಾರಿವಾಳ ಗಳು ಅದೇ ಮನೆಯ ಅವುಗಳ ಗೂಡನ್ನು ಸೇರಿರುತ್ತವೆ.

ಆನೆಕಾಡು ಅರಣ್ಯದಲ್ಲಿ ಬಿಳಿ ಹಾಗೂ ಕಪ್ಪು ಬಣ್ಣದ ಎರಡು ಪಾರಿವಾಳಗಳನ್ನು ಹಾರಿಸಿದ ವೆಂಕಟೇಶ್ ಅವರನ್ನು ಪತ್ರಿಕೆ ಮಾತನಾಡಿಸಿದಾಗ, ಪಾರಿವಾಳ ಸಾಕೋದು ನಮ್ಮೂರಿನಲ್ಲಿ ಹಲವರ ಉದ್ಯೋಗವಾಗಿದೆ. ನಾನು ಕೂಡ ಪಾರಿವಾಳಗಳ ಪಾಲಕನಾಗಿದ್ದು, ನಮ್ಮ ಮನೆಯಲ್ಲೇ ತಾಯಿ ಪಾರಿವಾಳ

(ಮೊದಲ ಪುಟದಿಂದ) ಇಟ್ಟ ಮೊಟ್ಟೆಯಲ್ಲಿ ಒಡಮೂಡಿದ ಈ ಪಾರಿವಾಳಗಳನ್ನು ಹಾರಾಟಕ್ಕೆ ಸಜ್ಜುಗೊಳಿ ಸಲಾಗುತ್ತಿದೆ.

ಬೆಂಗಳೂರಿನಲ್ಲಿ ನಡೆಯುವ ಪಾರಿವಾಳ ಹಾರಾಟ ಪಂದ್ಯದಲ್ಲಿ ಭಾಗವಹಿಸಬೇಕೆನ್ನುವ ಬಯಕೆಯಿಂದ ನಮ್ಮ ಪಾರಿವಾಳಗಳಿಗೆ ತರಬೇತಿ ನೀಡುತ್ತಿದ್ದೇನೆ ಎನ್ನುತ್ತಾರೆ ವೆಂಕಟೇಶ್. ಕಳೆದ ಕೆಲವು ವರ್ಷಗಳ ಹಿಂದೆ ಮಡಿಕೇರಿಯ ಪೆÇಲೀಸ್ ಮೈದಾನದಲ್ಲಿ ಪೆÇಲೀಸರಿಗೆ ಆಯೋಜಿಸಿದ್ದ ಕ್ರೀಡಾಕೂಟದ ಉದ್ಘಾಟನೆಗೆ ಕೇರಳದಿಂದ ಬಂದ ವ್ಯಕ್ತಿಯೊಬ್ಬರು ಇಂತಹುದೇ ಪಾರಿವಾಳವೊಂದನ್ನು ತಂದು ಕ್ರೀಡಾಕೂಟದಲ್ಲಿ ಹಾರಿಬಿಟ್ಟಿದ್ದರು. ಆದರೆ ಆ ಪಾರಿವಾಳವನ್ನು ಹಾರಿಬಿಟ್ಟ ಆ ವ್ಯಕ್ತಿ ಕೇರಳದಲ್ಲಿನ ತಮ್ಮ ಮನೆಯನ್ನು ಸೇರುವ ಮುನ್ನವೇ ಈ ಪಾರಿವಾಳ ಹಾರಿಹೋಗಿ ಅದರ ಗೂಡು ಸೇರಿತ್ತು ಎಂದು ಆನೆಕಾಡಿನಲ್ಲಿ ಹುಣಸೂರಿನ ವೆಂಕಟೇಶ್ ಪಾರಿವಾಳ ಹಾರಿಸುತ್ತಿದ್ದಾಗ ಅದನ್ನು ಕಂಡ ಕರ್ತವ್ಯ ನಿರತ ಪೆÇಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಹೇಳಿ ಕೇಳಿ ಇವು ಮೂಕ ಪ್ರಾಣಿಗಳು. ಜೀವ ಜಗತ್ತಿನ 84 ಲಕ್ಷ ಜೀವಿಗಳ ಪೈಕಿ ಮಾತನಾಡುವ ಏಕೈಕ ಜೀವಿ ಮನುಷ್ಯ ತಾನು ಇತರರಿಗೆ ನೀಡಲಾರದ ಆನಂದದ ಅನುಭೂತಿಯನ್ನು ನೀಡುವ ಮೂಕಪ್ರಾಣಿಗಳಲ್ಲಿ ಪಾರಿವಾಳ ಕೂಡ ಒಂದು. ಇದು ನೋಡಲು ಮುದ್ದು ಮುದ್ದಾದ ಸುಂದರ ಪಕ್ಷಿಯಾಗಿದ್ದು, ಇತರ ಪಕ್ಷಿಗಳಿಗೆ ಹೋಲಿಕೆ ಮಾಡಿದಲ್ಲಿ ಈ ಪಾರಿವಾಳ ಮನುಷ್ಯನಿಗೆ ಒಂದಷ್ಟು ಹತ್ತಿರದ ಒಡನಾಟವನ್ನು ನೀಡುವ ಪಕ್ಷಿ. ರಾಜಮಹಾರಾಜರ ಕಾಲದಲ್ಲಿ ಪ್ರಮುಖ ಅಂಚೆಯಣ್ಣನಾಗಿದ್ದ ಈ ಪಾರಿವಾಳ ಕೆಲವರ ಉಸಿರು, ಹಲವರ ಜೀವನ ಹಾಗೂ ಕ್ರೇಜಿಗೂ ಕಾರಣವಾಗಿದೆ.

ರಾಜಮಹಾರಾಜರ ಕಾಲದಿಂದಲೂ ಇಂದಿನ ಆಧುನಿಕ ಕಾಲದವರೆಗೂ ಮನೆ ಮಂದಿಯ ಭಾವನಾತ್ಮಕ ಸಂಬಂಧಗಳೊಂದಿಗೆ ಈ ಪಾರಿವಾಳಗಳನ್ನು ಪ್ರೀತಿಸುವ ಮಂದಿ ನಮ್ಮೊಳಗಿದ್ದಾರೆ ಎಂಬದಕ್ಕೆ ಇಂತಹ ಪ್ರಸಂಗಗಳು ಉದಾಹರಣೆಯಾಗಿವೆ. -ಕೆ.ಎಸ್. ಮೂರ್ತಿ