ಕಣಿವೆ, ಆ. 17: ಹಾರಂಗಿ ಜಲಾಶಯದ ಹಿನ್ನೀರು ಪ್ರದೇಶವಾದ ಗರಗಂದೂರು ಸೇತುವೆ ಬಳಿ ಹಾರಂಗಿ ನದಿಯ ವಿಹಂಗಮ ನೋಟ ನೋಡುಗರಲ್ಲಿ ತನ್ಮಯತೆ ಉಂಟುಮಾಡುತ್ತದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಜಲಾಶಯದ ನೀರು ಖಾಲಿಯಾಗಿದ್ದಾಗ ಕಾಣುವ ಬೋಳು ಪ್ರದೇಶ, ಅದೇ ಮಳೆಗಾಲದಲ್ಲಿ ನೀರನ್ನು ತನ್ನೊಡಲಲ್ಲಿ ಹೊದ್ದು ನಿಂತಾಗ ಹೆದ್ದಾರಿಯಲ್ಲಿ ಸಾಗುವವರಿಗೆ ಕಾಣುವ ಪರಮಾನಂದಕ್ಕೆ ಎಲ್ಲೆಯೇ ಇಲ್ಲ. ಅಷ್ಟರಮಟ್ಟಿಗೆ ಹಾರಂಗಿ ಈಗ ರಂಗು ರಂಗಾಗಿ ಕಂಗೊಳಿಸುತ್ತಿದ್ದಾಳೆ.ಗರಗಂದೂರಿನ ಸೇತುವೆ ಬಳಿ ಒಮ್ಮೆ ನಿಂತು ಹಿನ್ನೀರಿನಲ್ಲಿ ಹರಿದು ಬರುವ ನೀರನ್ನು ಒಮ್ಮೆ ಗಮನಿಸಿದರೆ ಅಲ್ಲೊಂದು ವಿಸ್ಮಯ ಒಡಮೂಡಿ ಸಾಗಿದೆ. ಅಂದರೆ ಕೋಟೆಬೆಟ್ಟದ ಕಡೆಯಿಂದ ಹಾರಂಗಿಗೆ ಹರಿದು ಬರುವ ನೀರು ಶುಭ್ರವಾಗಿ ಕಂಗೊಳಿಸಿದರೆ, ಇತ್ತ ಮುಕ್ಕೋಡ್ಲು ಹಟ್ಟಿ ಹೊಳೆ ಪ್ರದೇಶದಿಂದ ಹರಿದು ಬರುವ ನೀರು ಒಂದಷ್ಟು ಕೆಮ್ಮಣ್ಣಿನ ಬಣ್ಣದಲ್ಲಿ ಕಾಣಿಸುತ್ತದೆ.ಈ ಎರಡು ಬಣ್ಣಗಳ ನದಿ ಹಾರಂಗಿಯಲ್ಲಿ ಮಿಳಿತಗೊಂಡು ರಂಗು ರಂಗಾಗಿ ನೋಡುಗರನ್ನು ಆಕರ್ಷಿಸುತ್ತದೆ. ಕಳೆದ ಎರಡು ವರ್ಷಗಳ ಹಿಂದೆ ಮುಕ್ಕೋಡ್ಲು ಭಾಗದಲ್ಲಿ ಜಾರಿದ ಬೆಟ್ಟ ಗುಡ್ಡಗಳಿಂದ ಹರಿದ ನೀರು ಸಾಕಷ್ಟು ಕೆಂಪು ಮಣ್ಣನ್ನು ಹೊತ್ತು ಜಲಾಶಯಕ್ಕೆ ತಂದಿತ್ತು. ಹಿನ್ನೀರಿನ ನದಿ ಹರಿವಿನ ಜಾಗದಲ್ಲಿ ಉಳಿದ ಅದೇ ಕೆಂಪು ಮಣ್ಣು ಈಗಲೂ ಕೂಡ ನೀರಿನೊಂದಿಗೆ ಹರಿಯುತ್ತಿದೆ. -ಮೂರ್ತಿ