ಮಡಿಕೇರಿ, ಆ. 17: ಕಳೆದ ಬಾರಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡ ಕುಟುಂಬವೊಂದು ಇದುವರೆಗೂ ಯಾವುದೇ ಆರ್ಥಿಕ ನೆರವು ಸಿಗದೆ ಸಂಕಷ್ಟಕ್ಕೆ ಸಿಲುಕಿದೆ. ಸೋಮವಾರಪೇಟೆ ತಾಲೂಕಿನ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾನಗಲ್ಲು ಬಾಣೆಯ ಭವಾನಿ ರಮೇಶ್ ಎಂಬವರ ಮನೆ ಕಳೆದ ಬಾರಿ ಮಳೆಗೆ ಕುಸಿದು ಬಿದ್ದಿದ್ದು, ಆ ಕುಟುಂಬಕ್ಕೆ ಇಲ್ಲಿಯವರೆಗೆ ಬಾಡಿಗೆ ಹಣವಾಗಲಿ, ಮನೆಯಾಗಲಿ ಸರ್ಕಾರದಿಂದ ಸಿಕ್ಕಿಲ್ಲ. ಈ ಬಗ್ಗೆ ವಿಚಾರಿಸಿದರೆ ಮನೆಗೆ ಹಕ್ಕು ಪತ್ರ ಇಲ್ಲದ ಕಾರಣ ಬಾಡಿಗೆ ಹಣ ನೀಡಲು ಸಾಧ್ಯವಿಲ್ಲ ಎಂದು ಹಾನಗಲ್ಲು ಗ್ರಾಮ ಲೆಕ್ಕಾಧಿಕಾರಿ ಹೇಮಾವತಿ ಆ ಕುಟುಂಬಕ್ಕೆ ತಿಳಿಸಿದ್ದಾರೆ.
ಈ ನಡುವೆ ಕುಸಿದು ಬಿದ್ದಿರುವ ಮನೆಗೆ ವಿದ್ಯುತ್ ಇಲಾಖೆಯಿಂದ 668 ರೂ. ವಿದ್ಯುತ್ ಬಿಲ್ ಕೂಡ ನೀಡಲಾಗಿದೆ. 28.12.2017ರಲ್ಲಿ ಹಾನಗಲ್ಲು ಪಂಚಾಯಿತಿಯಿಂದ ಮನೆ ನಿರ್ಮಿಸಿಕೊಡುವ ಪಟ್ಟಿಗೆ ಭವಾನಿ ರಮೇಶ್ ಕುಟುಂಬದ ಹೆಸರನ್ನು ಸೇರಿಸುವುದಕ್ಕಾಗಿ ಬಾಕಿಯಿದ್ದ ಕಂದಾಯ ಶುಲ್ಕ 2373ರೂ.ಗಳನ್ನು ಕೂಡ ಕಟ್ಟಿಸಿಕೊಳ್ಳಲಾಗಿತ್ತಾದರೂ, ಅದಾದ ಬಳಿಕ ಕಳೆದ ಬಾರಿಯ ಮಳೆಗೆ ಮನೆ ನೆಲಸಮವಾಗಿದ್ದರೂ, ಇದುವರೆಗೆ ಯಾವುದೇ ಸಹಾಯ ಈ ಕುಟುಂಬಕ್ಕೆ ದೊರೆತಿಲ್ಲ. ಇಬ್ಬರು ಪುಟ್ಟ ಮಕ್ಕಳನ್ನು ಹೊಂದಿರುವ ಈ ದಂಪತಿ ಕೂಲಿಕಾರ್ಮಿಕರಾಗಿದ್ದು, ಕೊರೊನಾ, ಅತಿವೃಷ್ಟಿ ಹಿನ್ನೆಲೆ ಸರಿಯಾದ ಕೆಲಸವೂ ಇಲ್ಲದೆ ತೀವ್ರ ತೊಂದರೆಗೆ ಸಿಲುಕಿದ್ದು, ಗ್ರಾ.ಪಂ., ತಾ.ಪಂ.ಗಳಿಗೆ ಅಲೆದು ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಇದೀಗ ದಾನಿಗಳ ನೆರವಿಗಾಗಿ ‘ಶಕ್ತಿ’ ಮೂಲಕ ಮನವಿ ಮಾಡಿದ್ದಾರೆ. ಈ ಕುಟುಂಬಕ್ಕೆ ನೆರವು ನೀಡಲಿಚ್ಚಿಸುವವರು ಕರ್ನಾಟಕ ಗ್ರಾಮೀಣ ಬ್ಯಾಂಕ್ ಖಾತೆ ಸಂಖ್ಯೆ 12293100006653 ಐ.ಎಫ್.ಎಸ್.ಸಿ. Pಏಉಃ0012293 ಖಾತೆಗೆ ನೆರವು ನೀಡಬಹುದು. ಭವಾನಿ ರಮೇಶ್ ದೂರವಾಣಿ: 7619270406