ಕಣಿವೆ, ಆ. 16 : ಏಳನೇ ಹೊಸಕೋಟೆ ಬಳಿಯ ಕಲ್ಲೂರಿನಲ್ಲಿ ಭಾನುವಾರ ಬೆಳ್ಳಂ ಬೆಳಗ್ಗೆ ಆಟೋ ಒಂದರ ಮೇಲೆ ಧಾಳಿ ಮಾಡಿದ ಕಾಡಾನೆ, ಆಟೋ ಚಾಲಕನನ್ನು ತುಳಿದು ಗಾಯಗೊಳಿಸಿದ ಘಟನೆ ಜರುಗಿದೆ.
ಕಲ್ಲೂರಿನಿಂದ ಸುಂಟಿಕೊಪ್ಪಕ್ಕೆ ಇಬ್ಬರು ತಾಯಿ ಮಗಳಾದ ಗೌರಮ್ಮ ಮತ್ತು ಸುಮ ಎಂಬಿಬ್ಬರನ್ನು ಕರೆದುಕೊಂಡು ಹೋಗುತ್ತಿದ್ದಾಗ ಎದುರು ಪ್ರತ್ಯಕ್ಷಗೊಂಡ ಕಾಡಾನೆಯನ್ನು ಕಂಡ ಚಾಲಕ ಆಟೋ ಬಾಬು ಓಡಿ ಹೋಗಲು ಯತ್ನಿಸಿದಾಗ ಬೆನ್ನತ್ತಿದ ಕಾಡಾನೆ ತುಳಿದು ಗಾಯಪಡಿಸಿದೆ. ಇತ್ತ ಆಟೋದಲ್ಲಿದ್ದ ತಾಯಿ ಮತ್ತು ಮಗಳು ಆಟೋ ಜಿಗಿದು ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ.
ಬಳಿಕ ಗ್ರಾಮಸ್ಥರೆಲ್ಲಾ ಸೇರಿ ಆಟೋ ಬಾಬುವನ್ನು ಉಪಚರಿಸಿ ಸುಂಟಿಕೊಪ್ಪ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಕಾಡಾನೆ ಹಾವಳಿ ಮಿತಿ ಮೀರಿರುವ ಕಲ್ಲೂರು ಗ್ರಾಮದಲ್ಲಿ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.