ಸುಂಟಿಕೊಪ್ಪ, ಆ. 16: ಹೆರೂರು ಗ್ರಾಮದ ಸುತ್ತಮುತ್ತಲಿನ ತೋಟಗಳಿಗೆ ನುಗ್ಗಿದ ಆನೆಗಳು ಅಪಾರ ಪ್ರಮಾಣದಲ್ಲಿ ಬೆಳೆಗಳನ್ನು ನಾಶಪಡಿಸಿದೆ. ಗ್ರಾಮದ ಸುಜಾತ ಡಿ.ಎಲ್. ಎಂಬವರ ತೋಟದಲ್ಲಿ ಬೆಳೆಸಲಾದ ಕೃಷಿ ಫಸಲುಗಳನ್ನು ಕಾಡಾನೆಗಳು ತಿಂದು, ಕಾಫಿ ಗಿಡಗಳನ್ನು ತುಳಿದು ನಾಶಪಡಿಸಿವೆ. ಕಳೆದ ಒಂದು ವಾರದಿಂದ ಹೆರೂರುವಿನಲ್ಲಿ ನಿರಂತರವಾಗಿ ಕಾಡಾನೆಗಳು ತೋಟಗಳಲ್ಲಿ ಬೀಡುಬಿಟ್ಟಿದ್ದು, ಕಾಫಿ ತೋಟ ಹಾಗೂ ಕೃಷಿ ಜಮೀನುಗಳಲ್ಲಿ ಬೆಳೆಸಲಾದ ಕೃಷಿ ಫಸಲುಗಳನ್ನು ತಿಂದು ಧ್ವಂಸಗೊಳಿಸುತ್ತಿವೆ. ಅರಣ್ಯ ಇಲಾಖೆಯವರು ಕಾಡಾನೆಗಳನ್ನು ಕಾಡಿಗೆ ಅಟ್ಟಲು ಕೂಡಲೇ ಮುಂದಾಗುವಂತೆ ಹೆರೂರು ಗ್ರಾಮಸ್ಥ ಚಂದ್ರಶೇಖರ್ ಹಾಗೂ ಈ ಭಾಗದ ಕೃಷಿಕರು ಒತ್ತಾಯಿಸಿದ್ದಾರೆ.