ಗೋಣಿಕೊಪ್ಪಲು, ಆ. 15 : ಬಾಳೆ ಹಣ್ಣು ತುಂಬಿಸಿದ್ದ ಕ್ಯಾಂಟರ್ ವಾಹನದಲ್ಲಿ ಬೀಟೆಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ವೇಳೆ ಆರೋಪಿಯೊಬ್ಬನನ್ನು ಆನೆಚೌಕೂರು ಅರಣ್ಯ ರಕ್ಷಕರು ಬಂಧಿಸಿ ಮಾಲು ಸಹಿತ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ವೀರಾಜಪೇಟೆ ನೆಹರು ನಗರದ ಅಬ್ದುಲ್ ಕಲಾಮ್ ಆಜಾದ್ ಬಂಧಿತ ಆರೋಪಿ.

ಬೀಟೆಮರದ ದಿಮ್ಮಿಗಳನ್ನು ತುಂಬಿಸಿಕೊಂಡು ಅದರ ಮೇಲೆ ಬಾಳೆಹಣ್ಣಿನ ಗೊನೆಗಳನ್ನು ಹಾಕಿ ಬಾಳೆಲೆ ಎಲೆ ಮತ್ತು ತರಗಿನಿಂದ ಮರೆಮಾಚಿದ್ದ ಎನ್ನಲಾಗಿದೆ. ಗೋಣಿಕೊಪ್ಪಲು ಕಡೆಯಿಂದ ಹುಣಸೂರಿನ ಕಡೆಗೆ ಹೋಗಲು ಮಧ್ಯರಾತ್ರಿ 12 ಗಂಟೆ ವೇಳೆಯಲ್ಲಿ ಆನೆಚೌಕೂರು ಗೇಟ್ ಬಳಿ ಬಂದ ವಾಹನವನ್ನು ಅರಣ್ಯ ರಕ್ಷಕ ಬಿ.ಎಂ. ಅಯ್ಯಪ್ಪ ಎಂದಿನಂತೆ ತಪಾಸಣೆ ನಡೆಸಿದ್ದಾರೆ. ಈ ವೇಳೆಯಲ್ಲಿ 16 ಬೀಟೆ ಮರದ ದಿಮ್ಮಿಗಳು ಗೋಚರಿಸಿವೆ.

ಕಾರ್ಯಾಚರಣೆಯಲ್ಲಿ ಮತ್ತಿಗೋಡು ವಲಯ ಅರಣ್ಯಾಧಿಕಾರಿ ವೈ.ಕೆ.ಕಿರಣ್ ಕುಮಾರ್, ಉಪ ವಲಯ ಅರಣ್ಯಾಧಿಕಾರಿ ಜಿ.ರಂಜನ್, ಅರಣ್ಯ ರಕ್ಷಕರಾದ ದುರ್ಗಪ್ಪ ಮಾದಿಹಳ್ಳಿ, ರವಿ ತಾರಿಹಳ್ಳಿ, ವಾಹನ ಚಾಲಕ ಸೆಲ್ವಿನ್ ಇದ್ದರು.